ಮಂಡ್ಯ, ಜೂ. 30 : ಹೇಮಾವತಿ ನಾಲೆ ನಿರ್ಮಾಣಕ್ಕಾಗಿ ಭೂಸ್ವಾಧೀನಪಡಿಸಿಕೊಂಡ ರೈತರ ಜಮೀನಿಗೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ರೈತರು ನಗರದ ಭೂಸ್ವಾಧೀನಾಧಿಕಾರಿ ಕಚೇರಿಯ ಕಂಪ್ಯೂಟರ್ ಮತ್ತು ಪೀಠೋಪಕರಣಗಳನ್ನು ಜಪ್ತಿ ಮಾಡಿದ ಘಟನೆ ಸೋಮವಾರ ನಡೆಯಿತು.
ಸೋಮವಾರ ಸಂಜೆ ಜಿಲ್ಲಾಧಿಕಾರಿ ಕಚೇರಿಗೆ ನ್ಯಾಯಾಲಯದ ಆದೇಶದೊಂದಿಗೆ ಆಗಮಿಸಿದ ನ್ಯಾಯಾಲಯದ ಅಮೀನರು, ವಕೀಲರು ಹಾಗೂ ಭೂಮಿ ಕಳೆದುಕೊಂಡ ರೈತರು, ಭೂಸ್ವಾಧೀನಾಧಿಕಾರಿ ಕಚೇರಿಯಲ್ಲಿದ್ದ ಕುರ್ಚಿ, ಚೇರು, ಟೇಬಲ್, ಬೀರು, ಕಂಪ್ಯೂಟರ್ ಸೇರಿದಂತೆ ನಾನಾ ಪೀಠೋಪಕರಣಗಳನ್ನು ವಶಕ್ಕೆ ಪಡೆದುಕೊಂಡರು.
ಕಳೆದ 15 ವರ್ಷಗಳ ಹಿಂದೆ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಹೋಬಳಿಯ ಹೇಮಾವತಿ ನಾಲೆ ಅಭಿವೃದ್ಧಿಗಾಗಿ ಹೊಸಹೊಳಲು, ಮತ್ತೀಕೆರೆ, ಚಿಕ್ಕಾಡಿನಹಳ್ಳಿ, ಅಳಿಯೂರು, ಬಿ.ಬಾಚಹಳ್ಳಿ ಗ್ರಾಮಗಳ ಸುಮಾರು 40 ಮಂದಿ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಅದರಂತೆ ರೈತರಿಗೆ ಮೊದಲ ಕಂತು ಪರಿಹಾರ ನೀಡಲಾಗಿತ್ತು. ಆದರೆ, ಹೆಚ್ಚುವರಿ ಪರಿಹಾರ ನೀಡುವಂತೆ ರೈತರು ಬೇಡಿಕೆ ಇಟ್ಟಿದ್ದರು. ಆದಾಗ್ಯೂ ಈವರೆಗೂ ಪರಿಹಾರ ನೀಡಿಲ್ಲ. ಇದರಿಂದ ಬೇಸತ್ತ ರೈತರು ಹೆಚ್ಚುವರಿ ಪರಿಹಾರಕ್ಕಾಗಿ ಮಂಡ್ಯ ನಗರದ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಹೆಚ್ಚುವರಿ ಪರಿಹಾರ ನೀಡುವಂತೆ ಭೂಸ್ವಾಧೀನಾಧಿಕಾರಿಗಳಿಗೆ ಆದೇಶ ನೀಡಿತ್ತು. ಆದರೂ ಪರಿಹಾರ ನೀಡಿರಲಿಲ್ಲ.
ಕಳೆದ 2024ರಲ್ಲಿಯೇ ಜಿಲ್ಲಾಧಿಕಾರಿ ಕಚೇರಿ ಜಪ್ತಿಗೆ ಆದೇಶ ನೀಡಿತ್ತು. ಅದರಂತೆ ರೈತರು ಜಿಲ್ಲಾಧಿಕಾರಿ ಕಚೇರಿಗೆ ಹಲವಾರು ಬಾರಿ ಅಲೆದಾಡಿ ಪರಿಹಾರ ನೀಡುವಂತೆ ಭೂಸ್ವಾಧೀನಾಧಿಕಾರಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕೇಳಿಕೊಂಡರೂ ಹಣವಿಲ್ಲ ಎಂದು ಸಬೂಬು ಹೇಳುತ್ತಾ ಬಂದಿದ್ದರು.
ಇದರಿಂದ ರೋಸಿಹೋದ ರೈತರು ಸೋಮವಾರ ಸಂಜೆ ನ್ಯಾಯಾಲಯದಿಂದ ಪಡೆದ ಜಪ್ತಿ ಆದೇಶ ಪ್ರತಿಯೊಂದಿಗೆ ನ್ಯಾಯಾಲಯದ ಅಮೀನರು ಹಾಗೂ ವಕೀಲರೊಂದಿಗೆ ಆಗಮಿಸಿ ಜಿಲ್ಲಾಧಿಕಾರಿ ಕಚೇರಿಯ ಸಂಕೀರ್ಣದಲ್ಲಿನ ಭೂಸ್ವಾಧೀನಾಧಿಕಾರಿ ಕಚೇರಿಯ ಎಲ್ಲ ಪೀಠೋಪಕರಣ ಹಾಗೂ ಕಂಪ್ಯೂಟರ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕೋಟ್ಯಾಂತರ ರೂ. ಪರಿಹಾರ ಬಾಕಿ
ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಹೋಬಳಿಯ ಹೇಮಾವತಿ ನಾಲೆ ಅಭಿವೃದ್ಧಿಗಾಗಿ ಹೊಸಹೊಳಲು, ಮತ್ತೀಕೆರೆ, ಚಿಕ್ಕಗಾಡಿನಹಳ್ಳಿ, ಅಳಿಯೂರು, ಬಿ.ಬಾಚಹಳ್ಳಿ ಗ್ರಾಮಗಳ ಸುಮಾರು 40 ರೈತರಿಂದ ಒಟ್ಟು 10 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಒಂದು, ಎರಡು, ಅರ್ಧ ಎಕರೆ ಸೇರಿದಂತೆ ತುಂಡು ಜಮೀನು ಹೊಂದಿದ್ದ ಒಬ್ಬೊಬ್ಬ ರೈತರಿಂದಲೂ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಎಲ್ಲ ರೈತರಿಗೆ ಅಂದಾಜು 10 ಕೋಟಿ ರೂ. ಹೆಚ್ಚು ಪರಿಹಾರ ನೀಡಬೇಕಾಗಿದೆ. ಒಬ್ಬೊಬ್ಬ ರೈತರಿಗೆ 9 ಲಕ್ಷದಿಂದ 25 ಲಕ್ಷ ರೂ.ವರೆಗೂ ಪರಿಹಾರ ಪಾವತಿಸಬೇಕಾಗಿದೆ ಎನ್ನಲಾಗಿದೆ.


