ಕುವೆಟ್ಟು, ಜ. 14 : ಧನು ಪೂಜೆಗಾಗಿ ಮನೆಯಿಂದ ಹೊರಟಿದ್ದ 9ನೇ ತರಗತಿಯ ವಿದ್ಯಾರ್ಥಿಯೊಬ್ಬ ಬುಧವಾರ ಬೆಳಿಗ್ಗೆ ಸಂಬೋಳ್ಯದ ಬರಮೇಲು ಎಂಬಲ್ಲಿ ನಿಗೂಢ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಮೃತನನ್ನು ಗೇರುಕಟ್ಟೆ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ, ಸುಬ್ರಹ್ಮಣ್ಯ ನಾಯಕ್ ಅವರ ಪುತ್ರ ಸುಮಂತ್ (16) ಎಂದು ಗುರುತಿಸಲಾಗಿದೆ.

ಪ್ರತಿದಿನ ತನ್ನ ಸ್ನೇಹಿತರೊಂದಿಗೆ ಸುಮಂತ್ ಧನು ಪೂಜೆಗೆ ಹೋಗುತ್ತಿದ್ದನು. ಬುಧವಾರ ಬೆಳಿಗ್ಗೆ ಆತ ಮನೆಗೂ ಮರಳದೆ, ಇತ್ತ ಸ್ನೇಹಿತರೊಂದಿಗೂ ತೆರಳದೆ ಇದ್ದಾಗ ಆತಂಕಗೊಂಡ ಸ್ನೇಹಿತರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಆತನಿಗಾಗಿ ಹುಡುಕಾಟ ಆರಂಭಿಸಿದ್ದು, ಕೊನೆಯದಾಗಿ ಬಾಲಕ ತೆರಳಿದ ಪ್ರದೇಶದ ತೋಟದ ಕೆರೆಯ ಬದಿಯಲ್ಲಿ ರಕ್ತದ ಕಲೆಗಳು ಕಂಡುಬಂದಿವೆ. ಈ ಪ್ರದೇಶದಲ್ಲಿ ಚಿರತೆಗಳ ಓಡಾಟ ಹೆಚ್ಚಾಗಿರುವುದರಿಂದ, ಬಾಲಕನ ನಾಪತ್ತೆಯ ಹಿಂದೆ ಚಿರತೆಯ ದಾಳಿಯಿರಬಹುದು ಎಂಬ ಸಂಶಯಕ್ಕೆ ಕಾರಣವಾಗಿತ್ತು.
ಮಾಹಿತಿ ತಿಳಿಯುತ್ತಿದ್ದಂತೆಯೇ ಬೆಳ್ತಂಗಡಿ ಪೊಲೀಸರು, ಬೆಳ್ತಂಗಡಿ ವಲಯದ ಅರಣ್ಯ ಅಧಿಕಾರಿಗಳು ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಜಂಟಿಯಾಗಿ ನಡೆಸಿದ ಶೋಧದ ನಂತರ, ತೋಟದ ಕೆರೆಯಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ. ಬೆಳ್ತಂಗಡಿ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಸಾವಿನ ನಿಖರ ಕಾರಣ ತಿಳಿಯಲು ತನಿಖೆ ಕೈಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಶಾಸಕ ಹರೀಶ್ ಪೂಂಜಾ ಭೇಟಿ ನೀಡಿ ಸಮಗ್ರ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿ, ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದ್ದಾರೆ. ಇದೇ ವೇಳೆ ತಹಶೀಲ್ದಾರ್ ಪೃಥ್ವಿ ಸಾನಿಕಮ್, ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ ನೀಡಿದ್ದಾರೆ.


