ಬೆಳ್ತಂಗಡಿ, ಫೆ. 04 : ಜ. 14ರಿಂದ ಶಾಸಕ ಹರೀಶ್ ಪೂಂಜಾರವರು “ಸಾಮರಸ್ಯದ ಸಂಕ್ರಾಂತಿ” ಕಾರ್ಯಕ್ರಮ ಆಯೋಜನೆಗೊಂಡಿತು. ಇದರ ಸ್ಪಷ್ಟ ಉದ್ಧೇಶವೇನೆಂದರೆ ಅಸ್ಪಶ್ಯತೆ ಹೋಗಲಾಡಿಸಿ, ಸಮ ಸಮಾಜ ನಿರ್ಮಾಣವಾಗಿದೆ. ಆರ್ ಎಸ್ ಎಸ್ ಕಾರ್ಯಕರ್ತನಾಗಿ ಸಮ ಸಮಾಜದ ಪರಿಕಲ್ಪನೆಯಲ್ಲಿ, ಸ್ವಾಸ್ಥ್ಯ ಸಮಾಜವನ್ನು ನಿರ್ಮಾಣ ಮಾಡುವುದೇ ಶಾಸಕ ಹರೀಶ್ ಪೂಂಜಾರ ಉದ್ಧೇಶವಾಗಿದೆ ಎಂದು ಬೆಳ್ತಂಗಡಿ ಎಸ್ ಸಿ ಮೋರ್ಚಾದ ಕಾರ್ಯದರ್ಶಿ ಲಕ್ಷ್ಮಣ್ ಹೇಳಿದ್ದಾರೆ.
ಬೆಳ್ತಂಗಡಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಉದ್ಧೇಶಕ್ಕಾಗಿ ಅಥವಾ ಇನ್ಯಾವುದೋ ಉದ್ಧೇಶದಿಂದ ಶಾಸಕರು ಈ ಕಾರ್ಯಕ್ರಮ ಆಯೋಜನೆ ಮಾಡಿಲ್ಲ. ದಲಿತ ಬಂಧುಗಳ ಮನೆಗಳಿಗೆ ತೆರಳಿ ಆ ಕುಟುಂಬದ ಅಣ್ಣನೋ, ತಮ್ಮನೋ ಆಗಿ ಆ ಮನೆಯಲ್ಲೇ ಸಿದ್ಧಪಡಿಸಿದ ಆಹಾರವನ್ನು ಸೇವಿಸಿ, ಹಬ್ಬವನ್ನು ಆಚರಿಸಿದ್ದಾರೆ. ಇದು, ಕಿಟ್ ಅಥವಾ ಉಡುಗೊರೆಯನ್ನು ಕೊಡುವ ಕಾರ್ಯಕ್ರಮವೇ ಅಲ್ಲವಿದು. ರಕ್ಷಿತ್ ಶಿವರಾಮ್ ಅವರು, ಚಾಕಲೇಟ್ ನೀಡಿದರು ಎಂದು ಹೇಳಿಕೆ ನೀಡುತ್ತಾರೆ. ಆದರೆ, ಹಿಂದೂ ಸಂಪ್ರದಾಯದಂತೆ ಒಬ್ಬರ ಮನೆಗೆ ತೆರಳುವಾಗ ಸಿಹಿ ತಿಂಡಿಗಳನ್ನು ಕೊಂಡೊಯ್ಯುತ್ತೇವೆ. ಹಾಗೆಯೇ ಶಾಸಕರು ತಮ್ಮ ಸಂಪ್ರದಾಯವನ್ನು ಪಾಲಿಸಿ, ನೆಂಟರಂತೆ ದಲಿತರ ಮನೆಗಳಿಗೆ ತೆರಳಿದ್ದಾರೆ. ಶಾಸಕರು, ಸಾಮರಸ್ಯತೆಯನ್ನು ಬಿತ್ತುವ ಕಾರ್ಯಕ್ರಮ ಮಾಡಿದ್ದಾರೆಯೇ ಹೊರತು ಬೇರೇನೂ ಇಲ್ಲ ಎಂದರು.
ಈ ಕಾರ್ಯಕ್ರಮ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಸಾಮರಸ್ಯದ ಸಂಕ್ರಾಂತಿ ಕಾರ್ಯಕ್ರಮ ಯಾವಾಗ ಯಶಸ್ವಿಯಾಯಿತೋ ಅಂದಿನಿಂದ ರಕ್ಷಿತ್ ಶಿವರಾಂ ಸರಿಯಾಗಿ ನಿದ್ದೆಯೂ ಮಾಡಿಲ್ಲ. ನಿದ್ದೆ ಮಾಡಿದರೂ ಆ ನಿದ್ದೆಯಲ್ಲಿ “ಸಾಮರಸ್ಯದ ಸಂಕ್ರಾಂತಿ” ಎಂದು ಕನವರಿಸುತ್ತಿದ್ದರು ಎಂದು ವ್ಯಂಗ್ಯವಾಡಿದರು. ರಕ್ಷಿತ್ ಶಿವರಾಂ ಅವರು, ದಲಿತರ ಮನೆಯಲ್ಲಿ ಕ್ಯಾಟರಿಂಗ್ ಊಟ ಮಾಡಿ, ನಾಟಕ ಮಾಡಿದಿರಿ ಎಂದು ಆರೋಪಿಸ್ತಾರೆ. ಆದರೆ, ಇಲ್ಲಿ ನಾಟಕ ಯಾರು ಮಾಡಿದ್ದರು, ನಿಜ ಯಾರದ್ದು ಎಂಬುದು ದಲಿತರಿಗೆ ಸ್ಪಷ್ಟವಾಗಿದೆ. ಯಾಕೆಂದರೆ ಈ ಕಾರ್ಯಕ್ರಮ 129 ಮನೆಗಳಲ್ಲಿ ನಡೆದಿದೆ. ಆಗ, ಆ ಕಾಲೊನಿಯ ಪ್ರತಿ ಮನೆಯಿಂದಲೂ ಆಗಮಿಸಿದ್ದಾರೆ. ಹೀಗಾಗಿ, ಸತ್ಯ ತಿಳಿದ ಅವರಿಗೆ ನಾಟಕ ಯಾರದ್ದು ಎಂಬುದರ ಅರಿವಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ ನಿಮ್ಮ ಕಾಂಗ್ರೆಸ್ ಶಾಸಕರು ಸುಮಾರು 70 ವರ್ಷ ಆಡಳಿತ ನಡೆಸಿದಾಗ ಒಮ್ಮೆಯೂ ಕೂಡಾ ಸಾಮರಸ್ಯದ ಒಂದೇ ಒಂದು ಕಾರ್ಯಕ್ರಮ ಆಯೋಜನೆ ಮಾಡಿಲ್ಲ. ಹರೀಶ್ ಪೂಂಜಾರು ಮಾಡಿದ ಈ ಸಾಮರಸ್ಯದ ಕಾರ್ಯಕ್ರಮವನ್ನು ನಾವೆಲ್ಲಾ ದಲಿತ ಬಂಧುಗಳು ಸ್ವಾಗತಿಸಿದ್ದೇವೆ, ಶಾಸಕರ ಜೊತೆಯಲ್ಲಿ ಗಟ್ಟಿಯಾಗಿ ನಿಲ್ಲುತ್ತೇವೆ ಎಂದರು.
ಶಾಸಕರಾಗಿ ಇಷ್ಟು ವರ್ಷ ಎಲ್ಲಿದ್ದಿರಿ ? ಈಗ ನಿಮಗೆ ದಲಿತ ಕಾಲೊನಿ ನೆನಪಾಯಿತಾ ? ಎಂದು ರಕ್ಷಿತ್ ಶಿವರಾಂ ಪ್ರಶ್ನಿಸುತ್ತಾರೆ, ಆದರೆ ಅವರಿಗೆ ಸ್ಪಷ್ಟವಾಗಿ ತಿಳಿದಿರಲಿ, ಸ್ವಾತಂತ್ರ್ಯ ದೊರೆತ ಭಾರತದ ಇತಿಹಾಸದಲ್ಲಿ ನೀವು (ಕಾಂಗ್ರೆಸ್) ಸಾಮರಸ್ಯ, ಸಮಾನತೆಯ ಸಮಾಜವನ್ನು ನಿರ್ಮಾಣ ಮಾಡುತ್ತಿದ್ದರೆ, ಇಂದು ಸಾಮರಸ್ಯ ಕಾರ್ಯಕ್ರಮ, ಸಮಾನತೆಯ ಹೋರಾಟದ ಅನಿವಾರ್ಯತೆ ಇತ್ತೇ ? ಇಂದಿಗೂ ಕೂಡಾ ಸಮಾನತೆಗಾಗಿ ಹೋರಾಟ ಮಾಡುತ್ತಿದ್ದೇವೆ ಅಂದರೆ ಅದಕ್ಕೆ ಕಾರಣ ಕಾಂಗ್ರೆಸ್. 70 ವರ್ಷದ ಇತಿಹಾಸದಲ್ಲಿ ಸಮಾನತೆ ನಿರ್ಮಾಣ ಮಾಡದೇ ಇರುವ ಕಾರಣಕ್ಕೆ ಅಸ್ಪ್ರಶ್ಯತೆ ಇಂದಿಗೂ ಜೀವಂತವಾಗಿದೆ. ಇದನ್ನು ಹೋಗಲಾಡಿಸಿ, ಸಮಾನತೆಗಾಗಿ ಹರೀಶ್ ಪೂಂಜಾರು ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ, ಇದನ್ನೂ ನೀವು ವಿರೋಧ ಮಾಡುತ್ತಿದ್ದೀರಿ ಅಲ್ವಾ ? ನಿಮಗೆ ನಿಜವಾಗಿಯೂ ಅಂಬೇಡ್ಕರ್, ಸಂವಿಧಾನದ ಮೇಲೆ ಗೌರವ ಇದೆಯೇ ? ಎಂದು ಪ್ರಶ್ನಿಸಿದ ಅವರು, ಈ ಕಾರ್ಯಕ್ರಮದಲ್ಲಿ ದಲಿತ ಬಂಧುಗಳ ವಿಮೋಚನೆ, ಬಿಡುಗಡೆಯಿದೆ, ಮುಖ್ಯ ವಾಹಿನಿಗೆ ತರುವಂತಹ ಪ್ರಯತ್ನವಿದೆ. ನಿಮಗೆ ನಿಜವಾಗಿಯೂ ದಲಿತ ಬಂಧುಗಳ ಬಗ್ಗೆ ಕಾಳಜಿ ಇದ್ದರೆ, ನೀವು ಈ ಕಾರ್ಯಕ್ರಮವನ್ನು ನೀವು ಬೆಂಬಲಿಸುತ್ತಿದ್ದಿರಿ. ಆದರೆ ನೀವು ಈ ಕಾರ್ಯಕ್ರಮವನ್ನು ವಿರೋಧ ಮಾಡುವ ಮೂಲಕ ದಲಿತ ಬಂಧುಗಳ ಸಮಾನತೆಯನ್ನು ವಿರೋಧ ಮಾಡುತ್ತಿದ್ದೀರಿ ಎಂದು ರಕ್ಷಿತ್ ಶಿವರಾಂ ಹೇಳಿಕೆಯ ವಿರುದ್ಧ ಕಿಡಿಕಾರಿದರು.

