ಸಜೀಪಮೂಡ : ಗ್ರಾಮದ ಮಿತ್ತಮಜಲು ಸಂಕೇಶ ಎಂಬಲ್ಲಿ ಕಾಡು ಕೋಣ ಪ್ರತ್ಯಕ್ಷವಾಗಿದೆ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ. ಕೃಷಿ ನಾಶದ ಜತೆಗೆ ಜನನಿಬಿಡ ಪ್ರದೇಶಗಳವರೆಗೂ ಕಾಡುಕೋಣ ಲಗ್ಗೆ ಇಡುತ್ತಿರುವುದು ಜನರಲ್ಲಿ ಆತಂಕ ಹೆಚ್ಚಲು ಕಾರಣವಾಗಿದೆ.
ಇಂದು ಮುಂಜಾನೆ ಸುಮಾರು 6:30ರ ಸಮಯ ಇಲ್ಲಿನ ಮಿತ್ತಮಜಲು ಸಂಕೇಶ ಎಂಬಲ್ಲಿ ಒಂದು ಕಾಡುಕೋಣ ಕಂಡು ಬಂದಿದೆ. ಇಲ್ಲಿಂದ ಮುಂದುವರಿದ ಕಾಡುಕೋಣವು ಮಿತ್ತಮಜಲು ಪರಿಸರಗಳಲ್ಲಿ ಓಡಾಟ ನಡೆಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸ್ಥಳೀಯರು ಸೇರಿ ಕಾಡುಕೋಣವನ್ನು ಓಡಿಸುವ ಪ್ರಯತ್ನ ಮಾಡಿದ್ದು ಹೆಚ್ಚಿನ ಕೃಷಿಹಾನಿ ಸಂಭವದ ಭೀತಿ ಎದುರಾಗಿದೆ.
ಮಿತ್ತಮಜಲು ಸ್ಥಳೀಯರಿಗೆ ಅರಣ್ಯ ಪ್ರದೇಶಗಳಲ್ಲಿ ಓಡಾಡದಂತೆ ಈಗಾಗಲೇ ಎಚ್ಚರಿಕೆ ನೀಡಿದ್ದು ಹಗಲಿನ ಹೊತ್ತು ಮುಂಜಾಗ್ರತೆಯಿಂದ ಸಂಚರಿಸುವಂತೆ ಸೂಚಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಇದು ವಿಪರೀತವಾಗಿದ್ದು ಸಾಕಷ್ಟು ಕೃಷಿ ಹಾನಿ ಜತೆಗೆ ಜನರು ಭಯದಲ್ಲಿ ಜೀವನ ನಡೆಸುವಂತಾಗಿದೆ, ಕಾಡುಕೋಣದ ಕಾಟಕ್ಕೆ ಶಾಶ್ವತ ಪರಿಹಾರ ಒದಗಿಸುವಂತೆ ಸ್ಥಳೀಯರು ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.

