ದಿಲ್ಲಿ, ಫೆ. 13 : T-20 ವಿಶ್ವಕಪ್ ಪಂದ್ಯಾಕೂಟ ಆರಂಭಗೊಂಡು ಹಲವಾರು ಪಂದ್ಯಗಳನ್ನು ಮುಗಿಸಿ ಸಾಗುತ್ತಿದೆ. ಈ ಮಧ್ಯೆ ಪಾಕಿಸ್ತಾನ ಹಾಗೂ ನಮೀಬಿಯಾದ ಬೌಲರ್ ಗಳ ಅಸಂಪ್ರದಾಯಿಕ ಬೌಲಿಂಗ್ ಶೈಲಿಯ ಬಗ್ಗೆ ವ್ಯಾಪಕ ಚರ್ಚೆ ಆರಂಭವಾಗಿದೆ. ಪಾಕಿಸ್ತಾನದ ಉಸ್ಮಾನ್ ತಾರಿಕ್, ನಮೀಬಿಯಾದ ನಾಯಕ ಜೆರಾಲ್ಡ್ ಎರಾಸ್ಮಸ್ ಬೌಲಿಂಗ್ ಶೈಲಿ ಬಗ್ಗೆ ವ್ಯಾಪಕ ವಿರೋಧದ ಮಾತುಗಳು ಕೇಳಿ ಬರುತ್ತಿದೆ. ಸ್ವತ: ಮೈದಾನದಲ್ಲೇ ಆಸ್ಟ್ರೇಲಿಯಾ ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ ಅವರು ಉಸ್ಮಾನ್ ತಾರಿಕ್ ಅವರ ಬೌಲಿಂಗ್ ಶೈಲಿಯನ್ನು ಅಣಕವಾಡಿ, ವಿರೋಧಿಸಿದ್ದಾರೆ. ಈ ಬೌಲಿಂಗ್ ಶೈಲಿಗೆ ಮುಂದಿನ ಪಂದ್ಯಗಳಲ್ಲಿ ಅವಕಾಶ ಸಿಗುತ್ತೋ ಅಥವಾ ಐಸಿಸಿ ಈ ಬಗ್ಗೆ ಕ್ರಮ ಕೈಗೊಳ್ಳಲು ಮುಂದಾಗುತ್ತದೋ ಎಂಬುದನ್ನು ಕಾದು ನೋಡಬೇಕಿದೆ.
ಭಾರತ ಮತ್ತು ಪಾಕಿಸ್ತಾನ ತಂಡಗಳೆರಡೂ ಫೆಬ್ರವರಿ 15ರಂದು ನಡೆಯಲಿರುವ ಹೈವೋಲ್ಟೇಜ್ ಪಂದ್ಯಕ್ಕೆ ಅಣಿಯಾಗುತ್ತಿರುವ ಹೊತ್ತಲ್ಲೇ ಹೊಸ ವಿವಾದವೊಂದು ಮೈದಳೆದು ನಿಂತಿದೆ. ಪಾಕಿಸ್ತಾನದ ಸ್ಪಿನ್ ಬೌಲರ್ ಉಸ್ಮಾನ್ ತಾರಿಕ್ ಅವರ ಬೌಲಿಂಗ್ ಶೈಲಿಯ ಬಗ್ಗೆ ತೀವ್ರ ಪ್ರಶ್ನೆಗಳೆದ್ದಿವೆ. ಅವರು ಬೌಲಿಂಗ್ ಶೈಲಿ ಸಮರ್ಪಕವಾಗಿಲ್ಲ, ಥ್ರೋದಂತೆ ಕಂಡುಬರುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಅದಕ್ಕಿಂತಲೂ ಮುಖ್ಯವಾಗಿ ಅವರು ಬೌಲಿಂಗ್ ವೇಳೆ ಒಂದು ಕ್ಷಣ ನಿಂತು (Pauce) ಚೆಂಡೆಸೆಯುತ್ತಿದ್ದಾರೆ ಎಂಬುದೇ ಚರ್ಚೆಗೆ ಬಹುದೊಡ್ಡ ಕಾರಣವಾಗಿದೆ.
