ಬೆಂಗಳೂರು, ಮಾ. 25 : ಐಪಿಎಲ್ ಇತಿಹಾಸದಲ್ಲೇ ಈ ಬಾರಿ ಐತಿಹಾಸಿಕವಾದ ಅತೀದೊಡ್ಡ ಬೆಳವಣಿಗೆಗೆ ಸಾಕ್ಷಿಯಾಗಿದೆ. ಜಾಗತಿಕ ಕ್ರಿಕೆಟ್‌ನ ಅತ್ಯಂತ ಜನಪ್ರಿಯ ಫ್ರಾಂಚೈಸಿಗಳಲ್ಲಿ ಒಂದಾದ ಆರ್‌ಸಿಬಿ ತಂಡದ ಮಾಲೀಕತ್ವ ಈಗ ಅಧಿಕೃತವಾಗಿ ಬದಲಾಗಿದೆ. ಬರೋಬ್ಬರಿ 16,706 ಕೋಟಿ ರೂ. (1.78 ಬಿಲಿಯನ್ ಡಾಲರ್) ಮೊತ್ತಕ್ಕೆ ಆರ್‌ಸಿಬಿ ತಂಡ ಮಾರಾಟವಾಗಿದೆ.
ಅದರಲ್ಲೂ ಮತ್ತೊಂದು ವಿಶೇಷತೆಯೆಂದರೆ, ಆರ್‌ಸಿಬಿ ತಂಡದ ಹಾಲಿ ನಾಯಕ ರಜತ್ ಪಾಟಿದಾರ್ ಮತ್ತು ಇತ್ತೀಚೆಗೆ 7 ಕೋಟಿ ರೂಪಾಯಿಗೆ ಹರಾಜಾದ ಸ್ಟಾರ್ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಅವರ ಜೊತೆಗೆ, ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದ ಆರ್ಯಮನ್ ಬಿರ್ಲಾ, 2026ರ ಐಪಿಎಲ್ ನಲ್ಲಿ ಆರ್‌ಸಿಬಿ ತಂಡದ ನೂತನ ಚೇರ್‌ಮನ್ ಆಗಿ ನೇಮಕಗೊಂಡಿದ್ದಾರೆ. ಅಂದು ಜೊತೆಯಾಗಿ ಕ್ರಿಕೆಟ್ ಆಡಿದ್ದ ಸ್ನೇಹಿತರು, ಇಂದು ಮಾಲೀಕ ಮತ್ತು ಆಟಗಾರರಾಗಿ ಒಂದೇ ತಂಡದಲ್ಲಿರುವುದು ನಿಜಕ್ಕೂ ಕಾಲದ ಮಹಿಮೆ ಎನ್ನಬಹುದು.
ಇಷ್ಟು ದಿನ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (USL) ಕೈಯಲ್ಲಿದ್ದ ಆರ್‌ಸಿಬಿ ತಂಡದ ಸಂಪೂರ್ಣ ಒಡೆತನ, ಇದೀಗ ಆದಿತ್ಯ ಬಿರ್ಲಾ ಗ್ರೂಪ್ ನೇತೃತ್ವದ ಕನ್ಸೋರ್ಟಿಯಂ ಪಾಲಾಗಿದೆ. ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಡೇವಿಡ್ ಬ್ಲಿಟ್ಜರ್ಸ್ ಬೋಲ್ಟ್ ವೆಂಚರ್ಸ್ ಮತ್ತು ಅಮೆರಿಕ ಮೂಲದ ಬ್ಲಾಕ್‌ಸ್ಟೋನ್ ಇನ್ವೆಸ್ಟ್‌ಮೆಂಟ್ ಗ್ರೂಪ್‌ಗಳನ್ನು ಒಳಗೊಂಡ ಈ ಒಕ್ಕೂಟ, ಪುರುಷರ ಮತ್ತು ಮಹಿಳೆಯರ (WPL) ಎರಡೂ ತಂಡಗಳ ಶೇ. 100ರಷ್ಟು ಪಾಲನ್ನು ಖರೀದಿಸಿದೆ. ಆದಿತ್ಯ ಬಿರ್ಲಾ ಒಕ್ಕೂಟದ ತೆಕ್ಕೆಗೆ ಆರ್‌ಸಿಬಿ ಬಂದಿರುವುದನ್ನು ಕ್ರಿಕೆಟ್ ಜಗತ್ತು ನಿಬ್ಬೆರಗಾಗಿ ನೋಡಿದೆ.
