ಕಾರ್ಕಳ : ಶಾಸಕ ವಿ. ಸುನಿಲ್ ಕುಮಾರ್ ಮಿಯ್ಯಾರು ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಮೊರಾರ್ಜಿ ದೇಸಾಯಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಮದರಶಾ ಎಸ್. ಮಕಾಂದರ್ ಅವರು ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ನಿರಂತರವಾಗಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ, ವಿದ್ಯಾರ್ಥಿಗಳಿಗೆ ಬಸ್ಕಿ ಹೊಡೆಸುವುದು ಇತರ ದೈಹಿಕ ಶಿಕ್ಷೆಗಳನ್ನು ನೀಡುವುದು ಸೇರಿದಂತೆ ವಿದ್ಯಾರ್ಥಿಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುತ್ತಾರೆ. ವಿದ್ಯಾರ್ಥಿಗಳ ಜನಿವಾರ ಮತ್ತು ಕೈ ಮತ್ತು ಕುತ್ತಿಗೆ ದಾರಗಳನ್ನು ತೆಗೆಸಿ ಧಾರ್ಮಿಕ ನಂಬಿಕೆಗಳಿಗೆ ಘಾಸಿ ಮಾಡಿರುತ್ತಾರೆನ್ನುವ ಆರೋಪವಿದೆ. ಈ ಹಿನ್ನೆಲೆಯಲ್ಲಿ ಸುನಿಲ್ ಕುಮಾರ್ ವಸತಿ ಶಾಲೆಗೆ ಭೇಟಿ ನೀಡಿ, ಚರ್ಚಿಸಿದ್ದಾರೆ.
ಘಟನೆ ಮರುಕಳಿಸಬಾರದೆಂದು ಅಧಿಕಾರಿಗಳಿಗೆ ಎಚ್ಚರಿಕೆ
ಮೊರಾರ್ಜಿ ವಸತಿ ಶಾಲೆಯು ಉತ್ತಮ ಹಾಗೂ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು ಇದೀಗ ಇಂತಹ ಶಿಕ್ಷಕರ ದುರ್ವತ್ರನೆಯಿಂದಾಗಿ ಶಾಲೆಯ ವಾತಾವರಣ ಕೆಡಿಸಿದಂತಾಗಿದೆ. ಈ ರೀತಿಯ ಘಟನೆಗಳು ನಮ್ಮ ಕಾರ್ಕಳದಲ್ಲಿ ನಡೆದಿರುವುದು ಅತ್ಯಂತ ಖಂಡನೀಯ. ಇಂತಹ ಘಟನೆ ಸಮಾಜದ ನಡುವೆ ಒಡಕು ಸೃಷ್ಟಿಸಲು ಕುಮ್ಮಕ್ಕು ನೀಡಿದಂತಾಗುತ್ತದೆ. ಆದ ಕಾರಣ ಇಂತಹ ಶಿಕ್ಷಕರಿಗೆ ಶಿಕ್ಷೆ ಆಗುವಂತೆ ಹಾಗೂ ಈ ರೀತಿಯ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸುನಿಲ್ ಕುಮಾರ್ ಎಚ್ಚರಿಕೆ ನೀಡಿದರು. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಬೋಧನ ಕ್ರಮಗಳು, ವಸತಿ ನಿಲಯಗಳ ಮೂಲಭೂತ ಸೌಕರ್ಯ ಮತ್ತು ಊಟೋಪಚಾರದ ಕುರಿತು ಮುಕ್ತವಾಗಿ ಮಾತುಕತೆ ನಡೆಸಿ ಯಾವುದೇ ಸಮಸ್ಯೆಗಳು ಇದ್ದರೂ ತನ್ನ ಗಮನಕ್ಕೆ ತರುವಂತೆ ಹಾಗೂ ಭಯಮುಕ್ತರಾಗಿ ಉತ್ತಮ ಶಿಕ್ಷಣ ಪಡೆಯುವ ಕಡೆ ಗಮನ ಹರಿಸುವಂತೆ ಸುನಿಲ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಕಾರ್ಕಳ ತಹಶೀಲ್ದಾರ್ ಪ್ರದೀಪ್ ಆರ್, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪ್ರಾಂಶುಪಾಲರು ಶಾಲೆಯ ಶಿಕ್ಷಕ ವರ್ಗ, ಅಧಿಕಾರಿಗಳು, ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.

