ಮೂಡುಬಿದಿರೆ : ಕೋಟಿ- ಚೆನ್ನಯ ಜೋಡುಕರೆ ಕಂಬಳ ಪ್ಲಾಸ್ಟಿಕ್ ಮುಕ್ತ ಕಂಬಳ – ಹೀಗೊಂದು ಪರಿಸರ ಜಾಗೃತಿ

ಮೂಡುಬಿದಿರೆ, ಜ. 29 : ಮೂಡುಬಿದಿರೆಯ ಕೋಟಿ- ಚೆನ್ನಯ ಜೋಡುಕರೆ ಕಂಬಳವು ಜನವರಿ 31 ಮತ್ತು ಫೆ. 1ರಂದು ನಡೆಯಲಿದೆ. ಈ ಕಂಬಳವನ್ನು ಶೂನ್ಯ ತ್ಯಾಜ್ಯ, ಪ್ಲಾಸ್ಟಿಕ್ ಮುಕ್ತವಾಗಿ ನಡೆಸಲು ಮೂಡುಬಿದಿರೆ ಪುರಸಭೆ ಪಣ ತೊಟ್ಟಿದ್ದು, ಇದಕ್ಕೆ ಹಲವಾರು ಸರಕಾರೇತರ ಸಂಘಟನೆಗಳು, ಶಿಕ್ಷಣ ಸಂಸ್ಥೆಗಳು ಕೈಜೋಡಿಸಿವೆ. 2022-23ನೇ ಸಾಲಿನಿಂದಲೇ ಈ ಪ್ರಯತ್ನಗಳು ಗಂಭೀರವಾಗಿ ನಡೆಯುತ್ತಿದ್ದು, ಈ ಬಾರಿ ಇನ್ನಷ್ಟು ಸಂಘಟನೆಗಳು ಕೈಜೋಡಿಸುವ ಮೂಲಕ ಸಂಪೂರ್ಣ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿವೆ.
ಮೂಡುಬಿದಿರೆ ಕಂಬಳ ಕರಾವಳಿಯ ಪ್ರತಿಷ್ಠಿತ ಕಂಬಳಗಳಲ್ಲಿ ಒಂದಾಗಿದ್ದು, ಲಕ್ಷಾಂತರ ಮಂದಿ ಭಾಗವಹಿಸುತ್ತಾರೆ. ಆ ಸಂದರ್ಭದಲ್ಲಿ ಭಾರಿ ಪ್ರಮಾಣದಲ್ಲಿ ತ್ಯಾಜ್ಯ ಸೃಷ್ಟಿಯಾಗುವುದು ಸಾಮಾನ್ಯ. ಆದರೆ, ಈ ತ್ಯಾಜ್ಯ ಒಂದೋ ಮರುಬಳಕೆಗೆ ಅನುಕೂಲವಾಗಿರಬೇಕು. ಪ್ಲಾಸ್ಟಿಕ್ ಮೊದಲಾದ ಮಣ್ಣಿಗೆ ಹಾನಿಯಾಗುವ ವಸ್ತು ಗಳನ್ನು ಬಳಕೆ ಮಾಡಬಾರದು ಎಂಬ ಎಚ್ಚರದೊಂದಿಗೆ ಪುರಸಭೆ ಕಾರ್ಯಪ್ರವೃತ್ತವಾಗಿದೆ.

Advertisement

ಮೂಡುಬಿದಿರೆ ಪುರಸಭೆಯ ಪರಿಸರ ಎಂಜಿನಿಯರ್ ಶಿಲ್ಪಾ ಎಸ್. ಅವರು ತ್ಯಾಜ್ಯ ಮುಕ್ತ ಕಂಬಳದ ನಿಟ್ಟಿನಲ್ಲಿ ತೀವ್ರ ಪ್ರಯತ್ನಗಳನ್ನು ಮಾಡುತ್ತಿದ್ದು, ಸಾರ್ವಜನಿಕರಲ್ಲೂ ವಿನಂತಿಯನ್ನು ಮಾಡಿಕೊಳ್ಳುತ್ತಿದ್ದಾರೆ. ಎಲ್ಲರೂ ತ್ಯಾಜ್ಯ ಮುಕ್ತ ಕಾರ್ಯಕ್ರಮಕ್ಕೆ ಸಹಕರಿಸಿ. ಮನೆಯಿಂದ ಬರುವಾಗ ಬಟ್ಟೆ ಚೀಲ ಹಿಡಿದುಕೊಂಡು ಬನ್ನಿ, ನೀರಿನ ಬಾಟಲಿಯನ್ನು ಮನೆಯಿಂದಲೇ ತನ್ನಿ. ಸಾಧ್ಯವಾದಷ್ಟು ಮಟ್ಟಿಗೆ ಏಕಬಳಕೆ ಪ್ಲಾಸ್ಟಿಕ್ ಬಳಸಬೇಡಿ. ಅದರ ಬದಲು ಮಣ್ಣಿನಲ್ಲಿ ಕರಗುವ ಚೀಲಗಳನ್ನು ಬಳಸಿ. ಜ್ಯೂಸ್, ಚರುಮುರಿ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕಪ್, ಚಮಚ ಬದಲು ಪೇಪರ್ ಗ್ಲಾಸ್, ಮರದ ಚಮಚ ಬಳಸಿ ಎಂದು ಅವರು ಮನವಿ ಮಾಡಿದ್ದಾರೆ. ಪುರಸಭೆಯು ಕಂಬಳದಲ್ಲಿ ಅಂಗಡಿ ಹಾಕಲು ಬರುವ ವ್ಯಾಪಾರಿಗಳಿಗೂ ಸ್ಪಷ್ಟ ಸೂಚನೆಯನ್ನು ನೀಡಿದೆ. ಬಳಸಿ ಎಸೆಯುವ ಪ್ಲಾಸ್ಟಿಕ್‌ಗಳನ್ನು ಜನರ ಕೈಗೆ ನೀಡದಂತೆ ಸೂಚಿಸಿದೆ. ಕಂಬಳದಂಥ ದೊಡ್ಡ ಕಾರ್ಯಕ್ರಮಗಳಲ್ಲಿ ನೀರಿನ ಬಾಟಲಿಗಳು ಅತ್ಯಧಿಕ ಸಂಖ್ಯೆಯಲ್ಲಿ ಬಳಕೆಯಾಗುತ್ತವೆ. ಇದನ್ನು ಸಾಧ್ಯವಾದಷ್ಟು ಮಟ್ಟಿಗೆ ಕಡಿಮೆ ಮಾಡುವುದಕ್ಕಾಗಿ ನೀರಿನ ಕಿಯೋಸ್ಟ್ ಸ್ಥಾಪಿಸಲಾಗುತ್ತಿದೆ. ಇದರಿಂದಾಗಿ ಮನೆಯಿಂದ ಬಾಟಲಿ ತಂದವರು ಹೊಸ ನೀರಿನ ಬಾಟಲಿ ಕೊಳ್ಳುವ ಬದಲು ಇಲ್ಲಿಂದ ನೀರು ತುಂಬಿಸಿಕೊಳ್ಳಬಹುದಾಗಿದೆ.

