ಬೆಂಗಳೂರು, ಜೂ. 12 : ಕೇರಳದಲ್ಲಿ ಮಾರಣಾಂತಿಕ ಶಿಗೆಲ್ಲೋಸಿಸ್ ಸೋಂಕು ತೀವ್ರವಾಗಿ ಹರಡುತ್ತಿದ್ದು, ಪೋಷಕರಲ್ಲಿ ಭಾರಿ ಆತಂಕ ಮೂಡಿಸಿದೆ.
ಕರುಳಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಈ ಅಪಾಯಕಾರಿ ಬ್ಯಾಕ್ಟೀರಿಯಾ ಸೋಂಕಿಗೆ ಈಗಾಗಲೇ ಕೇರಳದ ಕೋಝಿಕ್ಕೋಡ್‌ನಲ್ಲಿ ನಾಲ್ಕು ವರ್ಷದ ಬಾಲಕಿ ಬಲಿಯಾಗಿದ್ದಾಳೆ. ವಯನಾಡು ಸೇರಿದಂತೆ ವಿವಿಧ ಜಿಲ್ಲೆಗಳ ಶಾಲಾ ಮಕ್ಕಳಲ್ಲಿ ಈ ಸೋಂಕು ವೇಗವಾಗಿ ಹರಡುತ್ತಿದ್ದು, ಇದುವರೆಗೆ 300ಕ್ಕೂ ಹೆಚ್ಚು ಮಕ್ಕಳಲ್ಲಿ ಶಿಗೆಲ್ಲಾ ಸೋಂಕಿನ ಲಕ್ಷಣಗಳು ಪತ್ತೆಯಾಗಿವೆ. ಕೇರಳದ ಈ ಆತಂಕಕಾರಿ ಬೆಳವಣಿಗೆಯ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕರ್ನಾಟಕ ಆರೋಗ್ಯ ಇಲಾಖೆಯು ಗಡಿ ಜಿಲ್ಲೆಗಳು ಸೇರಿದಂತೆ ರಾಜ್ಯಾದ್ಯಂತ ಹೈಅಲರ್ಟ್ ಘೋಷಿಸಿದೆ.
ವೈದ್ಯರ ಪ್ರಕಾರ, ಶಿಗೆಲ್ಲಾ ಎಂಬುದು ಯಾವುದೇ ವೈರಸ್ ಅಲ್ಲ, ಇದೊಂದು ಅತ್ಯಂತ ಸಾಂಕ್ರಾಮಿಕ ಬ್ಯಾಕ್ಟೀರಿಯಾ ಆಗಿದೆ. ಇದು ಮುಖ್ಯವಾಗಿ ಮನುಷ್ಯನ ಜೀರ್ಣಾಂಗ ವ್ಯವಸ್ಥೆ ಹಾಗೂ ಕರುಳಿನ ಮೇಲೆ ತೀವ್ರವಾಗಿ ದಾಳಿ ಮಾಡುತ್ತದೆ. ಅನೈರ್ಮಲ್ಯ ಹೊಂದಿರುವ ಪ್ರದೇಶಗಳಲ್ಲಿ ಇದು ಅತಿ ವೇಗವಾಗಿ ಹರಡುತ್ತದೆ. ಕಲುಷಿತ ನೀರು, ಕಲುಷಿತ ಆಹಾರ ಸೇವನೆ ಹಾಗೂ ಶೌಚಾಲಯ ಬಳಕೆಯ ನಂತರ ಕೈಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಈ ಬ್ಯಾಕ್ಟೀರಿಯಾ ಒಬ್ಬರಿಂದ ಮತ್ತೊಬ್ಬರಿಗೆ ಹರಡಬಹುದು. ವಿಶೇಷವಾಗಿ 5 ವರ್ಷದೊಳಗಿನ ಚಿಕ್ಕ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಈ ಸೋಂಕು ಬೇಗನೆ ಅಟ್ಯಾಕ್ ಮಾಡುತ್ತದೆ. ಆರಂಭದಲ್ಲೇ ಪೋಷಕರು ನಿರ್ಲಕ್ಷ್ಯ ವಹಿಸಿದರೆ ಇದು ಮಕ್ಕಳ ಜೀವಕ್ಕೇ ಕಂಟಕವಾಗುವ ಸಾಧ್ಯತೆ ಇರುತ್ತದೆ ಎಂದು ಕೆಸಿಜಿ ಆಸ್ಪತ್ರೆಯ ಡೀನ್ ಮತ್ತು ನಿರ್ದೇಶಕರಾದ ಡಾ. ಲಕ್ಷ್ಮೀಪತಿ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಶಿಗೆಲ್ಲೋಸಿಸ್ ಆತಂಕ ಸೃಷ್ಟಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ಆರೋಗ್ಯ ಇಲಾಖೆಯು ಎಲ್ಲಾ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮತ್ತು ಸರ್ಕಾರಿ ಆಸ್ಪತ್ರೆಗಳ ವೈದ್ಯರಿಗೆ ಮುನ್ನೆಚ್ಚರಿಕೆ ವಹಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಮುಖ್ಯ ಲಕ್ಷಣಗಳು
ಸೋಂಕು ತಗುಲಿದ 1 ರಿಂದ 3 ದಿನಗಳಲ್ಲಿ ಇದರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ
ತೀವ್ರವಾದ ಭೇದಿ : ಇದು ಕೆಲವೊಮ್ಮೆ ರಕ್ತ ಅಥವಾ ಲೋಳೆಯೊಂದಿಗೆ ಇರಬಹುದು.
