ಮುಂಡಾಜೆ, ಜ. 27 : ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ -73 ರ ಮುಂಡಾಜೆ ಗ್ರಾಮದ ಸೀಟ್ ರಕ್ಷಿತಾರಣ್ಯ ಪ್ರದೇಶದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತಂದು ಸುರಿಯಲಾಗುತ್ತಿದೆ. ರಸ್ತೆ ಬದಿಯ ಚರಂಡಿಯಲ್ಲಿ ರಾಶಿ ರಾಶಿ ಪ್ಲಾಸ್ಟಿಕ್ ತ್ಯಾಜ್ಯಗಳು ಕಂಡು ಬರುತ್ತಿದೆ. ಅಲ್ಲದೆ, ಕೆಲವೊಂದು ಕಡೆಗಳಲ್ಲಿ ಗೋಣಿಯಲ್ಲಿ ಕಟ್ಟಿ ಹಾಕಿದ ತ್ಯಾಜ್ಯಗಳೂ ಕಂಡು ಬರುತ್ತಿದೆ. ಈ ಬಗ್ಗೆ ಆದಷ್ಟು ಶೀಘ್ರ ಅರಣ್ಯ ಇಲಾಖೆ ಅಥವಾ ಸ್ಥಳೀಯಾಡಳಿತ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ. ಇಲ್ಲದೇ ಇದ್ದರೆ ಮೀಸಲು ಅರಣ್ಯ ಹೋಗಿ ತ್ಯಾಜ್ಯ ಡಂಪಿಂಗ್ ಯಾರ್ಡ್ ಆಗಿ ಬದಲಾಗುವುದರಲ್ಲಿ ಸಂಶಯವೇ ಇಲ್ಲ.
ರಸ್ತೆ ಬದಿಯ ಅಲ್ಲಲ್ಲಿ ತ್ಯಾಜ್ಯ ರಾಶಿಗಳು ಪತ್ತೆಯಾಗಿವೆ. ಮಕ್ಕಳ ಸ್ಯಾನಿಟರಿ ಪ್ಯಾಡ್ಸ್, ಗೃಹಬಳಕೆಯ ತ್ಯಾಜ್ಯಗಳು, ನೀರಿನ ಬಾಟಲ್, ತಲೆದಿಂಬುಗಳು ಹಾಗೂ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಯಾರೋ (ಅ)ನಾಗರಿಕರು ಈ ರಕ್ಷಿತಾರಣ್ಯ ಪ್ರದೇಶದಲ್ಲಿ ತಂದು ಸುರಿಯುತ್ತಿದ್ದಾರೆ. ಇದು ಮೀಸಲು ರಕ್ಷಿತಾರಣ್ಯ ಪ್ರದೇಶವಾಗಿದ್ದು, ಇಲ್ಲಿ ಯಾವುದೇ ತ್ಯಾಜ್ಯಗಳನ್ನು ತಂದು ಸುರಿಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕಿದೆ. ಅಲ್ಲದೆ, ರಸ್ತೆ ಬದಿಯ ಕೆಲವೊಂದು ಭಾಗದಲ್ಲಿ ಖಾಸಗಿ ಪ್ಲೆಕ್ಸ್ – ಬ್ಯಾನರ್ ಗಳು ಕಂಡು ಬರುತ್ತಿದೆ. ಇದನ್ನೂ ತೆರವುಗೊಳಿಸಿ, ರಕ್ಷಿತಾರಣ್ಯ ಪ್ರದೇಶವನ್ನು ಸಂರಕ್ಷಿಸಬೇಕಾಗಿದೆ.

