ಗುಂಡ್ಯ, ಡಿ. 22 : ಗುಂಡ್ಯ ಚೆಕ್ ಪೋಸ್ಟ್ ಬಳಿ ನಿಲ್ಲಿಸಲಾಗಿದ್ದ ಆಂಬುಲೆನ್ಸ್ ಅನ್ನು ಆರೋಪಿಯೋರ್ವ ಕಳವುಗೈದಿರುವ ಘಟನೆ ನಡೆದಿದೆ. ಪೊಲೀಸರು ತ್ವರಿತ ಕಾರ್ಯಾಚರಣೆಯ ಮೂಲಕ ಆರೋಪಿಯನ್ನು ಬಂಧಿಸಿ, ಕಳವಾಗಿದ್ದ ಅಂಬ್ಯುಲೆನ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ. ಉಡುಪಿ ಜಿಲ್ಲೆಯ ಕಾರ್ಕಳ ನಿವಾಸಿ ಶೋದನ್ (22) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ದೂರುದಾರ ಸುರೇಶ್ ಅವರು ಅಂಬ್ಯುಲೆನ್ಸ್ ಸಂಖ್ಯೆ KA-19-C-7557ರ ಚಾಲಕರಾಗಿದ್ದು, ಪ್ರತಿದಿನ ರಾತ್ರಿ ಗುಂಡ್ಯ ಚೆಕ್‌ಪೋಸ್ಟ್ ಬಳಿ ವಾಹನವನ್ನು ನಿಲ್ಲಿಸಿ ಲಾಕ್ ಮಾಡಿ ಮನೆಗೆ ತೆರಳುತ್ತಿದ್ದರು. ದಿನಾಂಕ ಡಿ. 19ರ ರಾತ್ರಿ ಕೂಡಾ ಅದೇ ರೀತಿಯಲ್ಲಿ ಅಂಬ್ಯುಲೆನ್ಸ್ ಅನ್ನು ನಿಲ್ಲಿಸಿ, ಅಪಘಾತದ ತುರ್ತು ಕರೆ ಬಂದಲ್ಲಿ ಬದಲಿ ಚಾಲಕರ ಅನುಕೂಲಕ್ಕಾಗಿ ಅಂಬ್ಯುಲೆನ್ಸ್‌ನ ಕೀಯನ್ನು ವಾಹನದಲ್ಲೇ ಇಟ್ಟು ಹೋಗಿದ್ದರು. ಆದರೆ ಮರುದಿನ ಡಿ. 20ರಂದು ಬೆಳಿಗ್ಗೆ ಬಂದು ನೋಡಿದಾಗ, ಅಂಬ್ಯುಲೆನ್ಸ್ ನಿಲ್ಲಿಸಿದ್ದ ಸ್ಥಳದಲ್ಲಿ ಇರದೆ ನಾಪತ್ತೆಯಾಗಿತ್ತು. ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಆಂಬುಲೆನ್ಸ್ ಕಳವಾಗಿರುವ ಕುರಿತು ಪ್ರಕರಣ ದಾಖಲಿಸಿದ್ದರು.
ತಕ್ಷಣವೇ ಕಾರ್ಯಪ್ರವೃತ್ತರಾದ ಉಪ್ಪಿನಂಗಡಿ ಪೊಲೀಸರು, ಹಾಸನ ಜಿಲ್ಲಾ ಪೊಲೀಸರ ಸಹಕಾರದೊಂದಿಗೆ, ಡಿ. 20ರಂದು ಆಂಬುಲೆನ್ಸ್ ಅನ್ನು ಪತ್ತೆಹಚ್ಚಿ ಉಡುಪಿ ಜಿಲ್ಲೆಯ ಕಾರ್ಕಳ ನಿವಾಸಿ ಶೋದನ್ (22) ಎಂಬಾತನನ್ನು ಹಾಸನದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು.ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕಳವಾಗಿದ್ದ ಅಂಬ್ಯುಲೆನ್ಸ್ ಅನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.

