ಬೆಳ್ತಂಗಡಿ, ಜ. 16 : ನಮ್ಮ ಕಾರ್ಯಕ್ರಮದಲ್ಲಿ ಸ್ಪೀಕರ್ ಯುಟಿ ಖಾದರ್ ಅವರು ಅನ್ಯ ಕಾರ್ಯ ನಿಮಿತ್ತವಾಗಿ ಉಪಸ್ಥಿತರಿಲ್ಲ. ಈ ಒಂದು ಕಾರಣದಿಂದ ಬೆಳ್ತಂಗಡಿಯಲ್ಲಿರುವ ಫೇಕ್ ಐಡಿಗಳಿಗೆ ಬಹಳಷ್ಟು ಕೆಲಸ ಸಿಗಲಿದೆ. ರಾತ್ರಿಯಿಡೀ ಅವರು ಸುಳ್ಳು ಸುದ್ದಿಗಳನ್ನೇ ಹಬ್ಬಿಸುವ ಕೆಲಸ ಮಾಡಲಿದ್ದಾರೆ ಎಂದು ಬಂಗೇರ ಬ್ರಿಗೇಡ್ ಬೆಳ್ತಂಗಡಿ ಅಧ್ಯಕ್ಷರಾದ ಶ್ರೀಮತಿ ಬಿನುತಾ ಬಂಗೇರ ಅವರು ಪರೋಕ್ಷವಾಗಿ ಕಾಂಗ್ರೆಸ್ ಮುಖಂಡರೋರ್ವರಿಗೆ ಟಾಂಗ್ ನೀಡಿದ್ದಾರೆ.
ಕೀರ್ತಿಶೇಷ ಮಾಜಿ ಶಾಸಕ ಕೆ. ವಸಂತ ಬಂಗೇರ ಅವರ 80ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ನಡೆದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟದಲ್ಲಿ ಅಧ್ಯಕ್ಷೀಯ ನುಡಿಗಳನ್ನಾಡಿದ ಅವರು, ಫೇಕ್ ಐಡಿ ಮೂಲಕ ಸುಳ್ಳು ಸುದ್ದಿ ಹಬ್ಬಿಸುವ ಕುಂಬು ಮಂಡೆ(ಹಾಳಾಗಿರುವ ತಲೆ)ಗಳಿಗೆ ಹೇಳಲು ಬಯಸುತ್ತೇನೆ, ಖಾದರ್ ಅವರು ಊರಿನಲ್ಲಿರುತ್ತಿದ್ದರೆ ಖಂಡಿತಾ ಈ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದರು. ಈ ಕಬಡ್ಡಿ ಪಂದ್ಯಾಟಕ್ಕೆ ಆರಿಕೋಡಿ ಕ್ಷೇತ್ರದ ಧರ್ಮದರ್ಶಿಗಳು, ಖಾದರ್ ಸರ್, ರಮನಾಥ್ ರೈ ಸರ್ ಇವರನ್ನು ಸೇರಿಸಿಕೊಂಡೇ ಆಯೋಜನೆ ಮುಂದೆಯೂ ಮಾಡುತ್ತೇನೆ ಎಂದರು.
ಕಾರ್ಯಕ್ರಮವನ್ನು ಹೇಗಾದರೂ ಹಾಳು ಮಾಡಬೇಕೆಂದು ವಿಘ್ನ ಸಂತೋಷಿಗಳು ಕಾಯುತ್ತಿದ್ದಾರೆ. ಕಳೆದ ವರ್ಷವೂ ಅವರು ಸುಮಾರು ಆರು ಡಮ್ಮಿ ತಂಡಗಳನ್ನು ಹೆಸರು ನೋಂದಾಯಿಸುವ ಮೂಲಕ ಕಾರ್ಯಕ್ರಮವನ್ನು ಕೆಡವಲು ಪ್ರಯತ್ನಿಸಿದ್ದರು. ಆದರೆ, ಅದು ಸಫಲವಾಗಿಲ್ಲ. ಈಗ ಬೆಳ್ತಂಗಡಿಯಲ್ಲಿ ವಿಘ್ನ ಸಂತೋಷಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹಿಂದೆ ಇರಲಿಲ್ಲ, ಆದರೆ ಈಗ ವಿಘ್ನ ಸಂತೋಷಿಗಳೇ ಹೆಚ್ಚಾಗಿದ್ದಾರೆಂದು ಕಿಡಿಕಾರಿದರು.

