ಬೆಂಗಳೂರು : 2025 ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟ್ರೋಫಿಯನ್ನು ಗೆದ್ದುಕೊಂಡ ಆರ್ ಸಿಬಿಯ ಸಂಭ್ರಮ ಕಾಲ್ತುಳಿತ ದುರಂತದಿಂದಾಗಿ ಮರುದಿನವೇ ಮಣ್ಣುಪಾಲಾಗಿತ್ತು. ಆರ್ ಸಿಬಿ ವಿಜಯೋತ್ಸವದ ಕಾಲ್ತುಳಿತ ದುರಂತ ಬಹಳಷ್ಟು ಬದಲಾವಣೆಗಳಿಗೆ ಕಾರಣವಾಯಿತು, ಭದ್ರತೆ ಮತ್ತು ಸುರಕ್ಷತೆಯ ಕಾರಣ ನೀಡಿ ಮಹತ್ವದ ಮಹಿಳಾ ವಿಶ್ವಕಪ್ ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಿಂದ ನವಿಮುಂಬೈಗೆ ಸ್ಥಳಾಂತರವಾದವು. ಸದ್ಯಕ್ಕೆ ಯಾವುದೇ ಮಹತ್ವದ ಪಂದ್ಯಗಳು ಇಲ್ಲಿ ನಡೆಯಲು ಬಿಸಿಸಿಐ ಕ್ಲೀನ್ ಚಿಟ್ ನೀಡಿಲ್ಲ. ಇದೀಗ ಐಪಿಎಲ್ ನ ಮುಂದಿನ ಆವೃತ್ತಿಯ ಪಂದ್ಯಗಳೂ ನಡೆಯುವ ಸಾಧ್ಯತೆ ತುಂಬಾ ಕಡಿಮೆ ಎನ್ನಲಾಗುತ್ತಿದೆ. ಹೀಗಾದಲ್ಲಿ ಆರ್ ಸಿಬಿಯು ಇದೀಗ ಹೊಸ ಕ್ರೀಡಾಂಗಣವನ್ನು ಹುಡುಕಬೇಕಾಗುತ್ತದೆ. ಆರ್ ಸಿಬಿಯ ತವರು ಮೈದಾನ ಕರ್ನಾಟಕದಿಂದಲೇ ಹೊರಗಡೆ ಸ್ಥಳಾಂತರ ಆಗುವ ಎಲ್ಲಾ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಈ ವರ್ಷ ಜೂನ್‌ನಲ್ಲಿ RCB ಗೆಲುವಿನ ಮೆರವಣಿಗೆ ವೇಳೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ದುರಂತದಲ್ಲಿ 11ಕ್ಕೂ ಹೆಚ್ಚು ಮಂದಿ ಮೃತಪಟ್ಟು ಅನೇಕ ಮಂದಿ ಗಾಯಗೊಂಡಿದ್ದರು. ಈ ಘಟನೆ ಬಳಿಕ ಯಾವುದೇ ಕಾರ್ಯಕ್ರಮ ನಡೆಸಲು ಈ ಕ್ರೀಡಾಂಗಣ ಅಸುರಕ್ಷಿತ ಎಂದು ಘೋಷಿಸಲಾಗಿದೆ. ಹೀಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದೊಡ್ಡ ಮಟ್ಟದ ಪಂದ್ಯಗಳನ್ನು ಆಡಿಸಲು ಅನುಮತಿ ಇಲ್ಲ. ಚಿನ್ನಸ್ನಾಮಿಯನ್ನು ಹೊರತುಪಡಿಸಿದರೆ ಸಕಲ ವ್ಯವಸ್ಥೆ ಇರುವ ಮತ್ತೊಂದು ಕ್ರಿಕೆಟ್ ಕ್ರೀಡಾಂಗಣ ಬೆಂಗಳೂರು ಸೇರಿದಂತೆ ಇಡೀ ಕರ್ನಾಟಕದಲ್ಲೇ ಮತ್ತೆಲ್ಲೂ ಇಲ್ಲ. ಹೀಗಾಗಿ ಆರ್ ಸಿಬಿ ತನ್ನ ತವರು ಕ್ರೀಡಾಂಗಣವನ್ನು