ಪುರಸಭೆಯ ಈ ವಿಶಿಷ್ಟ ಪ್ರಯತ್ನಕ್ಕೆ ಮೂಡುಬಿದಿರೆಯ ರೋಟರಿ ಕ್ಲಬ್, ನೇತಾಜಿ ಬ್ರಿಗೇಡ್, ನಾಗರಿಕ ಸ್ವಯಂಸೇವಕರು, ಸ್ವಚ್ಛತಾ ರಾಯಭಾರಿಗಳು, ಸಿಡಿಸಿ ಇಂಡಿಯಾ, ಸಾಹಸ್ ಎನ್‌ಜಿಒ ಸಹಕಾರ ನೀಡುತ್ತಿವೆ. ಇಲ್ಲಿನ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಸ್ವಯಂಸೇವಕರಾಗಿ ಕಳುಹಿಸಿಕೊಡುತ್ತಿವೆ. ಕಂಬಳದಲ್ಲಿ ತ್ಯಾಜ್ಯ ಮುಕ್ತ ಆದೇಶವನ್ನು ಕೊಡುವಲ್ಲಿಗೆ ಪುರಸಭೆ ಸೀಮಿತವಾಗಿಲ್ಲ. ತ್ಯಾಜ್ಯ ನಿರ್ವಹಣೆಯ ಸರಿಯಾದ ಪದ್ಧತಿಗಳನ್ನು ಜನರಿಗೆ ತಿಳಿಸುವ ಸ್ಟಾಲ್‌ಗಳನ್ನು ಕೂಡಾ ಕಂಬಳದಲ್ಲಿ ಸ್ಥಾಪಿಸಲಿದೆ. ಜತೆಗೆ ತ್ಯಾಜ್ಯದಿಂದ ಮಾಡಿದ ಗೊಬ್ಬರಗಳ ಮಾರಾಟಕ್ಕೂ ಅವಕಾಶ ಮಾಡಿದೆ. ಇದರ ಜತೆಗೆ ಒಣತ್ಯಾಜ್ಯವನ್ನು ಪ್ರತ್ಯೇಕಿಸುವುದು, ಮಳೆ ನೀರು ಕೊಯ್ಲಿನ ಪ್ರಾತ್ಯಕ್ಷಿಕೆಯನ್ನು ಕೂಡಾ ಆಯೋಜಿಸಿದೆ. ಮನೆಯಲ್ಲಿ ತ್ಯಾಜ್ಯದಿಂದ ಕಾಂಪೋಸ್ಟ್ ಮಾಡುವ ವಿಧಾನಗಳ ಬಗ್ಗೆಯೂ ವಿವರ ನೀಡುವ ಸ್ಟಾಲ್‌ಗಳು ಇರಲಿವೆ.

ಕಂಬಳಕ್ಕೆ ಬರುವ ಎಳೆಯರಲ್ಲಿ ಪರಿಸರದ ಕಾಳಜಿಯನ್ನು ಹೆಚ್ಚಿಸುವುದಕ್ಕಾಗಿ ಪುರಸಭೆಯು ಮಕ್ಕಳಿಗಾಗಿ ವಿಶೇಷ ಚಟುವಟಿಕೆಗಳನ್ನು ಆಯೋಜಿಸಿದೆ. ಹಾವು ಏಣಿ ಆಟದ ಥೀಮ್ ಬಳಸಿಕೊಂಡು ತ್ಯಾಜ್ಯ ನಿರ್ವಹಣೆಯ ಪಾಠವನ್ನು ಇಲ್ಲಿ ಆಕರ್ಷಕವಾಗಿ ಮಾಡಲು ಯೋಜಿಸಲಾಗಿದೆ. ಇದು ಮುಂದಿನ ದಿನಗಳಲ್ಲಿ ನಗರದಲ್ಲಿ ತ್ಯಾಜ್ಯ ನಿರ್ವಹಣೆಗೆ ಹೆಚ್ಚಿನ ಬಲವನ್ನು ಕೊಡಲಿದೆ ಎಂಬುದು ಪರಿಸರ ಎಂಜಿನಿಯರ್ ಶಿಲ್ಪಾ ಎಸ್. ಅವರ ನಂಬಿಕೆ.