ಹೊಟ್ಟೆ ನೋವು : ಹೊಟ್ಟೆಯ ಭಾಗದಲ್ಲಿ ತೀವ್ರವಾದ ಸೆಳೆತ ಮತ್ತು ನೋವು.
ಜ್ವರ : ದೇಹದ ತಾಪಮಾನ ಹೆಚ್ಚಾಗುವುದು.
ಇತರ ಸಮಸ್ಯೆಗಳು : ವಾಕರಿಕೆ, ವಾಂತಿ ಮತ್ತು ಪದೇ ಪದೇ ಶೌಚಾಲಯಕ್ಕೆ ಹೋಗಬೇಕು ಎನ್ನುವ ತೀವ್ರ ಹಂಬಲ.
ಮುನ್ನೆಚ್ಚರಿಕೆಗಳು
ಶಿಗೆಲ್ಲೋಸಿಸ್ ತಡೆಯಲು ಉತ್ತಮ ವೈಯಕ್ತಿಕ ನೈರ್ಮಲ್ಯ ಮತ್ತು ಆಹಾರ ಪದ್ಧತಿ ಅತ್ಯಗತ್ಯ.
ಕೈ ತೊಳೆಯುವುದು : ಶೌಚಾಲಯ ಬಳಸಿದ ನಂತರ ಮತ್ತು ಆಹಾರ ತಯಾರಿಸುವ ಅಥವಾ ಸೇವಿಸುವ ಮುನ್ನ ಸಾಬೂನು ಮತ್ತು ಉಗುರು ಬೆಚ್ಚಗಿನ ನೀರಿನಿಂದ ಕೈಗಳನ್ನು ಚೆನ್ನಾಗಿ ತೊಳೆಯಿರಿ.
ಶುದ್ಧ ನೀರು ಮತ್ತು ಆಹಾರ : ಕುದಿಸಿ ಆರಿಸಿದ ನೀರನ್ನು ಮಾತ್ರ ಕುಡಿಯಿರಿ. ಹೊರಗಡೆ ಸಿಗುವ ಕತ್ತರಿಸಿದ ಹಣ್ಣುಗಳು, ಶುಚಿತ್ವವಿಲ್ಲದ ಆಹಾರಗಳನ್ನು ಸೇವಿಸುವುದನ್ನು ತಪ್ಪಿಸಿ.
ಪ್ರತ್ಯೇಕತೆ : ಮನೆಯಲ್ಲಿ ಯಾರಿಗಾದರೂ ಈ ಸೋಂಕು ತಗುಲಿದ್ದರೆ, ಅವರ ಬಟ್ಟೆ ಮತ್ತು ಪಾತ್ರೆಗಳನ್ನು ಪ್ರತ್ಯೇಕವಾಗಿ ಇರಿಸಿ, ನೈರ್ಮಲ್ಯ ಕಾಪಾಡಿಕೊಳ್ಳಿ.
ಪ್ರಯಾಣದ ಎಚ್ಚರಿಕೆ : ನೀವು ಪ್ರಯಾಣ ಮಾಡುವಾಗ, ಸಂಪೂರ್ಣವಾಗಿ ಬೇಯಿಸಿದ ಅಥವಾ ಸುಲಿದ ಹಣ್ಣುಗಳನ್ನು ಮಾತ್ರ ತಿನ್ನಿ.
ನೀವು ಅಥವಾ ನಿಮ್ಮ ಮನೆಯವರಲ್ಲಿ ಯಾರಾದರೂ ಈ ರೋಗಲಕ್ಷಣಗಳನ್ನು ಅನುಭವಿಸುತ್ತಿದ್ದರೆ, ತಕ್ಷಣವೇ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯುವುದು ಉತ್ತಮ.


