ಇರಾನ್‌ನಲ್ಲಿ ಹಾರಿತು ಕೆಂಪು ಧ್ವಜ – ಭಾರಿ ಪ್ರತಿದಾಳಿಯ ಎಚ್ಚರಿಕೆ, ಸೇಡು ತೀರಿಸುವ ಸಂಕಲ್ಪ !

ಟೆಹ್ರಾನ್, ಮಾ. 02 : ಅಮೇರಿಕಾ ಮತ್ತು ಇಸ್ರೇಲ್ ಜಂಟಿ ದಾಳಿಯ ಬಳಿಕ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತಾರಕಕ್ಕೇರಿದೆ. ಇರಾನ್ ಪ್ರತಿದಾಳಿಗಳನ್ನು ತೀವ್ರಗೊಳಿಸಿದ್ದು, ಇಸ್ರೇಲ್ ಜೊತೆಗೆ ಇತರೆ ಮುಸ್ಲಿಂ ರಾಷ್ಟ್ರಗಳಲ್ಲಿರುವ ಅಮೆರಿಕದ ಸೈನಿಕ ನೆಲೆಗಳನ್ನು ಗುರಿಯಾಗಿಸಿಕೊಂಡಿದೆ. ಈ ನಡುವೆ ಇರಾನ್ ತನ್ನ ಪ್ರಮುಖ ಶಿಯಾ ಪವಿತ್ರ ಸ್ಥಳವಾದ ಜಮ್ಕರನ್ ಮಸೀದಿಯ ಮೇಲೆ ಕೆಂಪು ಬಾವುಟ ಹಾರಿಸಿ ಕಠಿಣ ಪ್ರತೀಕಾರದ ಸುಳಿವು ನೀಡಿದೆ.

Advertisement

ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿದ್ದಾರೆ ಎಂದು ಇರಾನ್ ಅಧಿಕೃತವಾಗಿ ಘೋಷಿಸಿದೆ. ಈ ಘಟನೆ ದೇಶದೊಳಗೆ ಪ್ರತಿಕಾರದ ಕಿಚ್ಚು ಹೊತ್ತಿಸಿದೆ. ಶಿಯಾ ಸಂಪ್ರದಾಯದಲ್ಲಿ ಕೆಂಪು ಧ್ವಜವು ಅನ್ಯಾಯವಾಗಿ ಚೆಲ್ಲಿದ ರಕ್ತದ ಸಂಕೇತವಾಗಿದ್ದು, ಸೇಡು ತೀರಿಸುವ ಸಂಕಲ್ಪದ ಸೂಚಕವಾಗಿದೆ.

ರಾಜಧಾನಿ ಟೆಹ್ರಾನ್ ಸೇರಿದಂತೆ ಹಲವು ನಗರಗಳಲ್ಲಿ ಕೆಂಪು ಧ್ವಜ ಹಾರಿಸಲಾಗಿದೆ. “ನಮ್ಮ ನಾಯಕನ ಹತ್ಯೆ ಮಹಾ ಅಪರಾಧ. ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡುತ್ತೇವೆ,” ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಹೇಳಿದ್ದಾರೆ. ಇರಾನ್ ಅಮೆರಿಕದ ಏರ್‌ಕ್ರಾಫ್ಟ್ ಕ್ಯಾರಿಯರ್ USS ಅಬ್ರಹಾಂ ಲಿಂಕನ್ ಮೇಲೆ ನಾಲ್ಕು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದೆ ಎಂದು ವರದಿಯಾಗಿದೆ. ಇಸ್ರೇಲ್‌ನ ಬೀಟ್ ಶೆಮೆಶ್ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇರಾನ್ ಹೇಳುವಂತೆ, ತನ್ನ ದಾಳಿಗಳು ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಸೈನಿಕ ನೆಲೆಗಳನ್ನು ಮಾತ್ರ ಗುರಿಯಾಗಿಸಿಕೊಂಡಿವೆ. ವಿಶೇಷವಾಗಿ ಇರಾಕ್, ಕುವೈತ್, ಕತಾರ್, ಬಹ್ರೇನ್ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿರುವ ಅಮೆರಿಕದ ನೆಲೆಗಳು ಟಾರ್ಗೆಟ್ ಎಂದು ಸ್ಪಷ್ಟಪಡಿಸಿದೆ. ಭಾನುವಾರ ನಡೆದ ದಾಳಿಗಳಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಯುಎಇ ರಕ್ಷಣಾ ಸಚಿವಾಲಯದ ಪ್ರಕಾರ, ಇರಾನ್‌ನಿಂದ ಹಾರಿಸಲಾದ 165 ಬ್ಯಾಲಿಸ್ಟಿಕ್ ಕ್ಷಿಪಣಿಗಳ ಪೈಕಿ 152 ಅನ್ನು ನಾಶಪಡಿಸಲಾಗಿದೆ. ಎರಡು ಕ್ರೂಸ್ ಕ್ಷಿಪಣಿಗಳನ್ನು ತಡೆಹಿಡಿಯಲಾಗಿದೆ. ಒಟ್ಟು 541 ಡ್ರೋನ್‌ಗಳಲ್ಲಿ 506 ಅನ್ನು ಪತ್ತೆಹಚ್ಚಿ ಹೊಡೆದುರುಳಿಸಲಾಗಿದೆ ಎಂದು ತಿಳಿಸಿದೆ.

