ಕುಡಿದು ಚಲಾವಣೆ, ಅಪ್ರಾಪ್ತರಿಗೆ ವಾಹನ ನೀಡಿ ಅಪಘಾತವಾದರೆ ನರಹತ್ಯೆ ಕಾಯ್ದೆಯಡಿ 10 ವರ್ಷಗಳವರೆಗೆ ಜೈಲು ಶಿಕ್ಷೆ !!

ಮಂಗಳೂರು, ಜ.27 : ಅಪ್ರಾಪ್ತರಿಂದ ವಾಹನ ಚಾಲನೆ, ಕುಡಿದು ವಾಹನ ಚಲಾಯಿಸಿ ಅಪಘಾತಕ್ಕೆ ಕಾರಣವಾಗಿ ಇನ್ನೊಬ್ಬರ ಪ್ರಾಣಕ್ಕೆ ತೊಂದರೆ ಉಂಟುಮಾಡುವ ಪ್ರಕರಣಗಳಲ್ಲಿ ಇನ್ನು ಮುಂದೆ ಶಿಕ್ಷಾರ್ಹ ನರಹತ್ಯೆ (Culpable Homicide) ಕಾಯ್ದೆಯಡಿ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಎಚ್ಚರಿಸಿದ್ದಾರೆ.

Advertisement

ಅಪ್ರಾಪ್ತರಿಗೆ ವಾಹನ ನೀಡುವುದು ಅಥವಾ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ಕುರಿತು ಸಾಕಷ್ಟು ಜಾಗೃತಿ ಮೂಡಿಸಿದರೂ ನಿಯಮ ಪಾಲನೆ ಆಗುತ್ತಿಲ್ಲ. ಮಂಗಳೂರು ನಗರ ವ್ಯಾಪ್ತಿಯಲ್ಲಿ 2025ನೇ ಸಾಲಿನಲ್ಲಿ ಸಂಭವಿಸಿದ 1,020 ರಸ್ತೆ ಅಪಘಾತಗಳಲ್ಲಿ 171 ಮಂದಿ ಮೃತಪಟ್ಟಿದ್ದು, 25 ಪ್ರಕರಣಗಳಲ್ಲಿ ಅಪ್ರಾಪ್ತರು ವಾಹನ ಚಲಾಯಿಸಿರುವುದು ಪತ್ತೆಯಾಗಿದೆ. ಇನ್ನು ಕೆಲ ಪ್ರಕರಣಗಳಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸಿ ಪ್ರಾಣಹಾನಿ ಸಂಭವಿಸಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಇಂತಹ ಪ್ರಕರಣಗಳಲ್ಲಿ ಕಠಿಣ ಕಾಯ್ದೆ ಜಾರಿಗೆ ತರಲು ಈಗಾಗಲೇ ಸಂಚಾರ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ನಗರದ ಕುದ್ಮುಲ್‌ ರಂಗರಾವ್ ಪುರಭವನದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಪೊಲೀಸ್ ನೇತೃತ್ವದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಂಗಳೂರಿನಲ್ಲಿ ಅಪಘಾತಗಳಿಂದ ಸಂಭವಿಸಿರುವ ಸಾವುಗಳಲ್ಲಿ 169 ಪ್ರಕರಣಗಳು ನಿರ್ಲಕ್ಷ್ಯದಿಂದಾಗಿಯೇ ಸಂಭವಿಸಿರುವುದು ಗಮನಾರ್ಹ. ಒಂದೆರಡು ಸಾವುಗಳು ರಸ್ತೆ ಗುಂಡಿ ಅಥವಾ ಇತರ ತಾಂತ್ರಿಕ ಕಾರಣಗಳಿಂದ ಆಗಿದ್ದರೆ, ಇಂತಹ ಸಂದರ್ಭಗಳಲ್ಲಿ ಸರಕಾರ ಅಥವಾ ಆಡಳಿತವನ್ನು ದೂರಲಾಗುತ್ತದೆ. ಆದರೆ ನಿರ್ಲಕ್ಷ್ಯದಿಂದಾಗುವ ನೂರಾರು ಸಾವುಗಳ ಬಗ್ಗೆ ಯಾರೂ ಮಾತನಾಡುವುದಿಲ್ಲ. ಜಾಗೃತಿಯಿಂದ ವಾಹನ ಚಲಾಯಿಸುವ ಮನೋಭಾವ ಚಾಲಕರಲ್ಲಿ ಇರಬೇಕು ಎಂದು ಅವರು ಹೇಳಿದರು.

