ಹೊಸದಿಲ್ಲಿ : “ನ್ಯಾಯಾಲಯದಲ್ಲಿ ಜೂಜಾಡಬೇಡಿ” – ಮಹೇಶ್ ಶೆಟ್ಟಿ ತಿಮರೋಡಿಗೆ ಸುಪ್ರೀಂ ಖಡಕ್ ಎಚ್ಚರಿಕೆ !

ಹೊಸದಿಲ್ಲಿ, ಜು. 13 : ಸೌಜನ್ಯ ಪ್ರಕರಣದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡೀಪಾರು ಮಾಡಿ ಪುತ್ತೂರು ಉಪ ವಿಭಾಗಾಧಿಕಾರಿ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಇದೀಗ ಮಹೇಶ್ ಶೆಟ್ಟಿ ತಿಮರೋಡಿಗೆ ಭಾರಿ ಹಿನ್ನಡೆಯಾಗಿದೆ. ಪುತ್ತೂರು ವಿಭಾಗಾಧಿಕಾರಿ ಅವರ ಆದೇಶವನ್ನು ಎತ್ತಿಹಿಡಿರುವ ಸುಪ್ರೀಂ ಕೋರ್ಟ್ ಮಹೇಶ್ ಶೆಟ್ಟಿ ಅವರ ಮೇಲ್ಮನವಿಯನ್ನು ವಜಾಗೊಳಿಸಿದ್ದು “ನ್ಯಾಯಾಲಯದಲ್ಲಿ ಜೂಜಾಡಬೇಡಿ” ಎಂದು ತರಾಟೆಗೆ ತೆಗೆದುಕೊಂಡಿದೆ.

Advertisement

ನ್ಯಾಯಮೂರ್ತಿ ಸಂಜಯ್ ಕುಮಾರ್ ಹಾಗೂ ನ್ಯಾಯಮೂರ್ತಿ ಸಂಜೀವ್ ಸಚ್ ದೇವ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿತು. ಗಡಿಪಾರು ಆದೇಶವನ್ನು ಪ್ರಶ್ನಿಸಿ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಲು ನಿರಾಕರಿಸಿ, ಕಾನೂನು ಪ್ರಕಾರ ಸೂಕ್ತ ಸಕ್ಷಮ ಪ್ರಾಧಿಕಾರವನ್ನೇ ಸಂಪರ್ಕಿಸುವಂತೆ ನಿರ್ದೇಶಿಸಿತು. ವಿಚಾರಣೆ ವೇಳೆ ಪೀಠವು, ಮಹೇಶ್ ಶೆಟ್ಟಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಈಗಾಗಲೇ ವಜಾಗೊಳಿಸಿರುವುದನ್ನು ಪ್ರಸ್ತಾಪಿಸಿತು. ಲಭ್ಯವಿರುವ ಶಾಸನಬದ್ಧ ಪರಿಹಾರಗಳನ್ನು ಬಳಸಿಕೊಳ್ಳುವ ಬದಲು ನೇರವಾಗಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವುದರ ಕುರಿತು ನ್ಯಾಯಪೀಠವು ಪ್ರಶ್ನಿಸಿತು.

ತಿಮರೋಡಿ ವಾದ ತಿರಸ್ಕರಿಸಿದ ಸುಪ್ರೀಂ

ಮಹೇಶ್ ಶೆಟ್ಟಿ ಅವರ ಪರ ವಾದ ಮಂಡಿಸಿದ ವಕೀಲರು, ಈ ಗಡಿಪಾರು ಪ್ರಕರಣವನ್ನು ‘ಸೌಜನ್ಯ ಪ್ರಕರಣ’ಕ್ಕೆ ಸಂಯೋಜಿಸಲು ಯತ್ನಿಸಿದರು ಹಾಗೂ ಸ್ಥಳೀಯ ದೇವಸ್ಥಾನಕ್ಕೆ ಸಂಬಂಧಿಸಿದ ವ್ಯಕ್ತಿಗಳು ತಮ್ಮನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ವಾದಿಸಿದರು. ಆದರೆ ಸುಪ್ರೀಂ ಕೋರ್ಟ್ ಈ ವಾದವನ್ನು ತೀವ್ರವಾಗಿ ತಿರಸ್ಕರಿಸಿದ್ದು, ಅಸಂಬಂಧಿತ ವಿಷಯಗಳನ್ನು ಬಳಸಿ ಸಾರ್ವಜನಿಕ ಭಾವನೆಗಳನ್ನು ಕೆರಳಿಸುವುದು ಅಥವಾ ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ ಎಂದು ತರಾಟೆ ತೆಗೆದುಕೊಂಡಿತು.

