ದೋಹಾ : ಐಪಿಎಲ್ ನಲ್ಲಿ ಅದ್ಭುತ ಬ್ಯಾಟಿಂಗ್ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದ ಬಾಲಕ ವೈಭವ್ ಸೂರ್ಯವಂಶಿ ಇದೀಗ ಮತ್ತೊಮ್ಮೆ ಸ್ಫೋಟಕ ಶತಕದ ಮೂಲಕ ಕ್ರಿಕೆಟ್ ಜಗತ್ತನ್ನು ಅಚ್ಚರಿಗೊಳಿಸಿದ್ದಾನೆ. ಕೇವಲ 42 ಎಸೆತಗಳಲ್ಲಿ 144 ರನ್ ಗಳಿಸಿ ಕ್ರಿಕೆಟ್ ಜಗತ್ತೇ ತನ್ನತ್ತ ನೋಡುವಂತೆ ಮಾಡಿದ್ದಾನೆ. ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2025 ಪಂದ್ಯಾವಳಿಯಲ್ಲಿ ಭಾರತ ಎ ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದ ವೈಭವ್ 17 ಎಸೆತಗಳಲ್ಲಿ ಅರ್ಧಶತಕ ಮತ್ತು 32 ಎಸೆತಗಳಲ್ಲಿ ಶತಕ ಪೂರೈಸಿದ್ದಾನೆ.
ದೋಹಾದಲ್ಲಿ ನಡೆದ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2025 ಪಂದ್ಯಾವಳಿಯ ಭಾರತ ಎ ಮತ್ತು ಯುಎಇ ನಡುವಿನ ಪಂದ್ಯದಲ್ಲಿ, ವೈಭವ್ ಸೂರ್ಯವಂಶಿ ಕೇವಲ 42 ಎಸೆತಗಳಲ್ಲಿ 144 ರನ್ ಚಚ್ಚಿದ್ದಾನೆ. ಅದರಲ್ಲಿ 11 ಬೌಂಡರಿ, 15 ಸಿಕ್ಸ್ ಸೇರಿದ್ದು, ಸ್ಟ್ರೈಕ್ ರೇಟ್ 342.85….! 17 ಎಸೆತದಲ್ಲಿ ಅರ್ಧಶತಕ ಬಾರಿಸಿದ ಬಾಲಕ ಶತಕದ ಗಡಿ ದಾಟಲು ತೆಗೆದುಕೊಂಡದ್ದು ಕೇವಲ 32 ಎಸೆತ ! ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಜಿತೇಶ್ ಶರ್ಮಾ ನೇತೃತ್ವದ ಭಾರತ ಎ ತಂಡ 16 ರನ್ ಗಳಿರುವಾಗಲೇ ಮೊದಲ ವಿಕೆಟ್ ಕಳೆದುಕೊಂಡಿತು. ಆದರೆ ನಂತರ ವೈಭವ್ ಸೂರ್ಯವಂಶಿ ತನ್ನ ರುದ್ರತಾಂಡವ ಆರಂಭ ಮಾಡಿಯೇ ಬಿಟ್ಟರು, ಯುಎಇ ಬೌಲರ್ ಗಳು ಯಾವ ರೀತಿಯಲ್ಲಿ ಬೌಲಿಂಗ್ ಮಾಡಿದರೂ, ಅದರಲ್ಲಿ ಭಾಗಶ: ಚೆಂಡುಗಳು ಬೌಂಡರಿ ಗೆರೆ ದಾಟಿ ಕೇಕೆ ಹಾಕುತ್ತಿತ್ತು. ತಂಡದ ಮೊತ್ತ 150 ದಾಟುವ ಮೊದಲೇ ವೈಭವ್ ಸೂರ್ಯವಂಶಿ ಅವರು ಶತಕವನ್ನೂ ಪೂರೈಸಿಕೊಂಡರು. ಮತ್ತೊಂದು ತುದಿಯಲ್ಲಿದ್ದ ನಮನ್ ಧಿರ್(23 ಎಸೆತದಲ್ಲಿ 34) ಅವರು ವೈಭವ್ ಗೆ ಉತ್ತಮ ಸಾಥ್ ನೀಡಿದರು. ಇವರಿಬ್ಬರು 2ನೇ ವಿಕೆಟ್ ಗೆ 163 ರನ್ ಗಳ ಅದ್ಬುತ ಜೊತೆಯಾಟವಾಡಿದರು. ಹೀಗಾಗಿ ಕೇವಲ 11. ಓವರ್ ಗಳಲ್ಲೇ ತಂಡ 169 ರನ್ ಪೇರಿಸಿದರು. ಈ ಹಂತದಲ್ಲಿ ನಮನ್ ಧಿರ್ ಅವರು ಔಟಾಗಿ ಪೆವಿಲಿಯನ್ ಸೇರಿಕೊಂಡರು.
ಇದಾದ ಬಳಿಕ ನಾಯಕ ಜಿತೇಶ್ ಶರ್ಮಾ ಅವರನ್ನು ಸೇರಿಕೊಂಡ ವೈಭವ್ ತಮ್ಮ ಬ್ಚಾಟಿಂಗ್ ವೈಭವವನ್ನು ಮುಂದುವರಿಸಿದರು. ಆದರೆ ತಂಡದ ಮೊತ್ತ 195 ಆಗಿದ್ದಾಗ ಮುಹಮ್ಮದ್ ಫರಾಝುದ್ದೀನ್ ಅವರ ಬೌಲಿಂಗ್ ನಲ್ಲಿ ಆಹ್ಮದ್ ತಾರೀಕ್ ಅವರಿಗೆ ಕ್ಯಾಚಿತ್ತು ಔಟಾದರು. ಇದಾದ ಬಳಿಕ ಜಿತೇಶ್ ಶರ್ಮ ಅವರು ಕೇವಲ 32 ಎಸೆತದಲ್ಲಿ 83 ರನ್ ಸಿಡಿಸಿದರು. ಅವರು 8 ಬೌಂಡರಿ ಮತ್ತು 6 ಸಿಕ್ಸರ್ ಸಿಡಿಸಿದರು. ಅಂತಿಮವಾಗಿ ಭಾರತ ಎ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕಟ್ ನಷ್ಟಕ್ಕೆ 297 ರನ್ ಗಳ ಬೃಹತ್ ಮೊತ್ತ ದಾಖಲಿಸಿತು.

