ವಾಷಿಂಗ್ಟನ್ : ಟೆಹ್ರಾನ್ ವಿರುದ್ಧದ ಭಾರೀ ನಿರ್ಬಂಧಗಳನ್ನು ತೆಗೆದುಹಾಕುವಂತೆ ಅಮೇರಿಕಾವನ್ನು ಇರಾನ್ ದೇಶ ಕೇಳಿಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ “ಈ ಬಗ್ಗೆ ನಾನು ಕೂಡಾ ಚರ್ಚೆ ನಡೆಸಲು ಸಿದ್ಧನಾಗಿದ್ದೇನೆಂದು” ಹೇಳಿಕೊಂಡಿದ್ದಾರೆ.
ಇರಾನ್ ಜೊತೆ ಮಾತುಕತೆಗೆ ಸಿದ್ದ ಎಂದ ಟ್ರಂಪ್
ನವೆಂಬರ್ 6ರಂದು ರಾತ್ರಿ ಮಧ್ಯ ಏಷ್ಯಾದ ನಾಯಕರೊಂದಿಗಿನ ಭೋಜನಕೂಟದಲ್ಲಿ ಮಾತನಾಡಿದ ಟ್ರಂಪ್ ” ಇರಾನ್ ನಾಯಕರು ತನ್ನ ದೇಶದ ಮೇಲೆ ಅಮೆರಿಕ ಹೇರಿರುವ ನಿರ್ಬಂಧಗಳನ್ನು ತೆರವುಗೊಳಿಸುವಂತೆ ಕೇಳಿಕೊಂಡಿದ್ದಾರೆ. ಅಮೆರಿಕ ಇರಾನ್ ನ ಮೇಲೆ ಅತ್ಯಂತ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಿದೆ, ಅದು ಇರಾನ್ ಗೆ ಎಷ್ಟು ಕಷ್ಟಕರವಾಗಿರಬಹುದು ಎಂದು ನನಗೆ ಗೊತ್ತು. ನಾನು ಈ ಬಗ್ಗೆ ಮಾತನಾಡಲು ಮುಕ್ತವಾಗಿದ್ದೇನೆ, ಹಾಗೂ ಈ ವಿಷಯದಲ್ಲಿ ಮುಂದೆ ಏನಾಗಲಿದೆ ಎಂದು ನೋಡೋಣ ಎನ್ನುವ ಮೂಲಕ ಇರಾನ್ ದೇಶಕ್ಕೆ ಪರೋಕ್ಷವಾಗಿ ಹೊಸ ಭರವಸೆ ನೀಡಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಹಸ್ತಕ್ಷೇಪ ನಿಲ್ಲುವವರೆಗೂ ಸಹಕಾರ ಇಲ್ಲ ಎಂದ ಖಮೇನಿ
ಆದರೆ, ಸೋಮವಾರದಂದು ಅಮೇರಿಕಾಕ್ಕೆ ಬಹಳ ಕಟುವಾಗಿ ಸಂದೇಶ ನೀಡಿದ್ದ, ಇರಾನ್ ನ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ , ವಾಷಿಂಗ್ಟನ್ ಇಸ್ರೇಲ್‌ಗೆ ಬೆಂಬಲ ನೀಡುವುದನ್ನು, ಮಿಲಿಟರಿ ನೆಲೆಗಳನ್ನು ನಿರ್ವಹಿಸುವುದನ್ನು ಮತ್ತು ಮಧ್ಯಪ್ರಾಚ್ಯದಲ್ಲಿ ಹಸ್ತಕ್ಷೇಪ ಮಾಡುವುದನ್ನು ಮುಂದುವರಿಸುವುದನ್ನು ನಿಲ್ಲಿಸುವವರೆಗೆ ಇರಾನ್ ಮತ್ತು ಅಮೆರಿಕ ನಡುವಿನ ಸಹಕಾರ ಸಾಧ್ಯವಿಲ್ಲ ಎಂದು ಹೇಳಿದ್ದರು.