ಕೊಲೆ ಪ್ರಕರಣಗಳಿಗೆ ಮತೀಯ ಬಣ್ಣ ನೀಡುವಂತೆ, ಕೆಲ ಸಂದರ್ಭಗಳಲ್ಲಿ ಅಪಘಾತಗಳಿಗೂ ಕೋಮು ಬಣ್ಣ ಹಚ್ಚುವ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಪ್ರಯತ್ನಗಳಿಗೆ ಅವಕಾಶ ನೀಡುವುದಿಲ್ಲ ಎಂದು ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದರು. ಅಪಘಾತಗಳನ್ನು ತಡೆಯುವುದು ಕೇವಲ ಪೊಲೀಸರ ಜವಾಬ್ದಾರಿಯಲ್ಲ, ಪ್ರತಿಯೊಬ್ಬ ನಾಗರಿಕನ ವೈಯಕ್ತಿಕ ಜವಾಬ್ದಾರಿಯೂ ಹೌದು. ‘ನಾನು ಜಾಗೃತಿಯಿಂದ ವಾಹನ ಚಲಾಯಿಸುತ್ತೇನೆ; ಎದುರಿನವ ತಪ್ಪು ಮಾಡಿದರೂ ನನಗೆ ಏನೂ ಆಗದಂತೆ ನಾನು ಎಚ್ಚರಿಕೆಯಿಂದಿರುತ್ತೇನೆ’ ಎಂಬ ಮನೋಭಾವ ಚಾಲಕರಲ್ಲಿ ಇರಬೇಕು. ಇನ್ನೊಬ್ಬರನ್ನು ಪ್ರಶ್ನಿಸುವ ಮೊದಲು ನಾವು ನಮ್ಮನ್ನು ಪ್ರಶ್ನಿಸಿಕೊಳ್ಳಬೇಕು. ಈ ಜಾಗೃತಿ ಮೂಡಿದಾಗ ಅಪಘಾತಗಳೂ, ಇತರೆ ಸಮಸ್ಯೆಗಳೂ ಕಡಿಮೆಯಾಗಲಿವೆ ಎಂದು ಅವರು ಹೇಳಿದರು.

ಈ ವೇಳೆ, ತುಳು ರಂಗಭೂಮಿಯ ಖ್ಯಾತ ನಟ ಹಾಗೂ ಚಲನಚಿತ್ರ ನಿರ್ದೇಶಕ ದೇವದಾಸ್ ಕಾಪಿಕಾಡ್, ಖ್ಯಾತ ನ್ಯೂರೋ ಸರ್ಜನ್ ಡಾ. ಅರ್ಜುನ್ ಶೆಟ್ಟಿ, ಮಂಗಳೂರು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಜೈಬುನ್ನಿಸಾ ರಸ್ತೆ ಸುರಕ್ಷತೆಯ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ನಗರದಲ್ಲಿ ಸಂಭವಿಸಿದ ಅಪಘಾತಗಳ ಭೀಕರತೆಯನ್ನು ವಿವರಿಸುವ ವೀಡಿಯೋ ಪ್ರದರ್ಶನದ ಮೂಲಕ ಜಾಗೃತಿ ಮೂಡಿಸಲಾಯಿತು. ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಮೂಲಕ ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸಲಾಯಿತು.

ಫಲಾಪೇಕ್ಷೆಯಿಲ್ಲದೆ ಟ್ರಾಫಿಕ್ ವಾರ್ಡನ್‌ಗಳಾಗಿ ಸೇವೆ ಸಲ್ಲಿಸುತ್ತಿರುವ ಫ್ರಾನ್ಸಿಸ್ ಮ್ಯಾಕ್ಸಿಂ ಮೊರಾಸ್, ಹಸನ್, ವಾಯ್ಲೆಟ್ ಪಿರೇರಾ, ರೋಶನ್ ರಾಯ್ ಸಿಕ್ಕೇರಾ, ಬೂಬಣ್ಣ ರಮೇಶ್ ಕಾವೂರು, ಬಶೀರ್ ಹಳೆಯಂಗಡಿ ಅವರನ್ನು ಗೌರವಿಸಲಾಯಿತು. ಕರ್ತವ್ಯದ ವೇಳೆ ಅಪಘಾತಕ್ಕೀಡಾದ ವ್ಯಕ್ತಿಯನ್ನು ತನ್ನ ಸ್ಕೂಟಿಯಲ್ಲಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಸಂಚಾರಿ ಪೊಲೀಸ್ ಸಿಬ್ಬಂದಿ ಮನ್ಸಿಜಾ ಬಾನು ಅವರನ್ನು ಅಭಿನಂದಿಸಲಾಯಿತು. ವೇದಿಕೆಯಲ್ಲಿ ಡಿಸಿಪಿಗಳಾದ ಮಿಥುನ್ ಕುಮಾರ್, ಪಿ. ಉಮೇಶ್, ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ, ಎಸಿಪಿಗಳಾದ ಗೀತಾ ಕುಲಕರ್ಣಿ, ವಿಜಯ ಕಾಂತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ತಾಲೂಕು, ಮಂಗಳೂರು

ಮಂಗಳೂರು : ಲೈಟ್ ಕಂಬ ಮುರಿದು ಮೈಮೇಲೆ ಬಿದ್ದು ಮೀನು ಕಾರ್ಮಿಕ ಸಾವು

ಟಾಪ್ ಸುದ್ದಿಗಳು, ರಾಜ್ಯ / ದೇಶ

ಕಲ್ಲಂಗಡಿ, ಐಸ್ ಕ್ರೀಂ ತಿನ್ನುವ ಮುನ್ನ ಹುಷಾರ್‌ – ಆರೋಗ್ಯ ಇಲಾಖೆ ಎಚ್ಚರಿಕೆ !

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಉಜಿರೆ : ಮಾರ್ಚ್ 3ರಿಂದ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ, ವಿಜಯಗೋಪುರ ಲೋಕಾರ್ಪಣೆ, ನೂತನಬ್ರಹ್ಮರಥ, ಪುಷ್ಪರಥ ಸಮರ್ಪಣೆ – ಶ್ರೀ ಶರತ್ ಕೃಷ್ಣಪಡ್ವೆಟ್ನಾಯ

⚠️ Contents are protected on this website.