ಗುರುವಾಯನಕೆರೆ : ಎಕ್ಸೆಲ್ ಪದವಿ ಪೂರ್ವ ಕಾಲೇಜು ಗುರುವಾಯನಕೆರೆ ಇದರ ಅಕ್ಷರೋತ್ಸವ – 2025 ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಹಾಗೂ ಎಕ್ಸೆಲ್ ಪರ್ಬ – 2025 ಅರಮಲೆ ಬೆಟ್ಟ ಕಾಲೇಜು ಆವರಣದಲ್ಲಿ ಇಂದು ಅತ್ಯಂತ ಅದ್ಧೂರಿಯಾಗಿ ಉದ್ಘಾಟನೆಗೊಂಡಿದೆ. ಖ್ಯಾತ ಚಲನಚಿತ್ರ ನಿರ್ದೇಶಕರು, ಸಿನಿ ಸಾಹಿತಿಗಳು ಹಾಗೂ ಕವಿಗಳು ಆಗಿರುವ ಯೋಗರಾಜ್ ಭಟ್ ಅವರು ಸಮಾರಂಭವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಎಕ್ಸೆಲ್ ಸಂಸ್ಥೆ ಆಯೋಜಿಸಿರುವ ಈ ಸಮಾರಂಭವು ನಿಜವಾದ ಕನ್ನಡ ರಾಜ್ಯೋತ್ಸವದ ರೀತಿ ಬಿಂಬಿತವಾಗುತ್ತಿದೆ. ಕನ್ನಡ ಭಾಷೆ ಎಂದಿಗೂ ಸಾಯೋದಿಲ್ಲ. ನಾವು ಕನ್ನಡ ಮಾತನಾಡದೇ ಇದ್ದರೆ ಆ ಭಾಷೆಗೆ ನಾವು ಸಾಯುತ್ತೇವೆಯೇ ಹೊರತು ಭಾಷೆ ಎಂದಿಗೂ ಸಾಯೋದಿಲ್ಲ, ಅದು ಶಾಶ್ವತ ಎಂದರು.
ಬಳಿಕ ಆಶಿರ್ವಚನ ನೀಡಿದ ಶ್ರೀ ಗುರುದೇವದತ್ತ ಸಂಸ್ಥಾನ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರು, ನಾಡು ನುಡಿ ಎನ್ನುವುದು ಅಂತರಂಗದಲ್ಲಿ ಉಕ್ಕಿಬರುವ ಪ್ರೀತಿಯಾಗಿದೆ. ಭಾಷೆ ಮತ್ತು ಸಂಸ್ಕೃತಿಗೆ ನೇರ ಸಂಬಂಧವಿದೆ. ವಿಧ್ಯಾಭ್ಯಾಸಕ್ಕೆ ಬಲ ನೀಡುವ ಉದ್ಧೇಶದಿಂದ ಈ ಅಕ್ಷರೋತ್ಸವ ಸಮಾರಂಭವನ್ನು ಆಯೋಜಿಸಲಾಗಿದೆ. ವಿದ್ಯೆ ಎನ್ನುವುದು ಕೇವಲ ಉದ್ಯೋಗ ಪಡೆದುಕೊಳ್ಳುವುದಕ್ಕಾಗಿ ