ಕೈ ಪಾಳಯದ ವೋಟ್ ಚೋರಿ ಆರೋಪದ ಮಧ್ಯೆ, ಬಿಜೆಪಿಯಿಂದ ಮತ್ತೊಂದು ರಾಜ್ಯದ ಕ್ಲೀನ್ ಸ್ವೀಪ್ ಗೆ ಮಾಸ್ಟರ್ ಪ್ಲ್ಯಾನ್ !

ರಾಂಚಿ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಾರ್ಖಂಡ್ ಇಂಡಿಯಾ ಮೈತ್ರಿಕೂಟದ ಪಾಲಾಗಿತ್ತು. ನಾಲ್ಕು ರಾಜ್ಯಗಳಿಗೆ ನಡೆದ ಚುನಾವಣೆಯಲ್ಲಿ, ಬಿಜೆಪಿ ಮೈತ್ರಿಕೂಟ ಮಹಾರಾಷ್ಟ್ರ, ಹರ್ಯಾಣದಲ್ಲಿ ಗೆಲುವು ಸಾಧಿಸಿತ್ತು. ಇನ್ನೊಂದು ಕಡೆ, ಕಾಂಗ್ರೆಸ್ ಮೈತ್ರಿಕೂಟ, ಜಮ್ಮು ಮತ್ತು ಕಾಶ್ಮೀರ ಮತ್ತು ಜಾರ್ಖಂಡ್ ರಾಜ್ಯದಲ್ಲಿ ಅಧಿಕಾರಕ್ಕೇರಿತ್ತು. ವೋಟ್ ಚೋರಿ ಆರೋಪ ಮಾಡುತ್ತಿರುವ ಲೋಕಸಭೆಯಲ್ಲಿನ ವಿಪಕ್ಷದ ನಾಯಕರಾದ ರಾಹುಲ್ ಗಾಂಧಿ, ಸೋತ ಎರಡು ರಾಜ್ಯಗಳ ಇವಿಎಂ ಬಗ್ಗೆ ತಕರಾರು ಎತ್ತಿ, ಗೆದ್ದ ರಾಜ್ಯದ ಬಗ್ಗೆ ಚಕಾರು ಎತ್ತಿರಲಿಲ್ಲ. ಇದಕ್ಕೆ ಕಾಶ್ಮೀರದ ಸಿಎಂ ಒಮರ್ ಅಬ್ದುಲ್ಲಾ ಕೂಡಾ ತಕರಾರು ಎತ್ತಿದ್ದರು. ಇನ್ನು, ಇಷ್ಟು ದಿನ ಸುಮ್ಮನಿದ್ದ, ಜಾರ್ಖಂಡ್ ರಾಜ್ಯದ ಮುಖ್ಯಮಂತ್ರಿ ಹೇಮಂತ್ ಸೊರೆನ್, ಬಿಜೆಪಿಯ ಕೇಂದ್ರ ನಾಯಕರ ಜೊತೆ ಸಂಪರ್ಕದಲ್ಲಿದ್ದಾರೆ ಎನ್ನುವ ಸುದ್ದಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರ ನಿದ್ದೆಗೆಡಿಸಿದೆ.