ಪ್ರವಾಸಿಗರ ಹಾವಳಿ :
ದಟ್ಟ ಕಾನನದ ಮಧ್ಯೆ ರಸ್ತೆ ಹಾದು ಹೋಗುವುದರಿಂದ ಸಾಕಷ್ಟು ನೆರಳು ಹಾಗೂ ತಂಪಾದ ವಾತವರಣವಿದ್ದು, ಹೀಗಾಗಿ ಪ್ರವಾಸಿಗರು ಇಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ ಆಹಾರ ಸೇವನೆಯನ್ನೂ ಕೂಡಾ ಮಾಡುತ್ತಾರೆ. ಹೀಗಾಗಿಯೇ, ಈ ಪ್ರದೇಶದ ಅಲ್ಲಲ್ಲಿ ಆಹಾರ ಪೊಟ್ಟಣಗಳು ಕೂಡಾ ರಾಶಿ ಬಿದ್ದಿದೆ. ಅಲ್ಲದೆ, ಕೆಲವು ಪ್ರವಾಸಿಗರು ವಾಹನಗಳನ್ನು ನಿಲ್ಲಿಸಿ ಮದ್ಯಪಾನ, ಧೂಮಪಾನ ಮಾಡುತ್ತಾರೆಂಬ ಆರೋಪವೂ ಇದೆ. ಧೂಮಪಾನ ಮಾಡಿ ಅಲ್ಲೇ ಸಿಗರೇಟ್ ಅಥವಾ ಬೀಡಿ ಬಿಸಾಡುವುದರಿಂದ ಆ ಕಿಡಿಯಿಂದ ಬೆಂಕಿ ಹತ್ತಿಕೊಂಡರೆ ಸಂಪೂರ್ಣ ಅರಣ್ಯ ಬೆಂಕಿಗಾಹುತಿಯಾಗಬಹುದು. ಅಲ್ಲದೆ, ಕೆಲವು ಪ್ರವಾಸಿಗರು ವಾಹನಗಳನ್ನು ನಿಲ್ಲಿಸಿ, ಕಾಡಿನೊಳಗೆ ತೆರಳಿ ವಿರಾಮ ಪಡೆಯುತ್ತಾರೆಂದು ಸ್ಥಳೀಯರು ಆರೋಪಿಸಿದ್ದಾರೆ. ಇದು ಹೀಗೆಯೇ ಮುಂದುವರಿದರೆ ಅನೈತಿಕ ಚಟುವಟಿಕೆಗಳೂ ನಡೆಯುವ ಸಾಧ್ಯ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಅಂಗಡಿಗಳ ಸಂಖ್ಯೆಯಲ್ಲಿ ಹೆಚ್ಚಳ :
ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ -73 ರ ಮುಂಡಾಜೆ ಗ್ರಾಮದ ಸೀಟ್ ರಕ್ಷಿತಾರಣ್ಯ ಪ್ರದೇಶದಲ್ಲಿ ಅನಧೀಕೃತವಾಗಿ ಕೆಲವೊಂದು ಅಂಗಡಿಗಳು ಕೂಡಾ ಕಾರ್ಯಾಚರಿಸುತ್ತಿವೆ. ಈ ಹಿಂದೆ ಕೇವಲ ಎಳನೀರು, ಈರೋಳ್ (ತಾಳೆ ಹಣ್ಣು ಅಥವಾ ‘Ice Apple’ ಅಥವಾ ‘Sugar Palm Fruit’) ಅನ್ನು ಮಾರಾಟ ಮಾಡುತ್ತಿದ್ದವರು ಇಂದು ಪ್ಲಾಸ್ಟಿಕ್ ಕವರ್ ನಲ್ಲಿ ಸಿದ್ಧವಾಗಿರುವ ತಿಂಡಿ ತಿನಿಸುಗಳನ್ನೂ ಮಾರಾಟ ಮಾಡುತ್ತಿದ್ದು ಇದು ಪ್ಲಾಸ್ಟಿಕ್ ತ್ಯಾಜ್ಯ ರಾಶಿ ಹೆಚ್ಚಳಕ್ಕೆ ಕಾರಣವಾಗಬಹುದು. ಹೀಗಾಗಿ ಅನಧೀಕೃತವಾಗಿರುವ ಅಂಗಡಿಗಳಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆ ಮಾಡದಂತೆ ಎಚ್ಚರಿಕೆ ನೀಡುವುದು ಸೂಕ್ತವಾಗಿದೆ.