ಬಹ್ರೇನ್‌ನ ರಾಜಧಾನಿ ಮನಾಮಾದಲ್ಲಿರುವ ಕ್ರೌನ್ ಪ್ಲಾಜಾ ಹೋಟೆಲ್ ಮೇಲೆ ನಡೆದ ದಾಳಿಯಿಂದ ಕಟ್ಟಡಕ್ಕೆ ಹಾನಿಯಾಗಿದೆ. ಆದರೆ ಜೀವಹಾನಿ ಸಂಭವಿಸಿಲ್ಲ. ಇದಕ್ಕೂ ಮುನ್ನ ಅಮೆರಿಕ ನೌಕಾಪಡೆಯ 5ನೇ ಫ್ಲೀಟ್ ಪ್ರಧಾನ ಕಚೇರಿಯನ್ನೂ ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಲಾಗಿತ್ತು. ‘ಆಪರೇಷನ್ ಎಪಿಕ್ ಫ್ಯೂರಿ’ ಕಾರ್ಯಾಚರಣೆಯಲ್ಲಿ ಮೂವರು ಅಮೆರಿಕ ಸೈನಿಕರು ಸಾವನ್ನಪ್ಪಿದ್ದು, ಐದು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಮೆರಿಕ ತಿಳಿಸಿದೆ. ಸಣ್ಣಪುಟ್ಟ ಗಾಯಗೊಂಡ ಹಲವರು ಶೀಘ್ರವೇ ಕರ್ತವ್ಯಕ್ಕೆ ಮರಳಲಿದ್ದಾರೆ ಎಂದು ಹೇಳಲಾಗಿದೆ.

ಸುಪ್ರೀಂ ನಾಯಕ ಖಮೇನಿ ನಿಧನದ ಬಳಿಕ ಗಾರ್ಡಿಯನ್ ಕೌನ್ಸಿಲ್‌ನ ಧರ್ಮಗುರು ಅಲಿರೆಝಾ ಅರಾಫಿ ಅವರನ್ನು ತಾತ್ಕಾಲಿಕ ನಾಯಕತ್ವ ಮಂಡಳಿಗೆ ನೇಮಿಸಲಾಗಿದೆ. ಹೊಸ ಸರ್ವೋಚ್ಚ ನಾಯಕನ ಆಯ್ಕೆ ಆಗುವವರೆಗೆ ಈ ಮಂಡಳಿ ಸಂವಿಧಾನಾತ್ಮಕ ಕರ್ತವ್ಯಗಳನ್ನು ನಿರ್ವಹಿಸಲಿದೆ. ಇದೇ ವೇಳೆ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ಗೆ ಹೊಸ ಮುಖ್ಯ ಕಮಾಂಡರ್ ಆಗಿ ಬ್ರಿಗೇಡಿಯರ್ ಜನರಲ್ ಅಹ್ಮದ್ ವಹಿದಿಯನ್ನು ನೇಮಿಸಲಾಗಿದೆ. ಒಂದು ಅಥವಾ ಎರಡು ದಿನಗಳಲ್ಲಿ ಹೊಸ ಸರ್ವೋಚ್ಚ ನಾಯಕನ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಇರಾನ್ ವಿದೇಶಾಂಗ ಸಚಿವರು ತಿಳಿಸಿದ್ದಾರೆ.

ಒಟ್ಟಾರೆ, ಸೇಡಿನ ಜ್ವಾಲೆಯಲ್ಲಿ ಕುದಿಯುತ್ತಿರುವ ಇರಾನ್ ಭಾರಿ ಪ್ರತೀಕಾರಕ್ಕೆ ಸಜ್ಜಾಗಿದ್ದು, ಅಮೆರಿಕ ಮತ್ತು ಇಸ್ರೇಲ್‌ಗೆ ತೀವ್ರ ತಿರುಗೇಟು ನೀಡುವ ಸೂಚನೆ ನೀಡಿದೆ. ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಅತ್ಯಂತ ಗಂಭೀರ ಹಂತ ತಲುಪಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಮೋದಿ ಪೋಸ್ಟ್ ನಿರ್ಬಂಧ – ಕ್ಷಮೆಯಾಚಿಸಿದ ಟೆಕ್‌ ದೈತ್ಯ ಮೆಟಾ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಹೊಸದೆಹಲಿ : ಸಿಜೆಪಿ ಪ್ರತಿಭಟನೆಯಲ್ಲಿ 2,873 ಅಪರಾಧಿಗಳು – ಫೋಕ್ಸೋ, ಕೊಲೆ ಅಪರಾಧಿಗಳು ಭಾಗಿ !!

ಟಾಪ್ ಸುದ್ದಿಗಳು

ಕೋಝಿಕೋಡ್ : ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನಗಳ ಲೀಡರ್ ಗಳಿಂದಲೇ ಮಕ್ಕಳಿಗೆ ಡ್ರಗ್ಸ್ ಸಪ್ಲೈ !!

⚠️ Contents are protected on this website.