ಮಂಗಳೂರು : ರಾಜ್ಯದಲ್ಲಿ ಅಭಿವೃದ್ಧಿ ಚಟುವಟಿಕೆಯನ್ನು ಸಂಪೂರ್ಣವಾಗಿ ಮರೆಮಾಚಿ, ಕಳೆದ ಒಂದೂವರೆ ವರ್ಷದಿಂದ ಮುಖ್ಯಮಂತ್ರಿ ಯಾರಾಗಬೇಕೆಂಬ ಆಂತರಿಕ ಗೊಂದಲದಲ್ಲೇ ಕಾಂಗ್ರೆಸ್ ತನ್ನ ಕಾಲಹರಣ ಮಾಡಿದೆ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಆರೋಪಿಸಿದ್ದಾರೆ. ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೆಂಬರ್ ಕ್ರಾಂತಿ ಎನ್ನುವಂತದ್ದನ್ನು ಕಾಂಗ್ರೆಸ್ಸಿಗರೇ ಹುಟ್ಟು ಹಾಕಿದ್ದು ಇದರ ಬಗ್ಗೆಯೇ ಎಲ್ಲ ಸಚಿವರು, ಆಡಳಿತ ಪಕ್ಷದ ಶಾಸಕರು ಚರ್ಚೆಗಳನ್ನು ಮಾಡುತ್ತಾ, ಗ್ರಾಮ ಮಟ್ಟದಿಂದ ಹಿಡಿದು ವಿಧಾನಸೌಧದ ತನಕ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿರುವುದನ್ನು ನಾವು ಗಮನಿಸುತ್ತಿದ್ದೇವೆ ಎಂದರು.
ನವೆಂಬರ್ ನಲ್ಲಿ ಯಾರು ಮುಖ್ಯಮಂತ್ರಿ ಆಗುತ್ತಾರೆನ್ನುವ ಬಗ್ಗೆ ಬಿಜೆಪಿಗೇನು ಸಂಬಂಧವಿಲ್ಲ. ಆದರೆ ಇವರ ಗೊಂದಲದ ಒಟ್ಟು ವಾತವರಣ ನೋಡಿದರೆ, ಬೇರೆ ಬೇರೆ ಆಡಳಿತ ಪಕ್ಷದ ಶಾಸಕರು ಗುಂಪು ಗುಂಪುಗಳಾಗಿ, ವಿಂಗಡಣೆಗಳಾಗಿ ಮೀಟಿಂಗ್ ಗಳನ್ನು ಮಾಡುವುದನ್ನು ನೋಡಿದರೆ ಜನವರಿ ಹೊತ್ತಿಗೆ ಈ ಸರಕಾರ ಪತನ ಆಗುತ್ತದೆ ಎನ್ನುವಂತದ್ದು ಕಣ್ಣಮುಂದೆ ಕಾಣುತ್ತಿದೆ. ಈ ಹಿನ್ನಲೆಯಲ್ಲಿ ಬಿಜೆಪಿ ಮಧ್ಯಂತರ ಚುನಾವಣೆಗೆ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದೇವೆ. ಬಹುಮತವನ್ನು ರಾಜ್ಯದ ಜನರು ಕೊಟ್ಟಾಗ, ಒಳ್ಳೆಯ ಆಡಳಿತವನ್ನು ಕೊಡುತ್ತಾರೆನ್ನುವ ನಿರೀಕ್ಷೆಯನ್ನಿಟ್ಟುಕೊಂಡಿದ್ದೆವು. ಅದರ ಬದಲಾಗಿ ಆಂತರಿಕ ಕಚ್ಚಾಟದಲ್ಲೇ ಈ ಸರ್ಕಾರ ಮುಳುಗಿ, ಅಭಿವೃದ್ಧಿ ಎನ್ನುವಂತದ್ದು ಕರ್ನಾಟಕ ಜನತೆಗೆ ಒಂದು ರೀತಿ ಮರೆತು ಹೋದಂತಹ ವಾತಾವರಣ ನಿರ್ಮಾಣವಾಗಿದೆ. ಹಾಗಾಗಿ ತನ್ನ ಆಂತರಿಕ ಬೇಗುದಿಯಿಂದ ಈ ಸರ್ಕಾರ ಕುಸಿದು ಬೀಳುತ್ತದೆ, ಬಿಜೆಪಿ ಮದ್ಯಂತ ಚುನಾವಣೆಯನ್ನು ಎದುರಿಸಲು ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ ಎಂದರು. ಇನ್ನು, ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ ಅಭಿವೃದ್ಧಿ ವಿಚಾರ ಇಟ್ಟುಕೊಂಡು ದೆಹಲಿಗೆ ಹೋಗುವುದಿಲ್ಲ. ಎಲ್ಲಾ ಶಾಸಕರು ನರೇಂದ್ರ ಮೋದಿಯವರ ಮೇಲೆ ಆರೋಪ ಮಾಡಿದರಂತ ಹೇಳಿ, ಸ್ಪೆಷಲ್ ವಿಮಾನದಲ್ಲಿ ಹೋಗಿ ಪ್ರತಿಭಟನೆ ಮಾಡಿದ ಉದಾಹರಣೆಗಳಿವೆ. ರಾಜ್ಯದ ಅಭಿವೃದ್ಧಿಯನ್ನಿಟ್ಟುಕೊಂಡು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ದೆಲ್ಲಿಗೆ ಹೋಗುವುದನ್ನು ಬಿಟ್ಟಿದ್ದಾರೆ. ಬದಲಾಗಿ, ತನ್ನ ಕುರ್ಚಿಯನ್ನು ಉಳಿಸ್ಬೇಕು ಎನ್ನುವ ಚರ್ಚೆಗಳೇ ದೆಲ್ಲಿಗೆ ನಡೆಸುತ್ತಿದ್ದಾರೆ.
ಈ ಸರ್ಕಾರ ಯಾವಾಗ ಕುಸಿದು ಬೀಳುತ್ತದೋ ಎಂದು ರಾಜ್ಯದ ಜನರು ಕೂಡಾ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ ಎಂದು ಹೇಳಿದರು.

