ಮಂಗಳೂರು, ಜ. 05 : ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮತ್ತು ದಕ್ಷಿಣ ಕನ್ನಡ (ಡಿಕೆ) ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಡಾ. ಅರುಣ್ ಅವರ ಹೆಸರು ಕೇಳಿದರೆ ಸಾಕು ಕಾನೂನು ವಿರೋಧಿಗಳ ಎದೆ ನಡುಗುತ್ತಿದೆ. ಅವರೀರ್ವರ ಕಟ್ಟು ನಿಟ್ಟಿನ ಕಾನೂನಿಗೆ ತಲೆಬಾಗದೇ ಇರುವವರು ಯಾರೂ ಇಲ್ಲ. ಕಳೆದ 6 ತಿಂಗಳಿನಿಂದ ದಕ್ಷಿಣ ಕನ್ನಡ ಜಿಲ್ಲೆ ಬಹಳ ಶಾಂತಿಯುತವಾಗಿದೆ. ಪುಡಿ ರೌಡಿಗಳು, ನೈತಿಕ್ ಪೊಲೀಸ್ ಗಿರಿ ಅಟ್ಟಹಾಸ ಕೊನೆಯಾಗಿದೆ, ಕೋಮು ಸಂಘರ್ಷಗಳು ಮರೆಯಾಗಿದೆ, ಕಾನೂನು ಪಾಲಿಸದೇ ಇದ್ದವರ ಹೆಡೆಮುರಿ ಕಟ್ಟಲಾಗಿದೆ. ಜನಸಾಮಾನ್ಯರು ನಿಶ್ಚಿಂತೆಯಿಂದ ಬದುಕುತ್ತಿರುವಾಗಲೇ, ಅಂತಹ ದಕ್ಷ ಅಧಿಕಾರಿಗಳ ವರ್ಗಾವಣೆಗೆ ಬೆಟ್ಟಿಂಗ್ ಸಿಂಡಿಕೇಟ್‌ಗಳು, ಮಾಫಿಯಾ ಜಾಲಗಳು ಮತ್ತು ಕೆಲವು ರಾಜಕೀಯ ನಾಯಕರು ಒತ್ತಡ ಹೇರುತ್ತಿದ್ದಾರೆ ಎಂಬ ಆಘಾತಕಾರಿ ಅಂಶ ವರದಿಯಾಗಿದೆ.
ಮಂಗಳೂರು ಕಮಿಷನರೇಟ್ ವ್ಯಾಪ್ತಿ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಗಲಭೆ ಅಥವಾ ಕೋಮು ಗಲಭೆಗಳು ನಡೆದಿಲ್ಲ. ಮರಳು ಗಣಿಗಾರಿಕೆ, ಕೆಂಪು ಕಲ್ಲು ಸಾಗಣೆ, ಮಟ್ಕಾ ಮತ್ತು ಜೂಜಾಟದ ಅಡ್ಡೆಗಳಂತಹ ಕಾನೂನುಬಾಹಿರ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಿಗ್ರಹಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪರಾಧ, ಗಲಭೆ, ಪುಡಿರೌಡಿಗಳ ಅಟ್ಟಹಾಸ ಹೀಗೆ ಎಲ್ಲವನ್ನೂ ಸ್ವಚ್ಛ ಮಾಡಿ, ಖಾಕಿ ಪಡೆಯ ಬಗ್ಗೆ ಹೆಚ್ಚಿನ ಗೌರವ ಮೂಡುವಂತೆ ಮಾಡಿದ್ದು ದಕ್ಷ ಅಧಿಕಾರಿಗಳಾದ ಸುಧೀರ್ ಕುಮಾರ್ ರೆಡ್ಡಿ ಮತ್ತು ಡಾ.