ಮುಂಬೈ, ಜು. 30 : ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದ ಮೊದಲ ಟ್ರೇಲರ್ ಗುರುವಾರ (ಜುಲೈ 30) ಬಿಡುಗಡೆಯಾಗಿದೆ. ನಿತೇಶ್ ತಿವಾರಿ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದ ಟ್ರೇಲರ್ ನಾಲ್ಕು ನಿಮಿಷ ಒಂಬತ್ತು ಸೆಕೆಂಡ್ ಹೊಂದಿದೆ. ಈ ಟ್ರೇಲರ್‌ನಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ಯಶ್ ರಾವಣನಾಗಿ ಹಾಗೂ ಸಾಯಿ ಪಲ್ಲವಿ ಸೀತೆಯಾಗಿ ಮೊದಲ ಬಾರಿಗೆ ಸಂಪೂರ್ಣವಾಗಿ ಕಾಣಿಸಿಕೊಂಡಿದ್ದಾರೆ. ಬ್ರಹ್ಮ ಮುಹೂರ್ತವಾದ ಬೆಳಗ್ಗೆ 4.15ಕ್ಕೆ ಬಿಡುಗಡೆಯಾದ ಟ್ರೇಲರ್, ರಾಮ-ರಾವಣ ಸಂಘರ್ಷದ ಜತೆಗೆ ಭವ್ಯ ದೃಶ್ಯ ವೈಭವವನ್ನು ಅನಾವರಣಗೊಳಿಸಿದೆ.
ಟ್ರೇಲರ್ ಯಶ್ ಅಭಿನಯದ ರಾವಣನ ಪ್ರವೇಶದೊಂದಿಗೆ ಆರಂಭವಾಗುತ್ತದೆ. ತಲೆಯನ್ನು ಮುಚ್ಚಿಕೊಂಡು ಅರಮನೆಯೊಳಗೆ ನಡೆಯುವ ರಾವಣ, ”ತುಮ್ಹಾರಾ ನಯಾ ರಾಜಾ” ಎಂದು ಘೋಷಿಸುತ್ತಾನೆ. ಬಳಿಕ ಭರ್ಜರಿ ಆ್ಯಕ್ಷನ್ ದೃಶ್ಯಗಳ ನಡುವೆ, “ದೇವಲೋಕ, ಭೂಲೋಕ, ಪಾತಾಳಲೋಕ… ಈ ಮೂರು ಲೋಕಗಳಿಗೂ ಒಬ್ಬನೇ ರಾಜ” ಎಂದು ಹೇಳುವ ಮೂಲಕ ತನ್ನ ಪ್ರಾಬಲ್ಯದ ಮಹತ್ವವನ್ನು ಸಾರುತ್ತಾನೆ. ಟ್ರೇಲರ್‌ನಲ್ಲಿ ಲಂಕೆ, ಪುಷ್ಪಕ ವಿಮಾನ ಹಾಗೂ ರಾವಣನ ವೈಭವವನ್ನು ಅದ್ಧೂರಿಯಾಗಿ ಚಿತ್ರಿಸಲಾಗಿದ್ದು, ಲಂಕಾಧಿಪತಿಯ ಪಾತ್ರಕ್ಕೆ ವಿಶಿಷ್ಟ ಮೆರಗು ನೀಡಲಾಗಿದೆ. ಟ್ರೇಲರ್‌ನಲ್ಲಿ ರಣಬೀರ್ ಕಪೂರ್ ಅವರ ಶ್ರೀರಾಮನ ಪಾತ್ರವನ್ನು ಕುದುರೆ ಸವಾರಿ, ತಂದೆ ದಶರಥ (ಅರುಣ್ ಗೋವಿಲ್) ಹಾಗೂ ಕೈಕೇಯಿ (ಲಾರಾ ದತ್ತಾ) ಅವರೊಂದಿಗೆ ಇರುವ ಭಾವನಾತ್ಮಕ ದೃಶ್ಯಗಳ ಮೂಲಕ ಪರಿಚಯಿಸಲಾಗಿದೆ. ಬಳಿಕ ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಳ್ಳುತ್ತಾರೆ. ರಾಮ-ಸೀತೆಯ ವಿವಾಹ, ಅಯೋಧ್ಯೆಯ ಘಟನೆಗಳು ಹಾಗೂ ಕೈಕೇಯಿಯ ನಿರ್ಧಾರದಿಂದ ರಾಮ, ಸೀತೆ ಮತ್ತು ಲಕ್ಷ್ಮಣ ಅರಣ್ಯವಾಸಕ್ಕೆ ತೆರಳುವ ಪ್ರಸಂಗಗಳನ್ನು ಟ್ರೇಲರ್‌ನಲ್ಲಿ ತೋರಿಸಲಾಗಿದೆ. ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ತಮ್ಮ ಸರಳತೆ, ಸೌಮ್ಯತೆ ಮತ್ತು ಸಹಜ ಅಭಿನಯದಿಂದ ಗಮನ ಸೆಳೆದಿದ್ದಾರೆ. ಚಿತ್ರದ ಬಿಡುಗಡೆಯ ಮುನ್ನ ಕುತೂಹಲ ಮೂಡಿಸಿದ್ದ ಅವರ ಹಿಂದಿ ಉಚ್ಚಾರಣೆಯೂ ಟ್ರೇಲರ್‌ನಲ್ಲಿ ಸಹಜವಾಗಿ ಮೂಡಿಬಂದಿದೆ. ಅಲ್ಲದೆ, ಸೀತೆ ಆಯುಧ ಹಿಡಿಯುವ ದೃಶ್ಯವೂ ವಿಶೇಷ ಗಮನ ಸೆಳೆಯುತ್ತದೆ.