ನ್ಯಾಯಾಲಯದಲ್ಲಿ ಜೂಜಾಡಬೇಡಿ – ತೀವ್ರ ಆಕ್ಷೇಪ

ಒಂದು ವೇಳೆ ಮಹೇಶ್ ಶೆಟ್ಟಿ ಅವರಿಗೆ ಗಡಿಪಾರು ಆದೇಶದ ಕುರಿತು ಆಕ್ಷೇಪಣೆಗಳಿದ್ದರೆ, ಸಂಬಂಧಪಟ್ಟ ಮೇಲ್ಮನವಿ ಪ್ರಾಧಿಕಾರದ ಮುಂದೆ ಮೇಲ್ಮನವಿ ಸಲ್ಲಿಸುವ ಮೂಲಕ ಸೂಕ್ತ ಕಾನೂನು ಪರಿಹಾರ ಪಡೆದುಕೊಳ್ಳಲು ಸ್ವತಂತ್ರರಾಗಿದ್ದಾರೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. ಅರ್ಜಿದಾರರಿಗೆ ಯಾವುದೇ ರೀತಿಯ ಪರಿಹಾರ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್, ಅರ್ಜಿಯನ್ನು ಸಂಪೂರ್ಣವಾಗಿ ವಜಾಗೊಳಿಸಿತು. ಇದೇ ವೇಳೆ ಊಹಾತ್ಮಕ ವಾದಗಳನ್ನು ಮಂಡಿಸುವುದರ ವಿರುದ್ಧ ವಕೀಲರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ ನ್ಯಾಯಪೀಠವು, “ಈ ನ್ಯಾಯಾಲಯದಲ್ಲಿ ಜೂಜಾಟವಾಡಬೇಡಿ. ಒಮ್ಮೆ ಬಾಜಿ ಕಟ್ಟಿದರೆ ಮುಗಿಯಿತು, ಈ ನ್ಯಾಯಾಲಯದಲ್ಲಿ ಅಂತಹ ಅವಕಾಶಗಳಿಗೆ ಆಸ್ಪದವಿಲ್ಲ” ಎಂದು ಮೌಖಿಕವಾಗಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.

ಪುತ್ತೂರು ಉಪವಿಭಾಗಾಧಿಕಾರಿಗಳು 2026ರ ಮಾರ್ಚ್ 13ರಂದು ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿಗೆ ಗಡಿಪಾರು ಮಾಡಿ ಮೂರನೇ ಬಾರಿ ಆದೇಶ ಹೊರಡಿಸಿದ್ದರು. ಇದನ್ನು ರದ್ದುಗೊಳಿಸುವಂತೆ ಕೋರಿ ಮಹೇಶ್ ಶೆಟ್ಟಿ ಅವರು ಹೈಕೋರ್ಟ್ ಗೆ ಸಲ್ಲಿಸಿದ್ದ ರಿಟ್ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ನ ಏಕಸದಸ್ಯ ಪೀಠ ಮತ್ತು ವಿಭಾಗೀಯ ಪೀಠಗಳು ತಿಮರೋಡಿ ಅವರ ಅರ್ಜಿಯನ್ನು ತಿರಸ್ಕರಿಸಿದ್ದರಿಂದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಸುಪ್ರೀಂಕೋರ್ಟ್ ನ ನ್ಯಾಯಪೀಠವೂ ಪುತ್ತೂರು ಎಸಿ ಅವರು ನೀಡಿರವ ಆದೇಶವನ್ನು ಎತ್ತಿ ಹಿಡಿದಿರುವ ಹೈಕೋರ್ಟ್ ಪೀಠಗಳ ತೀರ್ಪನ್ನೇ ಎತ್ತಿ ಹಿಡಿದಿದೆ. ಹೀಗಾಗಿ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಹಿನ್ನಡೆಯಾಗಿದೆ.

ಏನು ಹೇಳಿತ್ತು ಹೈಕೋರ್ಟ್?

ಗಡೀಪಾರು ಅದೇಶ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ಹೈಕೋರ್ಟ್ ನ ಏಕಸದಸ್ಯ ನ್ಯಾಯಪೀಠವು ಸರ್ಕಾರದ ಮುಂದೆ ಮೇಲ್ಮನವಿ ಸಲ್ಲಿಸುವಂತೆ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ತಿಮರೋಡಿ ಅವರು ವಿಭಾಗೀಯ ನ್ಯಾಯಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಕೆಎಸ್ ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠವು ಈ ಆದೇಶದಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎಂದು ತಿಳಿಸಿ ಮೇಲ್ಮನವಿ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಮಹೇಶ್ ಶೆಟ್ಟಿ ತಿಮರೋಡಿ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದರು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ  : ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್ ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಮೋದಿ ಪೋಸ್ಟ್ ನಿರ್ಬಂಧ – ಕ್ಷಮೆಯಾಚಿಸಿದ ಟೆಕ್‌ ದೈತ್ಯ ಮೆಟಾ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಹೊಸದೆಹಲಿ : ಸಿಜೆಪಿ ಪ್ರತಿಭಟನೆಯಲ್ಲಿ 2,873 ಅಪರಾಧಿಗಳು – ಫೋಕ್ಸೋ, ಕೊಲೆ ಅಪರಾಧಿಗಳು ಭಾಗಿ !!

⚠️ Contents are protected on this website.