Advertisement

ಮುಖ್ಯಮಂತ್ರಿ ಹೇಮಂತ್ ಸೋರೆನ್ ಮತ್ತು ಅವರ ಪತ್ನಿ ಹಾಗೂ ಶಾಸಕಿಯೂ ಆಗಿರುವ ಕಲ್ಪನಾ ಸೋರೆನ್, ದೆಹಲಿಯಲ್ಲಿ ಬಿಜೆಪಿ ನಾಯಕರ ಜೊತೆಗೆ ಸತತ ಸಂಪರ್ಕದಲ್ಲಿದ್ದಾರೆನ್ನುವ ಮಾಹಿತಿ ಲಭ್ಯವಾಗಿದೆ. ಇತ್ತೀಚೆಗೆ, ದೆಹಲಿಯಲ್ಲಿ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಮಾತುಕತೆಯನ್ನು ನಡೆಸುತ್ತಿದ್ದಾರೆ. ಕೆಲವೊಂದು ಮೂಲಗಳ ಪ್ರಕಾರ, ಸೋರೆನ್ ನೇತೃತ್ವದ ಜೆಎಂಎಂ (ಜಾರ್ಖಾಂಡ್ ಮುಕ್ತಿ ಮೋರ್ಚಾ), ಎನ್‌ಡಿಎ ಮೈತ್ರಿಕೂಟದ ಜೊತೆಗೆ ಗುರುತಿಸಿಕೊಳ್ಳಲು ಉತ್ಸುಕವಾಗಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿದೆ. ಪರಿಸ್ಥಿತಿಯ ತೀವ್ರತೆಯನ್ನು ಅರಿತ, ಮತ್ತು ದೇಶದಲ್ಲಿ ಉಳಿದುಕೊಂಡಿರುವ ಮಹಾಘಟಬಂಧನ್ ಮೈತ್ರಿಕೂಟದ ಸರ್ಕಾರ, ಕೈತಪ್ಪಬಾರದು ಎನ್ನುವ ನಿಟ್ಟಿನಲ್ಲಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಹುಲ್ ಗಾಂಧಿಗೆ ಪರಮಾಪ್ತರೂ ಆಗಿರುವ ಕೆಸಿ ವೇಣುಗೋಪಲ್, ಹೇಮಂತ್ ಸೋರೆನ್ ಜೊತೆ ಮಾತುಕತೆಯನ್ನು ನಡೆಸಿದ್ದಾರೆ. ಸೋರೆನ್, ಯಾವ ಕಾರಣಕ್ಕೂ, ನಮ್ಮ ಮೈತ್ರಿಕೂಟ ತೊರೆದು ಹೋಗುವುದಿಲ್ಲ ಎಂದಿದ್ದಾರೆ. ಕಾಂಗ್ರೆಸ್ ಮತ್ತು ಜೆಎಂಎಂ ನಡುವಿನ ಸಂಬಂಧ, ಸುಭದ್ರವಾಗಿದೆ. ಈಗ ಹರಿದಾಡುತ್ತಿರುವ ಸುದ್ದಿಗಳಿಗೆ ಯಾವುದೇ ಆಧಾರವಿಲ್ಲ ಎಂದೇನೋ ಹೇಳಿದ್ದಾರೆ. ಆದರೆ, ರಾಂಚಿಯ ರಾಜಕೀಯ ಹವಾಮಾನ, ಬೇರೆ ಕಡೆಗೆ ತಿರುಗುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ಬಾರಿಯ ಬಿಹಾರದ ವಿಧಾನಸಭಾ ಚುನಾವಣೆಯ ವೇಳೆ ಹೇಮಂತ್ ಸೋರೆನ್ ಅವರ ಪಾರ್ಟಿಗೆ ಮಹಾಘಟಬಂಧನ್ ಮಣೆಹಾಕದೇ ಇದ್ದದ್ದು ಈಗ ನಡೆಯುತ್ತಿರುವ ಬೆಳವಣಿಗೆಗಳಿಗೆ ಪ್ರಮುಖ ಕಾರಣ. ಬಿಹಾರದ ಬುಡಕಟ್ಟು ಜನಾಂಗ ಪ್ರಾಭಲ್ಯವಿರುವ ಕೆಲವು ಕ್ಷೇತ್ರಗಳಲ್ಲಿ ಜೆಎಂಎಂ ಸ್ಪರ್ಧಿಸಲು ಬಯಸಿತ್ತು. ಸೋರೆನ್, ರಾಹುಲ್ ಮತ್ತು ತೇಜಸ್ವಿ ಯಾದವ್ ಜೊತೆ ಮಾತುಕತೆಯನ್ನೂ ನಡೆಸಿದ್ದರು. ಆದರೆ, ಆರ್‌ಜೆಡಿ ಸೀಟು ಬಿಟ್ಟುಕೊಡಲು ನಿರಾಕರಿಸಿತ್ತು. ಇದರಿಂದಾಗಿ, ಸಂಪೂರ್ಣ ಬಿಹಾರದ ಚುನಾವಣೆಯಿಂದಲೇ ಹೇಮಂತ್ ಸೋರೆನ್ ಹಿಂದಕ್ಕೆ ಸರಿದಿದ್ದರು. ಮಹಾಘಟಬಂಧನ್ ಮೈತ್ರಿಕೂಟದಲ್ಲಿ ಗುರುತಿಸಿಕೊಂಡಿರುವ, ಕಾಂಗ್ರೆಸ್ಸಿನ ಮಾತಿಗೆ ಕಟಿಬಿದ್ದು, ಕಳೆದ ಲೋಕಸಭಾ ಚುನಾವಣೆಯಲ್ಲಿ ಸೀಮಿತ ಕ್ಷೇತ್ರದಲ್ಲಿ ಸೋರೆನ್ ಪಾರ್ಟಿ ಸ್ಪರ್ಧಿಸಿತ್ತು. ಇದು, ಪಾರ್ಟಿಯ ಹಲವು ನಾಯಕರಿಗೆ ಅಸಮಾಧಾನಕ್ಕೂ ಕಾರಣವಾಗಿತ್ತು. ಇದರೆ ಜೊತೆಗೆ, ಬಿಹಾರದ ಚುನಾವಣೆಯಲ್ಲಿ ಪಾರ್ಟಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇರುವುದೂ, ಪಾರ್ಟಿಯ ನಾಯಕರ ಕೋಪಕ್ಕೂ ಕಾರಣವಾಗಿದೆ. ಹಾಗಾಗಿ, ಇಂಡಿಯಾ ಮೈತ್ರಿಕೂಟದ ಸದಸ್ಯ ಪಾರ್ಟಿಗಳ ಸಹಕಾರದ ಕೊರತೆಯೇ, ಹೇಮಂತ್ ಸೋರೆನ್, ಬಿಜೆಪಿ ಮೈತ್ರಿಕೂಟದ ಜೊತೆ ಗುರುತಿಸಿಕೊಳ್ಳಲು ಮುಂದಾಗುತ್ತಿರುವುದಕ್ಕೆ ಕಾರಣ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಜಾರ್ಖಂಡ್ ವಿಧಾನಸಭೆಯಲ್ಲಿನ ಸದ್ಯದ ಈಗಿನ ಸಂಖ್ಯಾಬಲವನ್ನು ಗಮನಿಸುವುದಾದರೆ, ರಾಜ್ಯದಲ್ಲಿ ಒಟ್ಟು 81 ಸ್ಥಾನಗಳು ಇದೆ. ಅದರಲ್ಲಿ ಸರಳ ಬಹುಮತಕ್ಕೆ ಬೇಕಾದ ನಂಬರ್ 41. ಕಳೆದ ಚುನಾವಣೆಯಲ್ಲಿ ಮಹಾಘಟಬಂಧನ್ ಮೈತ್ರಿಕೂಟದ ಪಕ್ಷಗಳಾಗಿರುವ ಜೆಎಂಎಂ – 36, ಕಾಂಗ್ರೆಸ್ – 14, ಆರ್‌ಜೆಡಿ – 04, ಎಡಪಕ್ಷ – 02 ಸ್ಥಾನಗಳನ್ನು ಪಡೆದುಕೊಂಡಿತ್ತು. ಎನ್‌ಡಿಎ ಮೈತ್ರಿಕೂಟದ ಬಿಜೆಪಿ – 21, ಎಲ್ ಜೆಪಿ – 01 ಹಾಗೂ ಇತರರು – 02 ಸ್ಥಾನಗಳಲ್ಲಿ ಗೆದ್ದಿದ್ದರು. ಆದರೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಲೆಕ್ಕಚಾರ ಸಂಪೂರ್ಣವಾಗಿ ತಲೆಕೆಳಗಾಗುವ ನಿರೀಕ್ಷೆಯಿದೆ. ಎನ್ ಡಿಎ ಮೈತ್ರಿಕೂಟವೂ ಕೂಡಾ ಜಾರ್ಖಾಂಡ್ ನಲ್ಲಿ ಹಿಡಿತ ಸಾಧಿಸುವುದಕ್ಕಾಗಿ ಭಾರೀ ಕಸರತ್ತು ನಡೆಸುತ್ತಿದೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ತಾಲೂಕು, ಬೆಳ್ತಂಗಡಿ

ಉರುವಾಲು : ಶಿವಾಜಿನಗರ ಶ್ರೀ ಮಹಮ್ಮಾಯಿ ದೇವಸ್ಥಾನದ ಪ್ರತಿಷ್ಠಾ ಮಹೋತ್ಸವಕ್ಕೆ ಚಪ್ಪರ ಮುಹೂರ್ತ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕುಂದುಕೊರತೆ ಸಭೆ – ಕಾರ್ಮಿಕ ಸಂಕಷ್ಟಕ್ಕೆ ಪರಿಹಾರಕ್ಕೆ ಅಧಿಕಾರಿಗೆ ಸೂಚಿಸಿದ ಶಾಸಕ ಹರೀಶ್ ಪೂಂಜ

ಟಾಪ್ ಸುದ್ದಿಗಳು, ತಾಲೂಕು, ಮಂಗಳೂರು

ಮಂಗಳೂರು : ಶಿವಮೊಗ್ಗದಿಂದ ಕೇರಳಕ್ಕೆ ಅಕ್ರಮವಾಗಿ ಜಾನುವಾರು ಸಾಗಾಟಕ್ಕೆ ಯತ್ನ – ಮೂವರ ಬಂಧನ

⚠️ Contents are protected on this website.