ಮಂಗಳೂರು : ಬಜ್ಪೆಯಲ್ಲಿ ಯುವಕನ ಮೇಲೆ ತಲವಾರು ನಡೆಸಿದ ಪ್ರಕರಣ ಸಂಬಂಧಪಟ್ಟಂತೆ ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಬೈಕ್‌ನಲ್ಲಿ ಚಾಕು ಹಿಡಿದುಕೊಂಡು ಹೋಗುತ್ತಿದ್ದದ್ದನ್ನು ನೋಡಿ ವಿಡಿಯೋ ಚಿತ್ರೀಕರಣಕ್ಕೆ ಅಖಿಲೇಶ್ ಎಂಬವರು ಮುಂದಾಗಿದ್ದಾರೆ. ಇದನ್ನು ಮನಗಂಡ ದುಷ್ಕರ್ಮಿಗಳು ಯುವಕನ ಮೇಲೆ ದಾಳಿ ನಡೆಸಿದ್ದಾರೆಂದು ತಿಳಿದು ಬಂದಿದೆ.
ನಾಲ್ಕು ಮಂದಿ ದುಷ್ಕರ್ಮಿಗಳು ಬೈಕ್ ನಲ್ಲಿ ಚಾಕು ಹಿಡಿದು ತಿರುಗಾಡುತ್ತಿದ್ದರೆನ್ನಲಾಗಿದೆ. ಇದನ್ನು ಅಖಿಲೇಶ್ ಎಂಬವರು ವೀಡಿಯೋ ಚಿತ್ರೀಕರಣ ಮಾಡಲು ಹಿಂಬಾಲಿಸಿದ್ದಾರೆ. ಈ ವೇಳೆ ಯುವಕನ ಮೇಲೆ ದಾಳಿ ನಡೆಸಲಾಗಿದೆ. ತಕ್ಷಣವೇ ಓರ್ವ ಆರೋಪಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ, ಉಳಿದ ಮೂರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಅವರನ್ನು ಗುರುತಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನು, ಘಟನೆ ನಡೆಯುವ ಮುನ್ನ ನಾಲ್ವರು ದುಷ್ಕರ್ಮಿಗಳು ಬಾರ್ ನಿಂದ ಹೊರಬರುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ದುಷ್ಕರ್ಮಿಗಳು ಮದ್ಯದ ಅಮಲಿನಲ್ಲಿದ್ದರೋ ಅಥವಾ ಬೇರೆ ಯಾವುದೋ ಮಾದಕ ದ್ರವ್ಯದ ಅಮಲಿನಲ್ಲಿದ್ದರೋ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