ಯಾವುದೇ ಕಾರಣಕ್ಕೂ ಬಳಸಿ ಎಸೆಯುವ ತಟ್ಟೆ ಪ್ಲೇಟ್‌ಗಳನ್ನು ಬಳಸಬಾರದು. ಅದರ ಬದಲು ಬಾಳೆ ಎಲೆ, ಬಾದಾಮಿ ಎಲೆಗಳನ್ನು ಬಳಸುವಂತೆ ಹೋಟೆಲ್, ಅಂಗಡಿ ಇಡುವವರಿಗೆ ಸೂಚಿಸಲಾಗಿದೆ. ಊಟ, ತಿಂಡಿಯನ್ನು ಸ್ಟೀಲ್ ಪ್ಲೇಟ್ ಇಲ್ಲವೇ ಬಾಳೆ ಎಲೆಯಲ್ಲಿ ನೀಡುವಂತೆ ಸೂಚಿಸಲಾಗಿದೆ. ಚರುಮುರಿ ಅಂಗಡಿಗಳು, ಹಣ್ಣುಗಳ ಮಾರಾಟದಲ್ಲೂ ಬಳಸಿ ಎಸೆಯುವ ಪ್ಲಾಸ್ಟಿಕ್ ಬಳಸದಂತೆ ಸೂಚಿಸಲಾಗಿದೆ.

ಇಡೀ ಕಂಬಳ ಕ್ರೀಡಾಂಗಣವನ್ನು ಪ್ಲಾಸ್ಟಿಕ್ ಮುಕ್ತ ವಲಯ ಎಂದು ಘೋಷಿಸಲಾಗುತ್ತಿದ್ದು, ಅಲ್ಲಲ್ಲಿ ಈ ಬಗ್ಗೆ ಎಚ್ಚರಿಕೆ ಮತ್ತು ಮಾಹಿತಿ ಫಲಕಗಳನ್ನು ಹಾಕಲಾಗುತ್ತದೆ. ಕಂಬಳದ ಎಲ್ಲ ಕಡೆಗಳಲ್ಲೂ, ರಸ್ತೆಗಳಲ್ಲೂ ಅಲ್ಲಲ್ಲಿ ತ್ಯಾಜ್ಯ ಹಾಕುವ ಬಿನ್‌ಗಳನ್ನು ಇಡಲಾಗುತ್ತಿದ್ದು, ಕಸವನ್ನು ಅಲ್ಲೇ ಹಾಕಬೇಕು ಎಂದು ಮನವಿ ಮಾಡಲಾಗುತ್ತದೆ. ಹಿರಿಯ ಆರೋಗ್ಯಾಧಿಕಾರಿಗಳನ್ನು ಒಳಗೊಂಡ ತಂಡವೊಂದರ ನೇತೃತ್ವದಲ್ಲಿ ಪ್ಲಾಸ್ಟಿಕ್ ಮುಕ್ತ ವಲಯ ಮತ್ತು ಕಸವನ್ನು ತೊಟ್ಟಿಗೇ ಹಾಕುವುದರ ಮೇಲೆ ನಿಗಾ ಇಡಲಿದೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ತಾಲೂಕು, ಮಂಗಳೂರು

ಮಂಗಳೂರು : ಲೈಟ್ ಕಂಬ ಮುರಿದು ಮೈಮೇಲೆ ಬಿದ್ದು ಮೀನು ಕಾರ್ಮಿಕ ಸಾವು

ಟಾಪ್ ಸುದ್ದಿಗಳು, ರಾಜ್ಯ / ದೇಶ

ಕಲ್ಲಂಗಡಿ, ಐಸ್ ಕ್ರೀಂ ತಿನ್ನುವ ಮುನ್ನ ಹುಷಾರ್‌ – ಆರೋಗ್ಯ ಇಲಾಖೆ ಎಚ್ಚರಿಕೆ !

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಉಜಿರೆ : ಮಾರ್ಚ್ 3ರಿಂದ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ, ವಿಜಯಗೋಪುರ ಲೋಕಾರ್ಪಣೆ, ನೂತನಬ್ರಹ್ಮರಥ, ಪುಷ್ಪರಥ ಸಮರ್ಪಣೆ – ಶ್ರೀ ಶರತ್ ಕೃಷ್ಣಪಡ್ವೆಟ್ನಾಯ

⚠️ Contents are protected on this website.