ಬೆಳ್ತಂಗಡಿ : ವರ್ಷಗಳಿಂದ ಹೊಂಡ-ಗುಂಡಿಯಿಂದಲೇ ಸುದ್ದಿಯಲ್ಲಿರುವ ಕುಪ್ಪೆಟ್ಟಿ-ಕಲ್ಲೇರಿ-ಉಪ್ಪಿನಂಗಡಿ ರಾಜ್ಯ ಹೆದ್ದಾರಿ ಈ ಬಾರಿ ಕೃಷಿ ಚಟುವಟಿಕೆಯಿಂದ ಸುದ್ದಿಯಲ್ಲಿದೆ. ಹೊಂಡ-ಗುಂಡಿಗಳಿಂದಾಗಿ ರಸ್ತೆಯೇ ಕಾಣದ ದುಸ್ಥಿತಿ ಈ ರಸ್ತೆಯದ್ದಾಗಿದೆ. ಪ್ರತಿನಿತ್ಯ ಸಂಚರಿಸುವವರಂತು ಅಧಿಕಾರಿಗಳು, ಜನಪ್ರತಿನಿಧಿಗಳು ಹಿಡಿಶಾಪ ಹಾಕುವಂತಾಗಿದೆ.

ತಾಲೂಕಿನ ಕುಪ್ಪೆಟ್ಟಿ-ಕಲ್ಲೇರಿ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಸಂಪೂರ್ಣವಾಗಿ ಹಾಳಾಗಿದ್ದು ವಾಹನಗಳಿರಲಿ ನಡೆದಾಡುವುದು ಕೂಡ ಕಷ್ಟ ಎಂಬಂತಿದೆ. ಈ ರಸ್ತೆಗಳ ಗುಂಡಿ ಮುಚ್ಚಲು ಕೂಡ ಸಾಧ್ಯವಿಲ್ಲದಷ್ಟು ಹಾಳಾಗಿದ್ದು ಹೊಸದಾಗಿಯೇ ರಸ್ತೆ ನಿರ್ಮಾಣ ಮಾಡಬೇಕಿದೆ. ರಸ್ತೆಯ ಅವ್ಯವಸ್ಥೆಯನ್ನು ಕಂಡು ರೋಷಿ ಹೋದ ಮಂದಿ ರಸೆ ಮಧ್ಯೆ ಬಾಳೆಗಿಡ, ತೆಂಗಿನ ಗಿಡ, ಪಪ್ಪಾಯಿ ಗಿಡ ಹಾಗೂ ಇತರ ಗಿಡಗಳನ್ನು ನೆಟ್ಟು ಪ್ರತಿಭಟಿಸಿದ್ದಾರೆ. ನೋಡುವುದಕ್ಕೆ ಹಾಸ್ಯಾಸ್ಪದವಾಗಿದ್ದರೂ ಕೂಡಾ, ರಸ್ತೆಯ ಅವ್ಯವಸ್ಥೆಗೆ ಧಿಕ್ಕಾರದ ಸಂದೇಶವನ್ನಿಟ್ಟುಕೊಂಡು ಈ ರೀತಿಯಾಗಿ ಪ್ರತಿಭಟಿಸಲಾಗಿದೆ.

ರಸ್ತೆ ಅಭಿವೃದ್ಧಿಗೆ ಗ್ರಹಣ ?
ಕುಪೆಟ್ಟಿ-ಉಪ್ಪಿನಂಗಡಿ ರಸ್ತೆ ಸುಮಾರು ೧೧ಕಿಮೀ ಉದ್ದವಿದ್ದು ಡಾಮರು ಕಿತ್ತುಹೋಗಿವೆ. ಭಯನಕ ಗುಂಡಿಗಳ ಮಧ್ಯೆ ಸಂಚಾರಿಸಬೇಕಾದ ಪರಿಸ್ಥಿತಿ. ಸಾರಿಗೆ ಹಾಗೂ ಖಾಸಗಿ ಬಸ್, ಲಾರಿ, ಗೂಡ್ಸ್ ಹಾಗೂ ಶಾಲಾ ವಾಹನ, ಕಾರು, ವಾಹನ ಸೇರಿದಂತೆ ನಿತ್ಯವೂ ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಹದಗೆಟ್ಟ ರಸ್ತೆಯಿಂದ ಕೈ-ಕಾಲು ಗಾಯ ಮಾಡಿಕೊಂಡು ಆಸ್ಪತ್ರೆ ಸೇರಿದವರು ಸಂಖ್ಯೆ ಏರುತ್ತಲೇ ಇದೆ. ತಾಲೂಕಿನ ಕಣಿಯೂರು, ತಣ್ಣೀರುಪಂತ ಹಾಗೂ ಇಳಂತಿಲ ಗ್ರಾಮದಲ್ಲಿ ಹಾದುಹೋಗುವ ಈ ರಸ್ತೆ ತಾಲೂಕು ಕೇಂದ್ರವನ್ನು ಸಂಚಾರಿಸುವುದೇ ಅಲ್ಲಿನ ಮಂದಿಗೆ ಸವಾಲಾಗಿದ್ದು ಈ ಹದಗೆಟ್ಟ ರಸ್ತೆಯಿಂದ ಗ್ರಾಮಸ್ಥರು ಕಿರಿಕಿರಿ ಅನುಭವಿಸುತ್ತಿದ್ದರು ರಸ್ತೆ ಅಭಿವೃದ್ಧಿಗೆ ಗ್ರಹಣ ಹಿಡಿದು ಹತ್ತಿರ ಹತ್ತಿರ ಎರಡು ವರ್ಷ ಕಳೆಯುತ್ತಿದೆ.
