WPL-2026 : ಮಹಿಳಾ ಪ್ರೀಮಿಯರ್ ಲೀಗ್ ಪ್ರಶಸ್ತಿಯನ್ನು ಸ್ಮೃತಿ ಮಂದಾನ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ದಾಖಲೆಯ ರನ್ ಚೇಸ್ ಮಾಡಿ ಮುಡಿಗೇರಿಸಿಕೊಂಡಿದೆ. WPL ಇತಿಹಾಸದಲ್ಲೇ ಇಷ್ಟು ದೊಡ್ಡ ಮೊತ್ತವನ್ನು ಬೆಂಬತ್ತಿ ಗೆಲುವು ಸಾಧಿಸಿರುವುದು ಇದೇ ಮೊದಲು. 2024ರಲ್ಲಿ ಮೊದಲ ಬಾರಿ ಪ್ರಶಸ್ತಿ ಗೆದ್ದಿದ್ದ ಸ್ಮೃತಿ ಮಂದಾನ ಬಳಗ ಇದೀಗ ಮತ್ತೆ ಚಾಂಪಿಯನ್ ಆಗಿ ಮೂಡಿಬಂದಿದೆ. ಅಲ್ಲಿಗೆ ನಾಲ್ಕನೇ ಬಾರಿ ಫೈನಲ್ ಗೆ ತಲುಪಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮತ್ತೆ ನಿರಾಶೆಯಾಗಿದೆ.

ವಡೋದರಾದಲ್ಲಿ ಗುರುವಾರ ನಡೆದ WPL 2026ರ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 203 ರನ್ ಗಳ ಬೃಹತ್ ಮೊತ್ತ ಗಳಿಸಿತು. ಇದಕ್ಕುತ್ತರವಾಗಿ ರಾಯಲ್ ಚಾಲೆಂಜರ್ಸ್ ತಂಡ ಇನ್ನೂ 2 ಎಸೆತ ಬಾಕಿ ಉಳಿದಿರುವಂತೆ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿ, ವಿಜಯದ ನಗೆ ಬೀರಿತು.

ಬೃಹತ್ ಗುರಿ ಪಡೆದ ಆರ್ ಸಿಬಿ 9 ರನ್ ಆಗುವಷ್ಟರಲ್ಲಿಯೇ ಆರಂಭಕಾರ್ತಿ ಗ್ರೇಸ್ ಹ್ಯಾರಿಸ್(9 ರನ್) ಅವರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ನಾಯಕಿ ಸ್ಮೃತಿ ಮಂದಾನ ಮತ್ತು ಜಾರ್ಜಿಯಾ ವೂಲ್ ಅವರು ಪಂದ್ಯದ ಗತಿಯನ್ನೇ ಬದಲಿಸಿದರು. ಇವರಿಬ್ಬರು 2ನೇ ವಿಕೆಟ್ ಮಹತ್ವದ 163 ರನ್ ಗಳ ಜೊತೆಯಾಟ ಆಡಿದರು. ಕೇವಲ 5.5 ಓವರ್ ಗಳಲ್ಲಿ ಆರ್ ಸಿಬಿಯು 50 ರನ್ ಗಳ ಗಡಿ ದಾಟಿತು. 10 ಓವರ್ ಗಳಲ್ಲಿ ಭರ್ತಿ 100 ರನ್ ಮಾಡಿತು. ಇನ್ನು 14 ಓವರ್ ಗಳಲ್ಲಿ 150 ರನ್ ಕಲೆ ಹಾಕಿತು. ಸ್ಮೃತಿ ಮಂದಾನ ಡೆಲ್ಲಿ ಕ್ಯಾಪಿಟಲ್ಸ್ ಬೌಲರ್ ಗಳನ್ನು ಕಾಡಿದರು.