ಟ್ರೇಲರ್‌ನಲ್ಲಿ ಹಲವು ಪ್ರಮುಖ ಪಾತ್ರಗಳ ಪರಿಚಯವಿದ್ದರೂ, ಕಥೆಯ ಕೇಂದ್ರಬಿಂದು ರಾಮ ಮತ್ತು ರಾವಣನ ನಡುವಿನ ಸಂಘರ್ಷವೇ ಆಗಿದೆ. ರಾವಣನ ಪ್ರವೇಶದಿಂದ ಆರಂಭವಾಗುವ ಟ್ರೇಲರ್, ಮೂರು ಲೋಕಗಳ ಎದುರು ರಾವಣನನ್ನು ಸಂಹರಿಸುವ ಪ್ರತಿಜ್ಞೆಯನ್ನು ಶ್ರೀರಾಮ ಮಾಡುವ ದೃಶ್ಯದೊಂದಿಗೆ ಅಂತ್ಯಗೊಳ್ಳುತ್ತದೆ.
ಲಕ್ಷ್ಮಣ, ದಶರಥ ಮತ್ತು ಇತರ ಪಾತ್ರಗಳು
ನಟ ರವಿ ದುಬೆ ಲಕ್ಷ್ಮಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಶರಥನ ಪಾತ್ರದಲ್ಲಿ ನಟಿಸಿರುವ ಅರುಣ್ ಗೋವಿಲ್, ರಾಮ ಮತ್ತು ಲಕ್ಷ್ಮಣ ಅಯೋಧ್ಯೆ ತೊರೆದು ಹೋಗುವ ವೇಳೆ ಭಾವನಾತ್ಮಕವಾಗಿ ಅವರ ಹಿಂದೆ ಓಡುವ ದೃಶ್ಯವೂ ಟ್ರೇಲರ್‌ನ ಪ್ರಮುಖ ಕ್ಷಣಗಳಲ್ಲಿ ಒಂದಾಗಿದೆ. ಈ ಟ್ರೇಲರ್‌ನಲ್ಲಿ ಸನ್ನಿ ಡಿಯೋಲ್ ಅಭಿನಯದ ಹನುಮಂತನ ಪಾತ್ರವನ್ನು ಸಂಪೂರ್ಣವಾಗಿ ತೋರಿಸಿಲ್ಲ. ಆದರೆ ವಿವೇಕ್ ಒಬೆರಾಯ್, ಸೌರಭ್ ಸಚ್‌ದೇವಾ ಸೇರಿದಂತೆ ಹಲವು ಕಲಾವಿದರ ಕ್ಷಣಿಕ ಝಲಕ್‌ಗಳು ಕಾಣಿಸುತ್ತವೆ.
ಶೂರ್ಪನಖಿಯಾಗಿ ರಾಕುಲ್ ಪ್ರೀತ್ ಸಿಂಗ್
ಟ್ರೇಲರ್‌ನಲ್ಲಿ ರಾಕುಲ್ ಪ್ರೀತ್ ಸಿಂಗ್ ಶೂರ್ಪನಖಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಮನನ್ನು ತನ್ನ ಸೌಂದರ್ಯದಿಂದ ಸೆಳೆಯಲು ಪ್ರಯತ್ನಿಸುವ ಶೂರ್ಪನಖಿಯ ಪ್ರಸ್ತಾವನೆಯನ್ನು ರಾಮ ತಿರಸ್ಕರಿಸುವ ದೃಶ್ಯವಿದ್ದು, ಬಳಿಕ ಲಕ್ಷ್ಮಣ ಆಕೆಯ ಮೂಗನ್ನು ಕತ್ತರಿಸುವ ಪ್ರಸಂಗವನ್ನೂ ತೋರಿಸಲಾಗಿದೆ.
ಎ.ಆರ್. ರೆಹಮಾನ್-ಹ್ಯಾನ್ಸ್ ಜಿಮ್ಮರ್ ಸಂಗೀತದ ಮೆರಗು
ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆ ಸಂಗೀತವಾಗಿದೆ. ಎ.ಆರ್. ರೆಹಮಾನ್ ಹಾಗೂ ಹಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ ಹ್ಯಾನ್ಸ್ ಜಿಮ್ಮರ್ ಜಂಟಿಯಾಗಿ ಸಂಯೋಜಿಸಿರುವ ಹಿನ್ನೆಲೆ ಸಂಗೀತವು ಅಯೋಧ್ಯೆಯಿಂದ ಲಂಕೆಯವರೆಗೆ ಸಾಗುವ ಕಥೆಯ ಭವ್ಯತೆಯನ್ನು ಮತ್ತಷ್ಟು ಹೆಚ್ಚಿಸಿದೆ. ‘ರಾಮಾಯಣ: ಭಾಗ-1’ಇದೇ ವರ್ಷದ ನವೆಂಬರ್ 5ರಂದು ದೀಪಾವಳಿ ಪ್ರಯುಕ್ತ ವಿಶ್ವದಾದ್ಯಂತ ಬಿಡುಗಡೆಯಾಗಲಿದ್ದು, ಎರಡನೇ ಭಾಗ 2027ರ ದೀಪಾವಳಿಗೆ ತೆರೆಗೆ ಬರಲಿದೆ.