ಈ ಸಾವಿರಾರು ಕೋಟಿಗಳ ಮೆಗಾ ಡೀಲ್‌ನ ನಡುವೆ ಜಗತ್ತಿನ ಗಮನ ಸೆಳೆಯುತ್ತಿರುವುದು ಆರ್‌ಸಿಬಿ ತಂಡದ ನೂತನ ಚೇರ್‌ಮನ್ ಆಗಿ ನೇಮಕಗೊಂಡಿರುವ ಕೇವಲ 28 ವರ್ಷದ ಯುವಕ ಆರ್ಯಮನ್ ಬಿರ್ಲಾ. ಹಿಂದೊಮ್ಮೆ ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ತಂಡದಲ್ಲಿ ಅವಕಾಶ ಸಿಗದೇ ಬೆಂಚ್ ಕಾದಿದ್ದ ಆಟಗಾರ, ಈಗ ಆರ್‌ಸಿಬಿಯಂತಹ ಸ್ಟಾರ್ ತಂಡದ ಮಾಲೀಕನಾಗಿ ವಿಜೃಂಭಿಸುತ್ತಿರುವುದು ನಿಜಕ್ಕೂ ರೋಚಕವಾಗಿದೆ.
ಬಿರ್ಲಾ ಸಾಮ್ರಾಜ್ಯದ ಕುಡಿ :
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ನೂತನ ಚೇರ್‌ಮನ್ ಆಗಿ ನೇಮಕಗೊಂಡಿರುವ ಈ ಯುವಕನ ಹೆಸರು ಆರ್ಯಮನ್ ಬಿರ್ಲಾ. ಈ ಹೆಸರು ಕೇಳಿದ ತಕ್ಷಣ ನಿಮಗೆ ಬಿರ್ಲಾ ಕುಟುಂಬದ ನೆನಪಾಗುವುದು ಸಹಜ. ಹೌದು, ಆರ್ಯಮನ್ ಬೇರಾರೂ ಅಲ್ಲ, ಭಾರತದ ಪ್ರಖ್ಯಾತ ಉದ್ಯಮಿ ಹಾಗೂ ಆದಿತ್ಯ ಬಿರ್ಲಾ ಗ್ರೂಪ್‌ನ ಅಧ್ಯಕ್ಷ ಕುಮಾರ್ ಮಂಗಳಂ ಬಿರ್ಲಾ ಅವರ ಪುತ್ರ. ಆದರೆ, ಆರ್ಯಮನ್ ಕೇವಲ ಒಬ್ಬ ಶ್ರೀಮಂತ ಉದ್ಯಮಿಯ ಮಗನಾಗಿ ಮಾತ್ರ ಗುರುತಿಸಿಕೊಂಡಿಲ್ಲ. ಅವರಿಗೆ ಕ್ರಿಕೆಟ್ ಜಗತ್ತಿನ ಜೊತೆ ಅತ್ಯಂತ ಆಳವಾದ ಹಾಗೂ ಭಾವನಾತ್ಮಕವಾದ ನಂಟಿದೆ. ಎಡಗೈ ಬ್ಯಾಟರ್ ಆಗಿದ್ದ ಆರ್ಯಮನ್, ತಮ್ಮ ಬ್ಯಾಟಿಂಗ್ ಕೌಶಲ್ಯದಿಂದಲೇ ದೇಶೀಯ ಕ್ರಿಕೆಟ್‌ನಲ್ಲಿ ಸದ್ದು ಮಾಡಿದ್ದರು. ಮಧ್ಯಪ್ರದೇಶ ತಂಡದ ಪರವಾಗಿ ದೇಶೀಯ ಕ್ರಿಕೆಟ್ ಆಡುತ್ತಿದ್ದ ಆರ್ಯಮನ್ ಬಿರ್ಲಾ, 9 ಪ್ರಥಮ ದರ್ಜೆ ಪಂದ್ಯಗಳಲ್ಲಿ 414 ರನ್ ಬಾರಿಸಿದ್ದಾರೆ. ಪ್ರತಿಷ್ಠಿತ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಆರ್ಯಮನ್ ಬಿರ್ಲಾ ಅವರು, ಪಶ್ಚಿಮ ಬಂಗಾಳದ ವಿರುದ್ಧ ಆಕರ್ಷಕ ಶತಕ ಕೂಡ ಬಾರಿಸಿದ್ದರು. ಕೇವಲ ಪ್ರಥಮ ದರ್ಜೆ ಕ್ರಿಕೆಟ್ ಮಾತ್ರವಲ್ಲದೇ, 4 ಲಿಸ್ಟ್-ಎ ಪಂದ್ಯಗಳಲ್ಲೂ ಅವರು ತಮ್ಮ ಪ್ರತಿಭೆ ಮೆರೆದಿದ್ದಾರೆ.

