ಬೆಂಗಳೂರು : ಗ್ರಾಮ ಪಂಚಾಯತಿಯ ಅನಧಿಕೃತ ಆಸ್ತಿ ದಾಖಲೆ ಸರಿಪಡಿಸಿಕೊಳ್ಳಿ. ಅರ್ಜಿ ಹಾಕಿದ 15 ದಿನದಲ್ಲಿ 11 ಬಿ ಖಾತೆ ನೀಡಲಾಗುತ್ತದೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸೋಮವಾರ ನಡೆದ ಗಾಂಧಿ ಗ್ರಾಮ ಪುರಸ್ಕಾರ ಹಾಗೂ ಇ-ಸ್ವತ್ತು 2.0 ತಂತ್ರಾಂಶಕ್ಕೆ ಚಾಲನೆ ನೀಡಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಮಾತನಾಡಿದರು. ಭಾರತದ ಭವಿಷ್ಯ ಅಡಗಿರುವುದು ಹಳ್ಳಿಯಲ್ಲಿ ಎಂದು ಗಾಂಧೀಜಿ ತಿಳಿಸಿದ್ದರು. ಪ್ರತಿ ಹಳ್ಳಿಯಲ್ಲಿ ಪಂಚಾಯತಿ, ಸೊಸೈಟಿ, ಶಾಲೆ ಇರಬೇಕು ಎಂದು ಮಾರ್ಗದರ್ಶನ ನೀಡಿದರು. ಅವರ ಮಾರ್ಗದರ್ಶನದಂತೆ ನಾವು ಕೆಲಸ ಮಾಡುತ್ತಿದ್ದೇವೆ. ನಿಮ್ಮ ಮನೆ ಬಾಗಿಲಿಗೆ ಇ-ಸ್ವತ್ತು ತಂದುಕೊಡುವ ಕೆಲಸ ಮಾಡುತ್ತಿದ್ದೇವೆ. ಇದು ನಿಮ್ಮೆಲ್ಲರ ಬದುಕಿಗೆ ಹೊಸರೂಪ ನೀಡಿ, ಗ್ರಾಮ ಪಂಚಾಯತಿ ಆಸ್ತಿ ದಾಖಲೆಗಳಿಗೆ 11 ಬಿ ಖಾತೆಗಳನ್ನು ನೀಡಲಾಗುತ್ತಿದೆ. ನೀವು ಅರ್ಜಿ ಹಾಕಿ 15 ದಿನದ ಒಳಗೆ ಖಾತೆ ನೀಡಲು ಸರ್ಕಾರ ತೀರ್ಮಾನಿಸಿದೆ. ಯಾರೂ ಕಚೇರಿ ಅಲೆಯುವುದು ಬೇಡ ಎಂದು ಆನ್ಲೈನ್ ಹಾಗೂ ಬಾಪುಜಿ ಕೇಂದ್ರಗಳಲ್ಲಿ ವಿತರಣೆಗೆ ಅವಕಾಶ ನೀಡಲಾಗಿದೆ. 11 ಬಿ ಮೂಲಕ ತೆರಿಗೆ ಪಾವತಿಸಿ, ಆಸ್ತಿ ದಾಖಲೆ ಸರಿಪಡಿಸಿಕೊಳ್ಳಿ” ಎಂದು ತಿಳಿಸಿದರು.
“ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಉಳುವವನಿಗೆ ಭೂಮಿ, ಬಗರ್ ಹುಕುಂ ಸಾಗುವಳಿ ಜಮೀನು ಸಕ್ರಮ ಮಾಡಿದೆ. ಅರಣ್ಯ ಪ್ರದೇಶದಲ್ಲೂ ವಾಸಿಸುವವರಿಗೆ ಕಾನೂನಿನ ಅಡಿಯಲ್ಲಿ ಸಹಾಯ ಮಾಡಿದೆ. ನಿಮ್ಮ ಭೂಮಿ ಹಾಗೂ ಆಸ್ತಿ ದಾಖಲೆ ಸರಿಪಡಿಸುವುದು ನಮ್ಮ ಆರನೇ ಗ್ಯಾರಂಟಿ ಯೋಜನೆಯಾಗಿದೆ. ಬೆಂಗಳೂರಿನಲ್ಲಿ 25 ಲಕ್ಷ ಆಸ್ತಿಗಳನ್ನು ಇ ಖಾತಾ ಅಭಿಯಾನ ಮಾಡಿದ್ದು, 6 ಲಕ್ಷ ಜನರಿಗೆ ಇ ಖಾತಾ ವಿತರಿಸಲಾಗಿದೆ. ವಿಜಯನಗರ ಜಿಲ್ಲೆಯಲ್ಲಿ ಕೃಷ್ಣ ಬೈರೇಗೌಡರು ಹಾಗೂ ಪ್ರಿಯಾಂಕ್ ಖರ್ಗೆ ಅವರು ಸೇರಿ 1,11,111 ಜನರಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಿಂದ ಹೊರಗಿರುವ ತಾಂಡಾಗಳನ್ನು ಸಕ್ರಮ ಮಾಡಿ ಹಕ್ಕುಪತ್ರ, ಭೂ ದಾಖಲೆಗಳನ್ನು ವಿತರಿಸಿದ್ದೇವೆ” ಎಂದು ವಿವರಿಸಿದರು. “ನರೇಗಾ ಯೋಜನೆ ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮ, ಇದರಿಂದ ನಮ್ಮ ಸರ್ಕಾರಕ್ಕೆ ಹೆಚ್ಚು ಪ್ರಚಾರ ಸಿಗುತ್ತದೆ. ನಾವು ಜನರ ಹೃದಯಕ್ಕೆ ಹತ್ತಿರವಾಗುತ್ತೇವೆ ಎಂದು ಇದಕ್ಕೆ ಅನುದಾನ ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ನರೇಗಾ ಯೋಜನೆಯಡಿ 2021ರಲ್ಲಿ 14.65 ಕೋಟಿ ಮಾನವ ಕೂಲಿ ದಿನಗಳಿಗೆ ಅವಕಾಶವಿತ್ತು. ಈ ವರ್ಷ ಅದನ್ನು 9 ಕೋಟಿಗೆ ಇಳಿಸಿದ್ದಾರೆ. ಸುಮಾರು 40% ಕಡಿಮೆ ಮಾಡಿದ್ದಾರೆ. ನರೇಗಾ ಯೋಜನೆಯಡಿ 2021ರಲ್ಲಿ 5,910 ರೂ. ಕೋಟಿ ಅನುದಾನ ಬಂದಿತ್ತು. ಈ ವರ್ಷ 2,691 ಕೋಟಿ ರೂ. ಅನುದಾನ ಬಂದಿದೆ. ಈ ಯೋಜನೆಯಲ್ಲಿ ಎಷ್ಟು ವ್ಯತ್ಯಾಸವಾಗಿದೆ ಎಂದು ನೀವೆಲ್ಲರೂ ಗಮನಿಸಬೇಕು” ಎಂದು ತಿಳಿಸಿದರು.

