ಬೆಂಗಳೂರು, ಫೆ. 03 : ಬೆಳ್ತಂಗಡಿ ತಾಲೂಕಿನ ಕುವೆಟ್ಟುವಿನ 9ನೇ ತರಗತಿ ವಿದ್ಯಾರ್ಥಿ ಸುಮಂತ್ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸದನದಲ್ಲಿ ಶಾಸಕ ಹರೀಶ್ ಪೂಂಜಾ ಧ್ವನಿ ಎತ್ತಿದ್ದಾರೆ. ಈ ಪ್ರಕರಣವನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು ಎಂದು ಶಾಸಕ ಹರೀಶ್ ಪೂಂಜಾ ಆಗ್ರಹಿಸಿದ್ದಾರೆ.
ಸೋಮವಾರ ವಿಧಾನಸಭೆಯ ಸದನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಶಾಸಕ ಹರೀಶ್ ಪೂಂಜಾ, ಗೃಹ ಸಚಿವರ ಗಮನವನ್ನು ಈ ಪ್ರಕರಣದತ್ತ ಸೆಳೆದರು. “ಇದು ಕೇವಲ ಒಬ್ಬ ಬಾಲಕನ ಸಾವಿನ ತನಿಖೆಯಲ್ಲ. ಈ ಘಟನೆ ಬಗ್ಗೆ ಜಿಲ್ಲೆಯಾದ್ಯಂತ ಜನರು ತೀವ್ರ ಆತಂಕ ವ್ಯಕ್ತಪಡಿಸುತ್ತಿದ್ದಾರೆ” ಎಂದು ಅವರು ಹೇಳಿದರು.
ಸುಮಂತ್ ಸಾವಿನ ಹಿಂದಿರುವ ಸತ್ಯಾಸತ್ಯತೆಗಳನ್ನು ಸಮಗ್ರವಾಗಿ ತನಿಖೆ ನಡೆಸಿ ಜನತೆಗೆ ಸ್ಪಷ್ಟವಾಗಿ ತಿಳಿಸಬೇಕು ಎಂದು ಒತ್ತಾಯಿಸಿದ ಅವರು, ಪ್ರಕರಣವನ್ನು ಲಘುವಾಗಿ ಪರಿಗಣಿಸದೇ ನ್ಯಾಯ ದೊರಕಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ದುರ್ಘಟನೆ ಸಂಬಂಧ ಶೀಘ್ರ ಮತ್ತು ಪಾರದರ್ಶಕ ತನಿಖೆ ನಡೆಯಬೇಕೆಂಬುದು ಜಿಲ್ಲೆಯ ಜನರ ನಿರೀಕ್ಷೆಯಾಗಿದೆ. ಈ ಪ್ರಕರಣದ ಸತ್ಯಾ ಸತ್ಯತೆಯು ಆದಷ್ಟು ಶೀಘ್ರವಾಗಿ ಹೊರಬರಲಿ, ಬಾಲಕನ ಕುಟುಂಬದ ಪರವಾಗಿ ನಾನು ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದರು.
ಇದಕ್ಕೆ ಉತ್ತರಿಸಿದ ಗೃಹ ಸಚಿವರಾದ ಡಾ. ಪರಮೇಶ್ವರ್ ಅವರು, “ಶಾಸಕರು ಬಹಳ ಗಂಭೀರವಾದ ಪ್ರಶ್ನೆಯನ್ನೇ ಕೇಳಿದ್ದಾರೆ. ವಿದ್ಯಾರ್ಥಿ ೧೫ ವರ್ಷದ ಬಾಲಕನ ಸಾವಿನ ಪ್ರಕರಣದ ತನಿಖೆಗಾಗಿ ನಾಲ್ಕು ತಂಡಗಳನ್ನು ರಚಿಸಿ ತನಿಖೆ ನಡೆಸುತ್ತಿದ್ದೇವೆ. ಸತ್ಯ ಆದಷ್ಟು ಶೀಘ್ರವಾಗಿ ಹೊರಬರುತ್ತದೆ. ಕೊಲೆಯೇ ಆಗಿದ್ದರೆ ಆರೋಪಿಗಳನ್ನು ತಕ್ಷಣವೇ ಬಂಧಿಸುತ್ತೇವೆ. ಶಾಸಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಈ ಪ್ರಕರಣದ ತನಿಖೆಯನ್ನು ಶೀಘ್ರವೇ ನಡೆಸುವಂತೆ ಪೊಲೀಸರಿಗೆ ಸೂಚನೆ ನೀಡುತ್ತೇನೆ” ಎಂದರು.

ಬಾಲಕನ ಮೃತದೇಹ ತೋಟದ ಕೆರೆಯಲ್ಲಿ ಪತ್ತೆಯಾದ ದಿನವೇ ಶಾಸಕ ಹರೀಶ್ ಪೂಂಜಾ ಸ್ಥಳಕ್ಕೆ ಭೇಟಿ ನೀಡಿ, ಶೀಘ್ರವೇ ಪಕ್ಷಾತೀತವಾಗಿ ತನಿಖೆ ನಡೆಸುವಂತೆ ಪೊಲೀಸ್ ಅಧಿಕಾರಿಗಳನ್ನು ಆಗ್ರಹಿಸಿದ್ದರು. ಆದರೆ, ಇಲ್ಲಿಯವರೆಗೆ ಪ್ರಕರಣದ ತನಿಖೆಯಲ್ಲಿ ಯಾವುದೇ ರೀತಿಯ ಬೆಳವಣಿಗೆಗಳು ಕಂಡು ಬರದ ಹಿನ್ನಲೆಯಲ್ಲಿ ವಿಧಾನಸಭೆಯಲ್ಲಿ ನ್ಯಾಯಕ್ಕಾಗಿ ಸರ್ಕಾರವನ್ನು ಆಗ್ರಹಿಸಿದರು.

