ಚಿಕ್ಕಮಗಳೂರು, ಜೂ. 06 : ಜಿಲ್ಲೆಯ ಧಾರ್ಮಿಕ ಶ್ರದ್ಧಾ ಕೇಂದ್ರ ದತ್ತಪೀಠದಲ್ಲಿ ಮತ್ತೆ ಮಾಂಸಾಹಾರ ಸೇವನೆ ನಡೆದಿರುವ ಆರೋಪ ಕೇಳಿಬಂದಿದ್ದು, ಈ ಕುರಿತು ಹಿಂದೂ ಸಂಘಟನೆಗಳ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೂ ಹಾಗೂ ಮುಸ್ಲಿಂ ಸಮುದಾಯಗಳ ಧಾರ್ಮಿಕ ಭಾವೈಕ್ಯತೆಯ ಕ್ಷೇತ್ರವೆಂದು ಗುರುತಿಸಲ್ಪಟ್ಟಿರುವ ದತ್ತಪೀಠದ ಹಕ್ಕುದಾರಿಕೆ ವಿಚಾರವಾಗಿ ಎರಡೂ ಸಮುದಾಯಗಳು ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿರುವ ನಡುವೆಯೇ ಈ ಆರೋಪ ಹೊಸ ವಿವಾದಕ್ಕೆ ಕಾರಣವಾಗಿದೆ.
ದತ್ತಪೀಠದ ಯಾಗಶಾಲೆ ಸಮೀಪದಲ್ಲೇ ಕೆಲವರು ಮಾಂಸಾಹಾರ ಸೇವನೆ ನಡೆಸಿರುವುದಾಗಿ ಹಿಂದೂ ಸಂಘಟನೆ ಮುಖಂಡ ರಘು ಸಕಲೇಶಪುರ ಆರೋಪಿಸಿದ್ದಾರೆ. ದತ್ತಪೀಠದ 200 ಮೀಟರ್ ವ್ಯಾಪ್ತಿಯಲ್ಲಿ ಮಾಂಸಾಹಾರ ಸೇವನೆ ನಿಷೇಧವಿದ್ದರೂ ನಿಯಮ ಉಲ್ಲಂಘನೆ ನಡೆದಿದ್ದು, ಇದಕ್ಕೆ ಜಿಲ್ಲಾಡಳಿತದ ನಿರ್ಲಕ್ಷ್ಯ ಹಾಗೂ ವೈಫಲ್ಯವೇ ಕಾರಣ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಣ್ಣಿಮೆ ಪೂಜೆಗೆ ತೆರಳಿದ್ದ ವೇಳೆ ಈ ಘಟನೆ ಗಮನಕ್ಕೆ ಬಂದಿದ್ದು, ಸಂಬಂಧಪಟ್ಟ ಅಧಿಕಾರಿಗಳು ತತ್ ಕ್ಷಣ ಕ್ರಮ ಕೈಗೊಂಡು ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಹಿಂದೂ ಸಂಘಟನೆಗಳು ಒತ್ತಾಯಿಸಿವೆ. ಈ ಕುರಿತು ಜಿಲ್ಲಾಡಳಿತ ಅಥವಾ ಸಂಬಂಧಿತ ಅಧಿಕಾರಿಗಳ ಅಧಿಕೃತ ಪ್ರತಿಕ್ರಿಯೆ ಇನ್ನಷ್ಟೇ ಲಭ್ಯವಾಗಬೇಕಿದೆ.



