ಪಂಜಾಬ್, ಫೆ. 09 : ವಿದ್ಯಾರ್ಥಿಯೋರ್ವ ತನ್ನ ಸಹಪಾಠಿಯನ್ನು ತರಗತಿಯಲ್ಲೇ ಗುಂಡಿಕ್ಕಿ ಹತ್ಯೆಗೈದು, ಅದೇ ಪಿಸ್ತೂಲಿನಿಂದ ತಾನೂ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಭೀಕರ ಘಟನೆ ಪಂಜಾಬ್‌ನ ತರ್ನ್ ತಾರನ್ ಜಿಲ್ಲೆಯ ಕಾನೂನು ಕಾಲೇಜೊಂದರಲ್ಲಿ ನಡೆದಿದೆ.

ಉಸ್ಮಾದಲ್ಲಿರುವ ‘ಮಾಯಿ ಭಾಗೋ ಲಾ ಕಾಲೇಜ್’ನಲ್ಲಿ ಈ ಘಟನೆ ಸಂಭವಿಸಿದೆನ್ನಲಾಗಿದೆ. ಮೃತ ವಿದ್ಯಾರ್ಥಿನಿಯನ್ನು ನೌಶೆಹ್ರಾ ಪನ್ನುವಾನ್ ನಿವಾಸಿ ಸಂದೀಪ್ ಕೌರ್ ಎಂದು ಗುರುತಿಸಲಾಗಿದೆ. ಗುಂಡು ಹಾರಿಸಿದ ಆರೋಪಿಯನ್ನು ಮಲ್ಲಿಯನ್ ಗ್ರಾಮದ ಪ್ರಿನ್ಸ್ ರಾಜ್ ಎಂದು ಗುರುತಿಸಲಾಗಿದ್ದು, ಈತನ ಸ್ಥಿತಿ ಗಂಭೀರವಾಗಿದೆ. ತರಗತಿಯಲ್ಲಿ ಅಳವಡಿಸಿದ್ದ ಸಿಸಿಟಿವಿ ದೃಶ್ಯಾವಳಿಯಲ್ಲಿ, ಪ್ರಿನ್ಸ್ ರಾಜ್ ಬೆನ್ನಿಗೆ ಬ್ಯಾಗ್ ಹಾಕಿಕೊಂಡು ತರಗತಿಗೆ ಪ್ರವೇಶಿಸುವುದು ಕಂಡುಬಂದಿದೆ. ಆತ ನೇರವಾಗಿ ಸಂದೀಪ್ ಕೌರ್ ಮತ್ತು ಮತ್ತೊಬ್ಬ ವಿದ್ಯಾರ್ಥಿನಿಯ ಬಳಿ ಬಂದು ಸ್ವಲ್ಪ ಹೊತ್ತು ಮಾತನಾಡಿದ್ದಾನೆ. ನಂತರ ಮೂವರೂ ತರಗತಿಯ ಹಿಂಭಾಗದ ಸೀಟುಗಳಿಗೆ ಹೋಗಿ ಕುಳಿತು ಮಾತುಕತೆ ಮುಂದುವರಿಸಿದ್ದಾರೆ. ಮಾತುಕತೆಯ ನಡುವೆಯೇ ಇದ್ದಕ್ಕಿದ್ದಂತೆ ಪ್ರಿನ್ಸ್ ರಾಜ್ ತನ್ನ ಬ್ಯಾಗ್‌ನಿಂದ ಪಿಸ್ತೂಲ್ ತೆಗೆದು ಸಂದೀಪ್ ಕೌರ್ ಮೇಲೆ ಗುಂಡು ಹಾರಿಸಿದ್ದಾನೆ. ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಬಳಿಕ ಆತ ತನ್ನ ತಲೆಗೆ ಗುಂಡು ಹಾರಿಸಿಕೊಂಡಿದ್ದಾನೆ.
ಗುಂಡಿನ ಶಬ್ದ ಕೇಳುತ್ತಿದ್ದಂತೆಯೇ ತರಗತಿಯಲ್ಲಿದ್ದ ಇತರ ವಿದ್ಯಾರ್ಥಿಗಳು ಭಯಭೀತರಾಗಿ ಹೊರಕ್ಕೆ ಓಡಿದ್ದಾರೆ. ತರಗತಿಗಳು ಆರಂಭವಾಗುವ ಕೆಲವೇ ಕ್ಷಣಗಳ ಮೊದಲು ಈ ಕೃತ್ಯ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿರುವ ಪ್ರಿನ್ಸ್ ರಾಜ್‌ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕಾಲೇಜಿನೊಳಗೆ ಗನ್ ಹಿಡಿದು ಬರಲು ಆತನಿಗೆ ಹೇಗೆ ಅವಕಾಶ ನೀಡಲಾಯಿತು? ಎಂದು ಮೃತ ವಿದ್ಯಾರ್ಥಿನಿಯ ತಾಯಿ ಪ್ರಶ್ನಿಸಿದ್ದು, ಕಾಲೇಜು ಆಡಳಿತ ಮಂಡಳಿಯ ವಿರುದ್ಧ ಹಾಗೂ ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಕೊಲೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಪ್ರೇಮ ವೈಫಲ್ಯ ಅಥವಾ ವೈಯಕ್ತಿಕ ದ್ವೇಷವೇ ಈ ಕೃತ್ಯಕ್ಕೆ ಕಾರಣವೇ ಎಂಬ ನಿಟ್ಟಿನಲ್ಲಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಚುರುಕುಗೊಳಿಸಿದ್ದಾರೆ.

