ಧಾರವಾಡ, ಜೂ. 17 : ಕರ್ನಾಟಕ ವಿಶ್ವವಿದ್ಯಾಲಯದ (Karnatata University) ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ದೇವರಾಜನ್ ತಂಗುದೊರೈ (Devarajan Thangudorai) ವಿರುದ್ಧ ವಿದ್ಯಾರ್ಥಿನಿಯೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯ ಆಡಳಿತ ಮಹತ್ವದ ಕ್ರಮ ಕೈಗೊಂಡಿದ್ದು, ಅವರನ್ನು ಸೇವೆಯಿಂದ ಅಮಾನತುಗೊಳಿಸಿದೆ.
ಈ ಕ್ರಮಕ್ಕೆ ಮುನ್ನ ಎಬಿವಿಪಿ (ABVP) ಕಾರ್ಯಕರ್ತರು ವಿಶ್ವವಿದ್ಯಾಲಯದ ಆಡಳಿತ ಕಚೇರಿ ಎದುರು ತೀವ್ರ ಪ್ರತಿಭಟನೆ ನಡೆಸಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು. ಆರೋಪಗಳ ಪ್ರಕಾರ, ಪ್ರೊ. ತಂಗುದೊರೈ ತಮ್ಮ ಬಳಿ ಪಿಹೆಚ್‌ಡಿ ಮಾಡಲು ಬಂದಿದ್ದ ವಿದ್ಯಾರ್ಥಿನಿಯೊಂದಿಗೆ ವೈಯಕ್ತಿಕ ಹಾಗೂ ದೈಹಿಕ ಸಂಬಂಧ ಹೊಂದಿದ್ದರು. ಈ ಸಂಬಂಧದ ಕೆಲವು ಫೋಟೋಗಳನ್ನು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದರು. ಬಳಿಕ ವಿದ್ಯಾರ್ಥಿನಿ ಅಧ್ಯಯನವನ್ನು ಮಧ್ಯದಲ್ಲೇ ಬಿಟ್ಟು ತೆರಳಿದ ನಂತರವೂ ಆಕೆಯನ್ನು ಮರಳಿ ಕರೆಸುವಂತೆ ಇತರ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರಲಾಗುತ್ತಿತ್ತು.
ಈ ವಿಚಾರ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದರೂ ವಿಶ್ವವಿದ್ಯಾಲಯ ಆಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಬುಧವಾರ ಭಾರೀ ಪ್ರತಿಭಟನೆ ನಡೆಸಿದರು. ಆಡಳಿತ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು ಹೂವಿನ ಕುಂಡಲಿಗಳನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದರು.


