ಬೆಳ್ತಂಗಡಿ, ಜ.16 : ಮನೆಯಂಗಳದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರ ಮೇಲೆ ಚಿರತೆ ದಾಳಿ ಮಾಡಿ ಗಾಯಗೊಳಿಸಿದ ಘಟನೆ ಕನ್ಯಾಡಿ 1 ಗ್ರಾಮದ ಅಂಡೀರುಮಾರು ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ. ಅಂಡೀರುಮಾರು ನಿವಾಸಿ ಮಂಜಪ್ಪ ನಾಯ್ಕ(62) ಚಿರತೆ ದಾಳಿಯಿಂದ ಗಾಯಗೊಂಡವರು ಎಂದು ತಿಳಿದು ಬಂದಿದೆ.
ಮಂಜಪ್ಪ ನಾಯ್ಕ ಇಂದು ಬೆಳಗ್ಗೆ 8:15ರ ಸುಮಾರಿಗೆ ಮನೆಯ ಅಂಗಳದಲ್ಲಿದ್ದ ವೇಳೆ ಏಕಾಏಕಿ ನುಗ್ಗಿದ ಚಿರತೆಯೊಂದು ಅವರ ಮೇಲೆ ದಾಳಿ ನಡೆಸಿದೆ. ತಕ್ಷಣ ಹತ್ತಿರದ ಅಡಿಕೆ ಮರವನ್ನೇರಿ ಅವರು ಜೀವ ಉಳಿಸಿಕೊಂಡಿದ್ದಾರೆ. ಈ ವೇಳೆ ಮಂಜಪ್ಪ ನಾಯ್ಕ ಅವರ ಕಾಲಿಗೆ ಗಂಭೀರ ಗಾಯಗಳಾಗಿವೆ. ಅವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಗೆ ಬೆಳ್ತಂಗಡಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಳ್ತಂಗಡಿ ತಾಲೂಕಿನ ಹಲವು ಭಾಗಗಳಲ್ಲಿ ಚಿರತೆ ದಾಳಿ ಮಾಡಿದ ಘಟನೆಗಳು ನಡೆಯುತ್ತಲೇ ಇದೆ. ಆದರೆ, ಅರಣ್ಯ ಇಲಾಖೆ ಈವರೆಗೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರೂ, ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಲಿ ಎಂಬುದು ನಮ್ಮ ಮನವಿಯಾಗಿದೆ.