ಅಮೇರಿಕಾ-ಪಾಕಿಸ್ತಾನ ಪಂದ್ಯದಲ್ಲಿ ಉಸ್ಮಾನ್ ತಾರಿಕ್ ಬೌಲಿಂಗ್ ಮಾಡುತ್ತಿದ್ದ ವೇಳೆ ಕ್ರೀಡಾಂಗಣದ ಗ್ಯಾಲರಿಯಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಅಮೆರಿಕ ತಂಡದ ಅಭಿಮಾನಿಗಳು ಅವರ ಬೌಲಿಂಗ್ ಶೈಲಿಯನ್ನು ಅಣಕವಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಅವರ ಬೌಲಿಂಗ್ ಶೈಲಿಯ ಬಗ್ಗೆ ಅನೇಕ ಅನುಮಾನ ವ್ಯಕ್ತವಾಗಿದ್ದು, ಚಕಿಂಗ್ ಎಂಬ ಆರೋಪ ಕೇಳಿ ಬಂದಿದೆ. ಸಾಮಾಜಿಕ ಜಾಲತಾಣದಲ್ಲೂ ಈ ಬಗ್ಗೆ ಅನೇಕ ಚರ್ಚೆಗಳು ನಡೆದಿವೆ. ಅವರು ಉದ್ದೇಶಪೂರ್ವಕವಾಗಿ ಚೆಂಡನ್ನು ಎಸೆಯುತ್ತಿದ್ದು ಐಸಿಸಿಯು ಅವರನ್ನು ನಿಷೇಧಿಸಬೇಕು ಎಂಬ ಅಭಿಪ್ರಾಯ ಕೇಳಿ ಬಂದಿದೆ. ಉಸ್ಮಾನ್ ತಾರಿಕ್ ಅವರ ಬೌಲಿಂಗ್ ಸಾಮರ್ಥ್ಯವನ್ನು ಈ ಹಿಂದೆ ಪಾಕಿಸ್ತಾನ ಕ್ರಿಕೆಟ್ ನ ಬೌಲಿಂಗ್ ದಂತಕತೆ ವಸೀಂ ಅಕ್ರಂ ಅವರು ಹೊಗಳಿದ್ದರು. ಆದರೆ ಇದೀಗ ಆಸ್ಟ್ರೇಲಿಯಾ ಆಲ್ರೌಂಡರ್ ಕ್ಯಾಮರೂನ್ ಗ್ರೀನ್, ಇಂಗ್ಲೆಂಡ್ ಬ್ಯಾಟರ್ ಟಾಮ್ ಬ್ಯಾಂಟನ್ ಮತ್ತು ಭಾರತದ ಮಾಜಿ ಕ್ರಿಕೆಟರ್ ಶ್ರೀವತ್ಸ ಗೋಸ್ವಾಮಿ ಟೀಕಿಸಿದ್ದಾರೆ.
ಇದೇ ಶೈಲಿಯಲ್ಲಿ ಬೌಲಿಂಗ್ ಮಾಡುತ್ತಿರುವ ನಮೀಬಿಯಾದ ನಾಯಕ ಜೆರಾಲ್ಡ್ ಎರಾಸ್ಮಸ್ ಬೌಲಿಂಗ್ ಶೈಲಿಯೂ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೊಳಪಟ್ಟಿದೆ. ಇನ್ನು ಪಂದ್ಯ ನಡೆಯುತ್ತಿದ್ದ ವೇಳೆ ಅಂಪೈರ್ ರಾಡ್ ಟಕ್ಕರ್ ಅವರ ಬೌಲಿಂಗ್ ಅನ್ನು ಡೆಡ್ ಬಾಲ್ ಎಂದು ಘೋಷಿಸಿದ ಬಳಿಕ ಸಿಟ್ಟಾದ ಘಟನೆ ನಡೆದಿದ್ದು ಇದು ಬಹಳ ಗಮನ ಸೆಳೆದಿದೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರ ಬೌಲಿಂಗ್ ಶೈಲಿಯ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಬಹಳಷ್ಟು ಮಂದಿ ಬಹುಷಃ ಇವರಿಗೆ ಉಸ್ಮಾನ್ ತಾರಿಕ್ ಅವರೇ ಪ್ರೇರಣೆಯಾಗಿರಬಹುದು ಎಂದು ವ್ಯಂಗ್ಯವಾಡಿದ್ದಾರೆ.
