ನೀರಚಿಲುಮೆ : ಉಜಿರೆ-ಧರ್ಮಸ್ಥಳ-ಪೆರಿಯಶಾಂತಿ ರಾಷ್ಟ್ರೀಯ ಹೆದ್ದಾರಿಯ ಉಜಿರೆಯಿಂದ ಧರ್ಮಸ್ಥಳ ತೆರಳುವಾಗ ನೀರಚಿಲುಮೆ ಬಸ್ ನಿಲ್ದಾಣಕ್ಕಿಂತ ಮುಂದೆ ಸಾಗಿದಾಗ ರಸ್ತೆ ಬದಿಯಲ್ಲೇ ಕೋಳಿ ತ್ಯಾಜ್ಯ ರಾಶಿ ಕಂಡು ಬಂದಿದೆ.

ಯಾರೋ ಅನಾಗರಿಕರು ಕೋಳಿ ತ್ಯಾಜ್ಯವನ್ನು ರಸ್ತೆ ಬದಿಯಲ್ಲೇ ತಂದು ರಾಶಿ ಹಾಕಿದ್ದರಿಂದ ಪರಿಸರವಿಡೀ ದುರ್ನಾತ ಬೀರುತ್ತಿದೆ. ರಸ್ತೆ ಬದಿಯಲ್ಲಿ ಆಹಾರದ ಪೊಟ್ಟಣಗಳು, ಪ್ಲಾಸ್ಟಿಕ್ ತ್ಯಾಜ್ಯಗಳು ಕಂಡು ಬರುತ್ತಿದೆ. ಅಲ್ಲೇ ಸಮೀಪದಲ್ಲಿ ಕೋಳಿಯ ತ್ಯಾಜ್ಯವನ್ನೂ ಕೂಡಾ ಸುರಿದಿದ್ದಾರೆ. ಉಜಿರೆ-ಧರ್ಮಸ್ಥಳ ರಸ್ತೆಯುದ್ದಕ್ಕೂ ರಸ್ತೆ ಬದಿಯಲ್ಲಿ ತ್ಯಾಜ್ಯ ಹಾಕದಂತೆ ಸಂದೇಶಗಳು ಇದ್ದರೂ ಕೂಡಾ ಈ ರೀತಿ ಅನಾಗರಿಕರಂತೆ ತ್ಯಾಜ್ಯ ರಾಶಿ ಹಾಕುವುದರ ವಿರುದ್ಧ ಸಾರ್ವಜನಿಕರು ಕಿಡಿಕಾರಿದ್ದಾರೆ. ಪವಿತ್ರ ಕ್ಷೇತ್ರವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಸಂಪರ್ಕಿಸುವ ಈ ರಸ್ತೆಯಲ್ಲಿ ಈ ರೀತಿಯಾಗಿ ತ್ಯಾಜ್ಯ ಹಾಕುತ್ತಿರುವುದರ ಬಗ್ಗೆ ಸ್ಥಳೀಯ ನಾಗರಿಕರು ಅಸಮಧಾನ ಹೊರಹಾಕಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಶ್ರೀ ಧರ್ಮಸ್ಥಳ ಲಕ್ಷದೀಪೋತ್ಸವ ಆರಂಭಗೊಳ್ಳುವುದರಿಂದ ಸ್ಥಳೀಯ ಗ್ರಾಮ ಪಂಚಾಯತ್ ಈ ಕೂಡಲೇ ತ್ಯಾಜ್ಯವನ್ನು ವಿಲೇವಾರಿ ಮಾಡುವ ಕ್ರಮ ಕೈಗೊಳ್ಳಬೇಕಿದೆ.

