ಬೆಳ್ತಂಗಡಿ, ಜು.15 : ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆನ್ನಲಾದ ಶವಗಳನ್ನು ಸಾಮೂಹಿಕವಾಗಿ ಹೂತಿಡಲಾಗಿದೆ ಎನ್ನಲಾದ ಪ್ರಕರಣದ ಸಂಬಂಧ ತನಿಖೆ ನಡೆಸಿದ ಎಸ್ ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಸಿದ್ದಾರೆ.
ಬೆಳ್ತಂಗಡಿ ನ್ಯಾಯಾಲಯದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಶಶಾಂಕ್ ನಾಗೇಂದ್ರ ಭಟ್ ಮುಂದೆ ಎಸ್‌ಐಟಿ ಅಧಿಕಾರಿಗಳು ಇಂದು(ಜು.15) ಮಧ್ಯಾಹ್ನ 3 ಗಂಟೆ ಸುಮಾರಿಗೆ ತನಿಖೆಯ ಸಂಪೂರ್ಣ ಒಟ್ಟು 12 ಪ್ರತ್ಯೇಕ ಕಡತಗಳನ್ನು ಒಳಗೊಂಡ 7000ಕ್ಕೂ ಅಧಿಕ ಪುಟಗಳ ಅಂತಿಮ ವರದಿಯನ್ನು ಸಲ್ಲಿಸಿದ್ದಾರೆ.

ತನಿಖೆಯ ವೇಳೆ ದಾಖಲಿಸಲಾದ 255 ಸಾಕ್ಷಿಗಳ ಹೇಳಿಕೆಗಳು, ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ವರದಿ, ಹಾಗೂ ಇತರೆ ದಾಖಲೆಗಳ ವರದಿಯೊಂದಿಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಅಲ್ಲದೆ, ಸಾಕ್ಷಿಗಳ ವಿಡಿಯೊ ಹೇಳಿಕೆಗಳನ್ನು ಒಳಗೊಂಡ 4 ಟೆರಾಬೈಟ್ (4TB) ಹಾರ್ಡ್ ಡಿಸ್ಕ್ ಸಹ ಎಸ್‌ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದರು. ಪ್ರಕರಣದ ತನಿಖೆಯ ಭಾಗವಾಗಿ ವಶಪಡಿಸಿಕೊಂಡು ಎಫ್‌ಎಸ್‌ಎಲ್ ಪರೀಕ್ಷೆಗೆ ಕಳುಹಿಸಲಾಗಿದ್ದ ಬುರುಡೆ, ಅಸ್ಥಿಪಂಜರ, ಮೊಬೈಲ್ ಫೋನ್ ಸೇರಿದಂತೆ ವಿವಿಧ ವಸ್ತುಗಳು ಹಾಗೂ ದಾಖಲೆಗಳನ್ನು ಪರೀಕ್ಷೆಯ ಬಳಿಕ ಎಸ್‌ಐಟಿ ಅಧಿಕಾರಿಗಳು ನ್ಯಾಯಾಲಯದ ವಶಕ್ಕೆ ಒಪ್ಪಿಸಿದ್ದಾರೆ.
ಅಂತಿಮ ವರದಿ ಸಲ್ಲಿಕೆ ವೇಳೆ ಪ್ರಕರಣದ ಪ್ರಮುಖ ಆರೋಪಿತ ವ್ಯಕ್ತಿಯಾಗಿರುವ ಚಿನ್ನಯ್ಯ ಅವರು ತಮ್ಮ ಪತ್ನಿಯೊಂದಿಗೆ ಬೆಳ್ತಂಗಡಿ ನ್ಯಾಯಾಲಯದ ಆವರಣಕ್ಕೆ ಆಗಮಿಸಿದ್ದರು.