ಬದಲಾಯಿಸುವ ಅನಿವಾರ್ಯತೆಗೆ ಸಿಲುಕಿದೆ ಎಂದು ಹೇಳಲಾಗುತ್ತಿದೆ. ಇನ್ನು, ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, RCB ತಮ್ಮ ಎಲ್ಲಾ ‘ತವರು’ ಪಂದ್ಯಗಳನ್ನು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ (MCA) ಕ್ರೀಡಾಂಗಣದಲ್ಲಿ ಆಡಬೇಕಾಗಬಹುದು ಎಂದು ಹೇಳಲಾಗುತ್ತಿದೆ. “ಪುಣೆಯಲ್ಲಿ RCB ಪಂದ್ಯಗಳನ್ನು ಆಯೋಜಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ, ಆದರೆ ಇದು ಇನ್ನೂ ಖಚಿತವಾಗಿಲ್ಲ. ಬೆಂಗಳೂರಿನಲ್ಲಿ ನಡೆದ ದುರಂತದ ಕಾರಣದಿಂದಾಗಿ ಅಲ್ಲಿ ಪಂದ್ಯಗಳನ್ನು ಆಯೋಜಿಸಲು ಸಮಸ್ಯೆ ಎದುರಾಗಿದೆ. ಆದ್ದರಿಂದ, ಅವರು ಬೇರೆ ಕ್ರೀಡಾಂಗಣ ಹುಡುಕುತ್ತಿದ್ದಾರೆ. ನಮ್ಮ ಕ್ರೀಡಾಂಗಣವನ್ನು ಒದಗಿಸಲು ನಾವು ಮುಂದೆ ಬಂದಿದ್ದೇವೆ. ಪ್ರಾಥಮಿಕ ಚರ್ಚೆಗಳು ನಡೆದಿವೆ. ಕೆಲವು ತಾಂತ್ರಿಕ ವಿಷಯಗಳನ್ನು ಪರಿಹರಿಸಬೇಕಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಪುಣೆ RCBಯ ಪಂದ್ಯಗಳನ್ನು ಆಯೋಜಿಸಬಹುದು,” ಎಂದು MCA ಕಾರ್ಯದರ್ಶಿ ಕಮಲೇಶ್ ಪೈ ಅವರು ಮಹತ್ವದ ಮಾಹಿತಿ ನೀಡಿದ್ದಾರೆ.
ಈ ಹಿಂದೆ ನಾನಾ ಕಾರಣಗಳಿಗಾಗಿ ದಿಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಮ್ಮ ತವರು ನೆಲವನ್ನು ತಾತ್ಕಾಲಿಕವಾಗಿ ಬದಲಾಯಿಸಿಕೊಂಡಿತ್ತು. ಇನ್ನು 2009ರಲ್ಲಿ ರಾಜಕೀಯ ಕಾರಣಗಳಿಗಾಗಿ ಇಡೀ ಟೂರ್ನಿಯೇ ದಕ್ಷಿಣ ಆಫ್ರಿಕಾಗೆ ಸ್ಥಳಾಂತರಗೊಂಡಿತ್ತು. 2022ರಲ್ಲಿ ಕೋವಿಡ್ ಕಾರಣಗಳಿಗಾಗಿ ಸ್ಥಳಾಂತರವಾಗಿತ್ತು. ಆಗ ಆರ್ ಸಿಬಿ ಸೇರಿದಂತೆ ಎಲ್ಲಾ ತಂಡಗಳೂ ತಮ್ಮ ತವರು ಕ್ರೀಡಾಂಗಣವನ್ನು ತೊರೆಯಬೇಕಾದ ಅನಿವಾರ್ಯತೆ ಎದುರಾಗಿದ್ದವು. ಅವೆರಡು ನಿದರ್ಶನಗಳನ್ನು ಹೊರತುಪಡಿಸಿದರೆ ಐಪಿಎಲ್ ನಲ್ಲಿ ರೀತಿ ಬೇರೆಡೆ ಆಡಿದ ಉದಾಹರಣೆಯಿಲ್ಲ.

