ಇಸ್ತಾಂಬುಲ್ : ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ದ ಅಂತ್ಯಗೊಂಡರೂ, ಇಸ್ರೇಲ್ ಗಾಜದಲ್ಲಿ ನಡೆಸಿದ ನರಮೇಧದಿಂದ ಉಂಟಾಗಿರುವ ವಿನಾಶದಿಂದ ಉಂಟಾಗಿರುವ ಗಾಯಗಳು ಇನ್ನೂ ಹಾಗೆಯೇ ಉಳಿದುಕೊಂಡಿದೆ. ಈ ಬೆನ್ನಲ್ಲೇ ಟರ್ಕಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಇತರ ಹಿರಿಯ ಇಸ್ರೇಲಿ ಅಧಿಕಾರಿಗಳು ಗಾಜಾದಲ್ಲಿ ನರಮೇಧ ನಡೆಸಿದ್ದಾರೆ ಎಂದು ಆರೋಪಿಸಿ ಅರೆಸ್ಟ್ ವಾರಂಟ್ ಹೊರಡಿಸಿದೆ.
ಗಾಜಾದಲ್ಲಿ ಇಸ್ರೇಲ್ ಅಧಿಕಾರಿಗಳು ವ್ಯವಸ್ಥಿತವಾಗಿ ಜನಾಂಗೀಯ ಹತ್ಯೆ ಮತ್ತು ಮಾನವೀಯತೆ ವಿರುದ್ಧ ಅಪರಾಧಗಳನ್ನು ಎಸಗಿದ್ದಾರೆ. ಅಲ್ಲದೆ, ದಾಳಿಗೊಳಗಾದವರ ರಕ್ಷಣೆಗೆಂದು ಟರ್ಕಿ ನಿರ್ಮಿಸಿದ್ದ ‘ಟರ್ಕಿಶ್-ಪ್ಯಾಲೆಸ್ತೀನ್ ಸ್ನೇಹ ಆಸ್ಪತ್ರೆ’ಯನ್ನು ಇಸ್ರೇಲ್ ಬಾಂಬ್ ದಾಳಿಗೆ ಗುರಿಪಡಿಸಿತ್ತು ಎಂದು ಟರ್ಕಿ ಗಂಭೀರ ಆರೋಪ ಮಾಡಿದೆ. ಟರ್ಕಿಯ ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಇಸ್ರೇಲ್ ಟರ್ಕಿಯ ಈ ಕ್ರಮಗಳು ಕೇವಲ PR ಸ್ಟಂಟ್ ಆಗಿದೆ ಎಂದು ಕರೆದಿದೆ. ಈ ಕುರಿತು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಇಸ್ರೇಲ್‌ನ ವಿದೇಶಾಂಗ ಸಚಿವ ಗಿಡಿಯಾನ್ ಸಾರ್ ” ಟರ್ಕಿಯ ಅಧ್ಯಕ್ಷರನ್ನು ಕ್ರೂರ ಎಂದು ಕರೆದಿದ್ದು, ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ನ ಇತ್ತೀಚಿನ ಪಿಆರ್ ಸ್ಟಂಟ್ ಅನ್ನು ಇಸ್ರೇಲ್ ದೃಢವಾಗಿ ತಿರಸ್ಕರಿಸುತ್ತದೆ” ಎಂದಿದ್ದಾರೆ.
ಕಳೆದ ವರ್ಷ ದಕ್ಷಿಣ ಆಫ್ರಿಕಾ ಇಸ್ರೇಲ್ ಗಾಜದಲ್ಲಿ ಜನಾಂಗೀಯ ಹತ್ಯೆ ನಡೆಸುತ್ತಿದೆ ಎಂದು ಆರೋಪಿಸಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ (ICJ) ಪ್ರಕರಣ ದಾಖಲಿಸಿದ್ದಾಗ ಟರ್ಕಿ ಸಹ ಆಫ್ರಿಕಾದ ಜೊತೆಗೂಡಿತ್ತು. ಇನ್ನು, ಇದೇ ವರ್ಷ ಅಕ್ಟೋಬರ್ ನಲ್ಲಿ ಇಸೇಲ್ ಹಾಗೂ ಹಮಾಸ್ ನಡುವೆ ಸುಧೀರ್ಘ 2 ವರ್ಷಗಳ ಕಾಲ ನಡೆಸಿದ್ದ ಭಯಂಕರ ಯುದ್ದಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಘೋಷಣೆಯಾಗಿ, ಯುದ್ದ ಅಂತ್ಯಗೊಂಡಿದೆ. ಈ ನಡುವೆ ಟರ್ಕಿಯ ಈ ನಿಲುವು ಮತ್ತೆ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