ಸುಸಜ್ಜಿತ ತಡೆಬೇಲಿ, ಸಿಸಿ ಕ್ಯಾಮರಾ ಅಳವಡಿಸಿ :
ಸೀಟ್ ರಕ್ಷಿತಾರಣ್ಯ ಭಾಗದಲ್ಲಿ ಕಾಡಿನಂಚಿನಲ್ಲಿ ಯಾವುದೇ ರೀತಿಯ ತಡೆಬೇಲಿಗಳು ಇಲ್ಲ. ಹೀಗಾಗಿ ಪ್ರವಾಸಿಗರು ತಮಗಿಷ್ಟಬಂದಂತೆ ಕಾಡಿನೊಳಗೆ ತೆರಳುವುದು ಸಾಮಾನ್ಯವಾಗಿಬಿಟ್ಟಿದೆ. ಅಲ್ಲದೆ, ಕೆಲವರಿಗೆ ತ್ಯಾಜ್ಯಗಳನ್ನು ಕಾಡಿನೊಳಗಡೆ ಸುರಿಯುವುದಕ್ಕೂ ಬಹಳ ಸಹಕಾರಿಯಾಗಿದೆ. ಸುಸಜ್ಜಿತ ತಡೆಬೇಲಿಗಳ ನಿರ್ಮಾಣ ಮಾಡಿದರೆ ಪ್ರವಾಸಿಗರು ಕಾಡಿನೊಳಗಡೆ ತೆರಳುವುದಕ್ಕೆ ಹಿಂದೇಟು ಹಾಕುತ್ತಾರೆ. ರಸ್ತೆಬದಿಯಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸುವುದರಿಂದ ತ್ಯಾಜ್ಯ ತಂದು ಸುರಿಯುವವರನ್ನೂ ಕೂಡಾ ಪತ್ತೆಹಚ್ಚಬಹುದಾಗಿದೆ. ಅಲ್ಲದೆ, ಅನೈತಿಕ ಚಟುವಟಿಕೆಗಳಿಗೂ ಕಡಿವಾಣ ಹಾಕಬಹುದಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಯು ಆದಷ್ಟು ಶೀಘ್ರವಾಗಿ ಕ್ರಮ ಕೈಗೊಳ್ಳುವುದು ಅನಿವಾರ್ಯ.

ಎಚ್ಚರಿಕೆ ಫಲಕ ಅಗತ್ಯ :
ಅರಣ್ಯ ಪ್ರದೇಶದಲ್ಲಿ ಪ್ಲಾಸ್ಟಿಕ್ ಅಥವಾ ಇನ್ಯಾವುದೇ ತ್ಯಾಜ್ಯಗಳನ್ನು ಹಾಕಬಾರದು ಎಂಬುದು ಸಾಮಾನ್ಯ ಜ್ಞಾನ. ಆದರೆ, ಕೆಲವು ಅನಾಗರಿಕರು ಅದರ ಪರಿವೇ ಇಲ್ಲದೆ ಕೆಲವರು ತ್ಯಾಜ್ಯಗಳನ್ನು ತಂದು ಸುರಿಯುತ್ತಿದ್ದಾರೆ. ಹಾಗೂ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ವಾಹನ ನಿಲ್ಲಿಸಿ ಧೂಮಪಾನದಂತಹ ಕೃತ್ಯಗಳನ್ನು ನಡೆಸುತ್ತಿದ್ದಾರೆ. ಇಂತಹವರನ್ನು ಎಚ್ಚರಿಸಲು ಅಲ್ಲಲ್ಲಿ ಪ್ಲಾಸ್ಟಿಕ್ ರಹಿತವಾದ ಎಚ್ಚರಿಕಾ ಫಲಕಗಳನ್ನು ಅಳವಡಿಸಬೇಕಿದೆ.

