ಉತ್ತರ ಪ್ರದೇಶ, ಡಿ. 27 : ಬದೌನ್ ಜಿಲ್ಲೆಯಲ್ಲಿ ರಕ್ಷಣ ಕಾರ್ಯಾಚರಣೆಯ ವೇಳೆ ಅರಣ್ಯ ಇಲಾಖೆ ಅಧಿಕಾರಿಯೊಬ್ಬರ ಮೇಲೆ ಕಾಡುಹಂದಿಯೊಂದು ದಾಳಿ ಮಾಡಿದೆ. ಅರಣ್ಯಾಧಿಕಾರಿಯವರ ಮೇಲೆ ಎರಗಿದ ಕಾಡು ಹಂದಿ ದಾಳಿ ಮಾಡಲು ಆರಂಭಿಸಿತ್ತು, ಈ ವೇಳೆ ಸಹ ಅಧಿಕಾರಿಗಳಿಬ್ಬರು ತೋರಿದ ಧೈರ್ಯಕ್ಕೆ ಹೆಚ್ಚಿನ ಅಪಾಯ ತಪ್ಪಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ
ಬದೌನ್‌ನ ಸಿರ್ಸೌಲಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಕಾಡುಹಂದಿಗಳಿಂದ ವ್ಯಾಪಕ ಬೆಳೆ ಹಾನಿಯಾಗಿರುವ ದೂರುಗಳ ಹಿನ್ನೆಲೆಯಲ್ಲಿ ಅರಣ್ಯ ಅಧಿಕಾರಿಗಳ ತಂಡ ರಕ್ಷಣಾ ಕಾರ್ಯಾಚರಣೆಗಾಗಿ ಪ್ರದೇಶಕ್ಕೆ ಭೇಟಿ ನೀಡಿತ್ತು. ಅಧಿಕಾರಿಗಳು ಬಲೆ ಬಳಸಿ ಹಂದಿಯನ್ನು ಸುತ್ತುವರಿಯಲು ಪ್ರಯತ್ನಿಸಿದಾಗ, ಕಾಡು ಹಂದಿ ಇದ್ದಕ್ಕಿದ್ದಂತೆ ಅರಣ್ಯ ಅಧಿಕಾರಿ ಸುಭಮ್ ಪ್ರತಾಪ್ ಸಿಂಗ್ ಮೇಲೆ ದಾಳಿ ಮಾಡಿ ನೆಲಕ್ಕೆ ಬೀಳಿಸಿದೆ.
ಕಾಡುಹಂದಿ ಸಿಂಗ್ ಅವರನ್ನು ಕೆಡವಿ ಎಳೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು, ಆದರೆ ಸ್ಥಳದಲ್ಲಿದ್ದ ಇನ್ನಿಬ್ಬರು ಅಧಿಕಾರಿಗಳು ದಾಳಿ ಮಾಡಿದ ವನ್ಯಜೀವಿಗೆ ನಿರಂತರವಾಗಿ ಕೋಲುಗಳಿಂದ ಹೊಡೆದು ತಮ್ಮ ಸಹೋದ್ಯೋಗಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎರಡು ನಿಮಿಷಗಳ ಕಾಳಗದ ನಂತರ ಅಂತಿಮವಾಗಿ ಸಿಂಗ್ ಪಾರಾಗಿದ್ದಾರೆ. ಸಿಂಗ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