ಅರುಣ್. ಇದೀಗ, ಈ ಅಧಿಕಾರಿಗಳನ್ನು ಅಕ್ರಮ, ಅನೈತಿಕ ಚಟುವಟಿಕೆಗಳನ್ನು ನಡೆಸಲಾಗದೆ ಸೋತು ಹೋಗಿರುವ ಮಾಫಿಯಾಗಳು, ಕೆಲವೊಂದು ಉದ್ಯಮಿಗಳು ಚಡಪಡಿಸುತ್ತಿದ್ದಾರೆ. ತಮ್ಮ ಕಾನೂನು ಬಾಹಿರ ಚಟುವಟಿಕೆಗಳು ನಡೆಯದೇ, ಕಂಗೆಟ್ಟಿರುವ ಇವರುಗಳು ಈ ಇಬ್ಬರು ಅಧಿಕಾರಿಗಳನ್ನು ವರ್ಗಾವಣೆಗೊಳಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಈ ಮಾಫಿಯಾಗಳ ಹಿಂದೆ ಕೆಲವು ರಾಜಕೀಯ ನಾಯಕರ ಹಸ್ತಕ್ಷೇಪವೂ ಇದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ರಾಜ್ಯದ ಆಡಳಿತ ಪಕ್ಷವಾದ ಕಾಂಗ್ರೆಸ್ ನ ಕೆಲ ನಾಯಕರೂ ಕೂಡಾ ಈ ಅಧಿಕಾರಿಗಳ ವರ್ಗಾವಣೆಗೆ ಸಾಥ್ ನೀಡುತ್ತಿದ್ದಾರೆಂಬ ಅಂಶವೂ ಬಹಿರಂಗವಾಗಿದೆ. ಈ ನಾಯಕರುಗಳು ಇಬ್ಬರು ಅಧಿಕಾರಿಗಳನ್ನು ಹೇಗಾದರೂ ಎತ್ತಂಗಡಿ ಮಾಡಿಸಿ, ತಮ್ಮ ಅಕ್ರಮಗಳನ್ನು ಮುಂದುವರಿಸಲು ಹಿರಿಯ ನಾಯಕರ ಹಿಂದೆ ಬಿದ್ದಿದ್ದಾರಂತೆ !. ಜಿಲ್ಲೆಯ ಶಾಂತಿಗೆ ಮಾರಕವಾಗಿದ್ದೇ ಇಲ್ಲಿನ ಅಕ್ರಮ ಮರಳುಗಾರಿಕೆ ಇರಬಹುದು ಅಥವಾ ಗಣಿಗಾರಿಕೆಗಳು, ರಾತ್ರಿ ಹೊತ್ತು ಕಾನೂನು ಬಾಹಿರವಾಗಿ ಕಾರ್ಯಾಚರಿಸುವ ಪಬ್ ಗಳು, ಡ್ರಗ್ಸ್ ದಂಧೆ, ಇಸ್ಪಿಟ್ ಅಡ್ಡೆಗಳು. ಇದನ್ನು ಅರಿತಂತಹ ಖಾಕಿ ಪಡೆ ಕೆಲವು ಕಡೆಗಳಲ್ಲಿ ಸಿನಿಮೀಯ ಶೈಲಿಯಲ್ಲಿ ಕಾರ್ಯಾಚರಣೆಗಳನ್ನು ನಡೆಸಿ, ಅಕ್ರಮಗಳ ಸೊಂಟ ಮುರಿದಿದ್ದರು. ಇದರ ನೇರ ಹೊಡೆತ ಬಿದ್ದಿದ್ದೇ ಕೆಲವು ಸ್ಥಳೀಯ ಜನಪ್ರತಿನಿಧಿಗಳಿಗೆ. ಇದರಿಂದ ವಿಚಲಿತಗೊಂಡಿರುವ ನಾಯಕರು ದಕ್ಷ ಅಧಿಕಾರಿಗಳ ಎತ್ತಂಗಡಿಗೆ ಹಲವು ರೀತಿಯಲ್ಲಿ ಹೆಣಗಾಡುತ್ತಿದ್ದಾರೆ.
ಡಿಸೆಂಬರ್ ಪಟ್ಟಿಯಲ್ಲೂ ಈ ಇಬ್ಬರು ಅಧಿಕಾರಿಗಳ ಹೆಸರಿಲ್ಲ !
