ಕುಂದಾಪುರ, ಡಿ. 06 : ವನಿತೆಯರ ಅಂಡರ್-19 ದೇಶಿ ಏಕದಿನ ಕ್ರಿಕೆಟ್ ಪಂದ್ಯಾವಳಿಯ ಕರ್ನಾಟಕ ತಂಡದ ನಾಯಕಿಯಾಗಿ ಕುಂದಾಪುರದ ರಚಿತಾ ಹತ್ವಾರ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಬಿಸಿಸಿಐ ವತಿಯಿಂದ ಡಿ. 13ರಿಂದ 21ರ ವರೆಗೆ ವನಿತೆಯರ ಅಂಡರ್-19 ದೇಶಿ ಏಕದಿನ ಕ್ರಿಕೆಟ್ ಪಂದ್ಯಾಟ ಹೈದರಾಬಾದಿನಲ್ಲಿ ನಡೆಯಲಿದೆ.
ಕುಂದಾಪುರದ ರಚಿತಾ ಹತ್ವಾರ್ ರಾಜ್ಯ ತಂಡವನ್ನು ಮುನ್ನಡೆಸುತ್ತಿರುವುದು ಇದೇ ಮೊದಲು. 16 ವರ್ಷದ ರಚಿತಾ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನೂ ನಿಭಾಯಿಸಲಿದ್ದಾರೆ. ಕಶ್ಚಿ ಕಂಡಿಕುಪ್ಪ ಉಪ ನಾಯಕಿ, ಶ್ರೇಯಾ ಸಿ. ಎರಡನೇ ಕೀಪರ್ ಆಗಿದ್ದಾರೆ. ರಚಿತಾ ಅವರು ಪ್ರಸಕ್ತ ಸಾಗುತ್ತಿರುವ ಅಂಡರ್-23 ದೇಶಿ ಟಿ20 ಟೂರ್ನಿಯಲ್ಲಿ ಕರ್ನಾಟಕ ಪರ ಆಡುತ್ತಿದ್ದು, ಆರಂಭಿಕ ಆಟಗಾರ್ತಿಯಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ರಚಿತಾ ಕರ್ನಾಟಕ ಹಿರಿಯರ ತಂಡದ ಸಂಭಾವ್ಯ ಆಟಗಾರ್ತಿಯರ ಯಾದಿಯಲ್ಲೂ ಸ್ಥಾನ ಪಡೆದಿದ್ದು, ಮುಖ್ಯ ತಂಡಕ್ಕೂ ಆಯ್ಕೆಯಾಗುವ ನಿರೀಕ್ಷೆ ಮೂಡಿಸಿದ್ದಾರೆ. ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕ್ರಿಕೆಟ್ ಅಕಾಡೆಮಿಯ ಮುಖ್ಯ ಕೋಚ್ ಇರ್ಫಾನ್ ಸೇಟ್ ಇವರಿಗೆ ತರಬೇತಿ ನೀಡುತ್ತಿದ್ದಾರೆ.
ಅಂಡರ್-19 ಕರ್ನಾಟಕ ತಂಡ: ರಚಿತಾ ಹತ್ವಾರ್(ನಾಯಕಿ, ವಿ.ಕೀ.), ಕಶ್ಚಿ ಕಂಡಿಕುಪ್ಪ (ಉಪ ನಾಯಕಿ), ಲಿಯಾಂಕಾ ಶೆಟ್ಟಿ, ಶ್ರೇಯಾ ಸಿ. (ವಿ.ಕೀ.), ಕರ್ಣಿಕಾ ಕಾರ್ತಿಕ್, ದೀಕ್ಷಾ ಜಿ. ಹೊನ್ನುಶ್ರೀ, ಶ್ರೀನಿತಿ ಪಿ. ರೈ, ದೀಕ್ಷಾ ಸಿ.ಡಿ., ವಂದಿತಾ ಕೆ. ರಾವ್, ನಂದಿನಿ ಚೌಹಾಣ್, ವೇದವರ್ಷಿಣಿ, ಹರಿಣಿ ಎನ್., ರಿಮ್ಮಿಂ ಶುಕ್ಲಾ, ಅಫಿನ್ ರುಹಿ ಕೆ. ದೊಡ್ಡಮನಿ, ಜೋಯಾ ಇಮಿಂಯಾಜ್ ಖಾಜಿ, ಲಾವಣ್ಯ ಚಲನ್. ಕೋಚ್: ರಾಖೀ ಗಂಗಲ್, ರೂಪಾ ಬಿ.ಎನ್.

