ಮುಂಡಾಜೆ, ಜ. 16 : ಗ್ರಾಮದ ಶೀಟು ಕಾಯರ್ತೋಡಿ ರಸ್ತೆಯಲ್ಲಿ ಶಾಲೆಗೆ ಸೈಕಲಿನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿಯೋರ್ವನಿಗೆ ಚಿರತೆ ಎದುರಾಗಿದ್ದು, ಬಾಲಕ ಅಪಾಯದಿಂದ ಪಾರಾಗಿದ್ದಾನೆಂದು ತಿಳಿದು ಬಂದಿದೆ. ಬಾಲಕ ಎಂದಿನಂತೆ ತನ್ನ ಸೈಕಲ್ ಮೂಲಕ ಶಾಲೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಚಿರತೆ ಎದುರಾಗಿದೆ, ಭಯಗೊಂಡ ಬಾಲಕ ಮರಳಿ ಮನೆಯತ್ತ ತೆರಳುವ ಮೂಲಕ ಅಪಾಯದಿಂದ ಪಾರಾಗಿದ್ದಾನೆನ್ನಲಾಗಿದೆ.
ಮುಂಡಾಜೆ ಪ್ರೌಢ ಶಾಲೆಯ 10ನೇ ತರಗತಿ ವಿದ್ಯಾರ್ಥಿ, ಕಲ್ಮಂಜ ಗ್ರಾಮದ ನಿವಾಸಿ ಜ್ಞಾನೇಶ ತನ್ನ ಸಮಯ ಪ್ರಜ್ಞೆಯಿಂದ ಜೀವಪಾಯದಿಂದ ಪಾರಾಗಿದ್ದಾನೆ. ಮುಂಡಾಜೆ ಗ್ರಾಮದ ಶೀಟು ಕಾಯರ್ತೋಡಿ ರಸ್ತೆಯಲ್ಲಿ ಮೂರು ಮಾರ್ಗ ಎಂಬಲ್ಲಿ ಇಂದು ಬೆಳಿಗ್ಗೆ 7.30ರ ಸಮಯ ಶಾಲಾ ಬಾಲಕ ಜ್ಞಾನೇಶ ಶಾಲೆಗೆ ತನ್ನ ಸೈಕಲ್‌ನಲ್ಲಿ ಬರುತ್ತಿದ್ದ ವೇಳೆ ಕಾಡಿನಿಂದ ರಸ್ತೆಗೆ ಇಳಿದ ಚಿರತೆ ಎದುರಾಗಿದೆ. ಚಿರತೆ ಒಮ್ಮೆಲೇ ಎದುರಿಗೆ ಬಂದದನ್ನು ನೋಡಿ ಭಯಗೊಂಡ ಬಾಲಕ ತನ್ನ ಸಮಯ ಪ್ರಜ್ಞೆಯಿಂದ ಸೈಕಲ್‌ನ್ನು ತಕ್ಷಣ ಹಿಂದಕ್ಕೆ ತಿರುಗಿಸಿ, ವೇಗವಾಗಿ ಮನೆಗೆ ಬಂದು ಅಪಾಯದಿಂದ ಪಾರಾಗಿದ್ದಾನೆ.
ಕಾಡಿನ ದಾರಿಯಲ್ಲಿ ಒಬ್ಬರೇ ತೆರಳದಿರಿ :
ಸದ್ಯ ಬೆಳ್ತಂಗಡಿ ತಾಲೂಕಿನ ಹಲವು ಗ್ರಾಮೀಣ ಪ್ರದೇಶಗಳ ಕಾಡಂಚಿನಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಹೀಗಾಗಿ ಮಕ್ಕಳನ್ನು ಶಾಲೆಗೆ ಒಬ್ಬರನ್ನೇ ತೆರಳಲು ಬಿಡಬೇಡಿ. ಉದ್ಯೋಗಸ್ಥರು ಹಾಗೂ ಸಾರ್ವಜನಿಕರು ಕಾಡಿನಂಚಿನಲ್ಲಿ ಅಥವಾ ಕಾಡ ದಾರಿಯಲ್ಲಿ ಒಬ್ಬೊಬ್ಬರೇ ತೆರಳಬೇಡಿ. ಮುಂಜಾಗೃತ ಕ್ರಮಗಳನ್ನು ವಹಿಸಿಕೊಂಡು, ಅತ್ಯಂತ ಜಾಗರೂಕತೆಯಿಂದ ತೆರಳಿ ಎಂಬುದು ಧ್ವನಿ ನ್ಯೂಸ್ ಚಾನೆಲ್ ನ ಕಳಕಳಿಯ ವಿನಂತಿಯಾಗಿದೆ.
ಅರಣ್ಯ ಇಲಾಖೆ ಕ್ರಮ ಕೈಗೊಳ್ಳಲಿ :
ಬೆಳ್ತಂಗಡಿ ತಾಲೂಕಿನ ಹಲವು ಭಾಗಗಳಲ್ಲಿ ಚಿರತೆ ಕಾಟ ಹೆಚ್ಚಾಗಿದ್ದು, ಅರಣ್ಯ ಇಲಾಖೆ ಮಾತ್ರ ಇನ್ನೂ ಗಾಢ ನಿದ್ದೆಯಲ್ಲಿದ್ದಂತೆ ಕಾಣುತ್ತಿದೆ. ರಾಜ್ಯ ಸರ್ಕಾರವಾಗಲಿ ಅಥವಾ ಅರಣ್ಯ ಸಚಿವರಾಗಲಿ ಈ ಬಗ್ಗೆ ಮೌನ ವಹಿಸಿರುವುದು ಜನರ ಆಕ್ರೋಶಕ್ಕೂ ಕಾರಣವಾಗಿದೆ. ಹೀಗಾಗಿ ದಯವಿಟ್ಟು ಅರಣ್ಯಾಧಿಕಾರಿಗಳು ತತ್ ಕ್ಷಣವೇ ಕ್ರಮ ಕೈಗೊಂಡು ಜನರ ಪ್ರಾಣ ರಕ್ಷಣೆ ಮಾಡಬೇಕಿದೆ.