ಸ್ಮೃತಿ ಮಂದಾನ ಅವರು ಕೇವಲ 23 ಎಸೆತಗಳಲ್ಲಿ ಅರ್ಧಶ ಶತಕ ಗಳಿಸಿದರೆ, ಜಾರ್ಜಿಯಾ ವಾಲ್ ಅವರು ಅರ್ಧಶತಕಕ್ಕೆ 37 ಎಸತೆಗಳನ್ನು ತೆಗೆದುಕೊಂಡರು. ಈ ಜೋಡಿ ಉತ್ತಮವಾಗಿ ಆಡುತ್ತಿದ್ದ ವೇಳೆ ಮಿನ್ನು ಮಣಿ ಅವರು ಈ ಜೊತೆಯಾಟವನ್ನು ಮುರಿದರು. ಜಾರ್ಜಿಯಾ ವೋಲ್ ಅವರು ಔಟಾಗುವ ಮುನ್ನ ಕೇವಲ 54 ಎಸೆತದಲ್ಲಿ 79 ರನ್ ಗಳಿಸಿದ್ದರು. ಇನ್ನು ನಾಯಕಿ ಸ್ಮೃತಿ ಮಂದಾನ ಅವರು 41 ಎಸೆತಗಳಿಂದ 87 ರನ್ ಗಳಿಸಿದರು. ಇವರಿಬ್ಬರ ವಿಕೆಟ್ ಪತನದ ಬಳಿಕ ನಾಡಿನ್ ಡಿ ಕ್ಲಾರ್ಕ್(7) ಮತ್ತು ರಾಧಾ ಯಾದವ್(12) ತಂಡವನ್ನು ವಿಜಯದ ತಡ ಸೇರಿಸಿಬಿಟ್ಟರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಾಯಕಿ ಜೆಮಿಮಾ ರೋಡ್ರಿಗಸ್ ಅವರ ಆಕರ್ಷಕ ಆರ್ಧಶತಕದ ನೆರವಿನಿಂದ ಬೃಹತ್ ಮೊತ್ತವನ್ನು ಪೇರಿಸಿತು. ಸೆಮಿಫೈನಲ್ ನಲ್ಲೂ ಜೆಮಿಮಾ ಗುಜರಾತ್ ಜೈಂಟ್ಸ್ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ್ದರು. ಲಿಝೆಲ್ ಲೀ(37) ಮತ್ತು ಶೆಫಾಲಿ ವರ್ಮಾ(20) ಅವರು ಮೊದಲ ವಿಕೆಟ್ ಗೆ 5.5 ಓವರ್ ಗಳಲ್ಲಿ 49 ರನ್ ಜೊತೆಯಾಟವಾಡಿದರು. ಡೆಲ್ಲಿ ತಂಡ ಇದೇ ಲಯದಲ್ಲಿ ಕೊನೇವರೆಗೂ ಮುಂದುವರಿಯಿತು. 3ನೇ ಕ್ರಮಾಂಕದಲ್ಲಿ ಲಾರಾ ವೋಲ್ವಾರ್ಡ್ತ್(25 ಎಶತೆದಲ್ಲಿ 44), ಜೆಮಿಮಾ ರೋಡ್ರಿಗಸ್(37 ಎಸೆತದಲ್ಲಿ 57) ಮತ್ತು ಚಿನೆಲ್ ಹೆನ್ರಿ(15 ಎಶೆತದಲ್ಲಿ ಅಜೇಯ 35) ಅವರ ಉತ್ತಮ ಆಟದಿಂದಾಗಿ ತಂಡ 200ರ ಗಡಿ ದಾಟಿತು.

ಸಂಕ್ಷಿಪ್ತ ಸ್ಕೋರ್
ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ ಗಳಲ್ಲಿ 203/4, ಜೆಮಿಮಾ ರೋಡ್ರಿಗಸ್ 57(37), ಲಾರಾ ವೋಲ್ವಾರ್ಡ್ತ್ 44(25), ಲಿಝಲ್ ಲೀ 37(30), ಚಿನೆಲ್ ಹೆನ್ರಿ 35(15), ಸಯಾಲಿ ಸತ್ಗರೆ 46ಕ್ಕೆ1, ಅರುಂಧತಿ ರೆಡ್ಡಿ 40ಕ್ಕೆ 1, ನಾಡಿನ್ ಡಿ ಕ್ಲಾರ್ಕ್ 48ಕ್ಕೆ 1.
ರಾಯಲ್ ಚಾಲೆಂಜರ್ಸ್ ಬೆಂಗಳೂರು 19.4 ಓವರ್ ಗಳಲ್ಲಿ 204/4, ಸ್ಮೃತಿ ಮಂದಾನ 87(41), ಜಾರ್ಜಿಯಾ ವಾಲ್ 79(54), ರಾಧಾ ಯಾದವ್ 12 ನಾಟೌಟ್, ಚಿನೆಲ್ ಹೆನ್ರಿ 34ಕ್ಕೆ 2, ಮಿನ್ನು ಮಣಿ 19ಕ್ಕೆ1, ನಂದಿನಿ ಶರ್ಮಾ 41ಕ್ಕೆ1.