40 ಲಕ್ಷ ರೂ. ದುರಸ್ತಿ ಅನುದಾನ
ಈ ರಸ್ತೆಯ ದುರಸ್ತಿಗೆ ೪೦ಲಕ್ಷ ರೂ.ಅನುದಾನವನ್ನು ಸರಕಾರ ಬಿಡುಗಡೆ ಗೊಳಿಸಿದೆ. ಇದರ ಟೆಂಡರ್ ಪ್ರಕ್ರಿಯೆ ದಿನಾಂಕವು ಮುಗಿದಿದೆ. ಆದರೆ ಇಲ್ಲಿಯ ರಸ್ತೆ ದುರಸ್ತಿಗೆ ಈ ಮೊತ್ತ ಭೀಮನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಇದರಿಂದ ಈ ಟೆಂಡರ್ ಗೆ ಯಾವೊಬ್ಬ ಗುತ್ತಿಗೆದಾರ ಕೂಡ ಸ್ಪಂದಿಸಿಲ್ಲ ಎಂದು ತಿಳಿದು ಬಂದಿದೆ. ಹಾಗೂ ಪ್ರಸ್ತುತ ಟೆಂಡರ್ ದಿನಾಂಕವನ್ನು ನ.೧೪ರ ವರೆಗೆ ವಿಸ್ತರಿಸಲಾಗಿದೆ. ಬಹುತೇಕ ಈ ಮೊತ್ತಕ್ಕೆ ಟೆಂಡರ್ ಹಾಕಲು ಗುತ್ತಿಗೆದಾರರು ಸ್ಪಂದಿಸುವುದು ಅನುಮಾನವಾಗಿದೆ. ಹೀಗಾದಲ್ಲಿ ರಸ್ತೆಯ ಸ್ಥಿತಿ ಇನ್ನಷ್ಟು ಹದಗೆಡಲಿದೆ.
ಉಪ್ಪಿನಂಗಡಿ ರಸ್ತೆಗೆ ಎಸ್.ಎಚ್.ಡಿ.ಪಿ. ಅನುದಾನ – ಶಾಸಕ ಪೂಂಜಾ
ಉಪ್ಪಿನಂಗಡಿ ರಸ್ತೆ ದುರಸ್ತಿಗೆ ಸುಮಾರು 7 ಬಾರಿ ಸರಕಾರಕ್ಕೆ ಮನವಿ ಮಾಡಿದ್ದೇನೆ. ಆದರೆ ಅನುದಾನ ಒದಗಿಸಿಲ್ಲ. ಸರಕಾರ ನನಗೆ ನೀಡಿರುವ 12 ಕೋ.ರೂ. ಎಸ್.ಎಚ್.ಡಿ.ಪಿ. ಅನುದಾನವನ್ನು ಉಪ್ಪಿನಂಗಡಿ ರಸ್ತೆಗೆ ಮೀಸಲಿರಿಸಿದ್ದೇನೆ. ಸರಕಾರ ಟೆಂಡರ್ ಕರೆದಾಗ ರಸ್ತೆ ಸರಿಪಡಿಸುವ ಭರವಸೆ ನೀಡುತ್ತೇನೆಂದು ಬುಧವಾರ ಸುದ್ದಿಗೋಷ್ಠಿ ನಡೆಸಿ ಶಾಸಕ ಹರೀಶ್ ಪೂಂಜಾ ಭರವಸೆಯನ್ನು ನೀಡಿದ್ದರು.
ರಸ್ತೆ ದುರಸ್ತಿಗೊಳಿಸಿ ಸಂಚಾರಕ್ಕೆ ಅನುಕೂಲ ಯೋಜನೆ : ಎಇಇ ಪಿಡಬ್ಲ್ಯೂಡಿ
ಎಸ್.ಎಚ್.ಪಿ.ಡಿ ಯೋಜನೆಯಡಿ ಈ ರಸ್ತೆ ಅಭಿವೃದ್ಧಿಗೆ ಶಾಸಕರು 12 ಕೋಟಿ ರೂ.ಮೊತ್ತದ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಿದ್ದಾರೆ. ಇದರ ಪ್ರಕ್ರಿಯೆಗಳು ಮುಂದಿನ ದಿನಗಳಲ್ಲಿ ನಡೆಯಲಿವೆ. ಈ ರಸ್ತೆಯನ್ನು ದುರಸ್ತಿಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿ ಕೊಡುವ ಬಗ್ಗೆ ಯೋಜನೆ ರೂಪಿಸಲಾಗಿದೆ ಎಂದು ಬಕ್ಕಪ್ಪ ಎಇಇ ಪಿಡಬ್ಲ್ಯೂಡಿ ಬೆಳ್ತಂಗಡಿ ಮಾಹಿತಿ ನೀಡಿದ್ದಾರೆ.