ಸಾಮಾನ್ಯವಾಗಿ ಐಪಿಎಸ್, ಐಎಎಸ್ ದರ್ಜೆ ಅಧಿ ಕಾರಿಗಳನ್ನು ಡಿಸೆಂಬರ್ ನಲ್ಲಿ ಸಾಮೂಹಿಕ ವರ್ಗಾವಣೆ ಮಾಡಲಾಗುತ್ತದೆ. ಹೀಗಾಗಿ ಡಿಸೆಂಬರ್ ವರೆಗೆ ಅಕ್ರಮದ ರೂವಾರಿಗಳು, ಕೆಲವೊಂದು ಹಿರಿಯ ನಾಯಕರ ಭರವಸೆಯ ಮಾತುಗಳನ್ನು ನಂಬಿ ಕಾದು ಕುಳಿತ್ತಿದ್ದರು. ಆದರೆ, ಡಿಸೆಂಬರ್ ನಲ್ಲಿ ಬಂದಂತಹ ಪಟ್ಟಿಯಲ್ಲಿ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮತ್ತು ದಕ್ಷಿಣ ಕನ್ನಡ (ಡಿಕೆ) ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಡಾ. ಅರುಣ್ ಅವರ ಹೆಸರೇ ಇರಲಿಲ್ಲ. ನಿರಾಸೆಗೊಂಡಂತಹ ಮಾಫಿಯಾ ಕುಳಗಳು ಅಲ್ಲಿಂದ ಮತ್ತೆ ಕಸರತ್ತು ನಡೆಸಲು ಆರಂಭಿಸಿದ್ದಾರೆ. ಇನ್ನೂ ಈ ಅಧಿಕಾರಿಗಳು ಇಲ್ಲೇ ಮುಂದುವರೆದರೆ ತಮ್ಮ ಅಕ್ರಮಗಳು ಮಣ್ಣು ಪಾಲಾಗುವುದು ಎಂದರಿತಿರುವ ಮಾಫಿಯಾಗಳು ಇಬ್ಬರು ಅಧಿಕಾರಿಗಳ ಎತ್ತಂಗಡಿಗೆ ಹೊಂಚು ಹಾಕುತ್ತಿದ್ದಾರೆ. ಸುಧೀರ್ ಕುಮಾರ್ ರೆಡ್ಡಿ ಅವರಿಗೆ 2028ರ ಜನವರಿ ಪದೋನ್ನತಿ ವರ್ಷವಾಗಿದೆ. ಆದರೆ, ಇಲ್ಲಿ ಅಕ್ರಮ ಕುಳಗಳು, ರಾಜಕೀಯ ನಾಯಕರು ಎಷ್ಟೇ ಪ್ರಯತ್ನ ಪಡುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು, ಹಲವು ಸ್ಥಳೀಯ ರಾಜಕೀಯ ನಾಯಕರು ಸೇರಿದಂತೆ ಕೆಲವೊಂದು ಹಿರಿಯ ನಾಯಕರು ಈ ವರ್ಗಾವಣೆಗೆ ಒಪ್ಪಿಗೆ ನೀಡುತ್ತಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ. ರಾಜ್ಯ ಗೃಹ ಇಲಾಖೆಯಲ್ಲಿ ಪಶ್ಚಿಮ(ಮಂಗಳೂರು ಕಮಿಷನರೇಟ್ ಸೇರಿದಂತೆ) ಐಜಿಪಿ ವಲಯ ಸೂಕ್ಷ್ಮ ವಲಯವಾಗಿದ್ದು, ಈ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿದೆ. ಈ ಕಾರಣದಿಂದ ಯಾವುದೇ ಅಧಿಕಾರಿಗಳನ್ನು ಸದ್ಯದ ಮಟ್ಟಿಗೆ ವರ್ಗಾವಣೆ ಮಾಡದಿರಲು ಸಿಎಂ, ಡಿಜಿ ಸೇರಿದಂತೆ ಹಿರಿಯ ನಾಯಕರು, ಅಧಿಕಾರಿಗಳು ನಿರ್ಧರಿಸಿದ್ದಾರೆಂದು ಮೂಲಗಳು ತಿಳಿಸಿವೆ.