ಜೆರಾಲ್ಡ್ ಎರಾಸ್ಮಸ್ ಅವರ ಬೌಲಿಂಗ್ ಶೈಲಿಯ ಬಗ್ಗೆಯೇ ತೀವ್ರ ಅನುಮಾನ ವ್ಯಕ್ತವಾಗಿದ್ದು, ಜೆರಾಲ್ಡ್ ಎರಾಸ್ಮಸ್ ಅವರ ಬೌಲಿಂಗ್ ಸಹ ಉಸ್ಮಾನ್ ತಾರಿಕ್ ರೀತಿಯಲ್ಲಿಯೇ ಅಸಂಪ್ರದಾಯಿಕವಾಗಿದೆ. ಆದರೆ ಒಂದೇ ವ್ಯತ್ಯಾಸ ಎಂದರೆ ಉಸ್ಮಾನ್ ತಾರಿಕ್ ಚೆಂಡೆಸೆಯುವ ವೇಳೆ ಒಮ್ಮೆ ನಿಂತು ಮತ್ತೆ ಚೆಂಡೆಸೆಯುತ್ತಾರೆ. ಆದರೆ ಜೆರಾಲ್ಡ್ ಎರಾಸ್ಮಸ್ ಅವರು ಮಾತ್ರ ಈ ಕೆಲಸವನ್ನು ಮಾಡುವುದಿಲ್ಲ. ಬದಲಾಗಿ ನೇರವಾಗಿ ಎಸೆಯುತ್ತಾರೆ. ಅವರ ಈ ಬೌಲಿಂಗ್ ಶೈಲಿಯನ್ನು ಭಾರತ ತಂಡದ ಆಟಗಾರರು ಪ್ರಶ್ನೆ ಮಾಡಿಲ್ಲ. ಹೀಗಾಗಿ ಒಂದು ವೇಳೆ ಕೊಲಂಬೊದಲ್ಲಿ ಉಸ್ಮಾನ್ ತಾರಿಕ್ ಬೌಲಿಂಗ್ ವೇಳೆ ಭಾರತದ ಆಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದೇ ಆದಲ್ಲಿ ಪಾಕ್ ಗೆ ಎರಾಸ್ಮಸ್ ವಿಚಾರವೇ ದೊಡ್ಡ ಅಸ್ತ್ರವಾಗುವ ಸಾಧ್ಯತೆ ಇದೆ.
ಉಸ್ಮಾನ್ ತಾರಿಕ್ ಬೌಲಿಂಗ್ ಶೈಲಿ ಬಗ್ಗೆ ಅನುಮಾನ ವ್ಯಕ್ತವಾಗಿರುವುದು ಇದೇ ಮೊದಲೇನಲ್ಲ. 42ರ ಹರೆಯದ ಬೌಲರ್ ಚೆಂಡೆಸೆಯುವ ಶೈಲಿ ವಿಚಾರವಾಗಿ ಪಾಕಿಸ್ತಾನ ಸೂಪರ್ ಲೀಗ್(PSL) ನಲ್ಲೂ ಆರೋಪ ಕೇಳಿ ಬಂದಿತ್ತು. ಆದರೆ ಅವರ ಬೌಲಿಂಗ್ ಸಮರ್ಪಕವಾಗಿದೆ ಎಂಬ ತೀರ್ಪನ್ನು ಅಲ್ಲಿನ ತಜ್ಞರು ಕೊಟ್ಟದ್ದರಿಂದ ಅವರು ಮುಂದುವರಿಯುವಂತಾಯಿತು. ಇದೀಗ ಟಿ20 ವಿಶ್ವಕಪ್ ಪ್ರಾರಂಭದಲ್ಲಿ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವೆ ಅಭ್ಯಾಸ ಪಂದ್ಯ ನಡೆದಾಗ ಕ್ಯಾಮರೂನ್ ಗ್ರೀನ್ ಅವರು ಔಟಾಗಿ ಪೆಲಿವಿಯನ್ ಗೆ ಹೋಗುತ್ತಿದ್ದ ಸಂದರ್ಭದಲ್ಲಿ ತಾರಿಕ್ ಬೌಲಿಂಗ್ ಶೈಲಿಯನ್ನು ಅಣಕ ಮಾಡಿ ತೋರಿಸಿದ್ದರು. ಈ ವಿಡಿಯೋ ಸಹ ವೈರಲ್ ಆಗಿತ್ತು. ಆ ಪಂದ್ಯದಲ್ಲಿ ಅವರು 2 ವಿಕೆಟ್ ಪಡೆದಿದ್ದರು. ಇದೀಗ ಭಾರತದ ಪಂದ್ಯಕ್ಕೂ ಮುನ್ನ ಈ ವಿವಾದ ಮತ್ತಷ್ಟು ಜೋರಾಗಿದೆ.
ಈ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಶ್ರೀವತ್ಸ ಗೋಸ್ವಾಮಿ ಅವರು ತಾರಿಕ್ ಬೌಲಿಂಗ್ ವಿಚಾರವಾಗಿ ಅನೇಕ ಪ್ರಶ್ನೆಗಳನ್ನು ಎತ್ತಿದ್ದಾರೆ. ಫುಟ್ಬಾಲ್ ನಲ್ಲಿ ಕೂಡ ಪೆನಾಲ್ಟಿ ರನ್ ಅಪ್ ವೇಳೆ ನಿಂತು ಹೊಡೆಯಬಾರದು ಎಂಬ ನಿಯಮವಿದೆ. ಆದರೆ ಕ್ರಿಕೆಟ್ ನಲ್ಲಿ ಯಾಕಿಲ್ಲ? ಇದನ್ನು ಮುಂದುವರಿಯಲು ಬಿಡುವುದು ಸರಿಯಲ್ಲ ಎಂದು ಟ್ವೀಟ್ ಮಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

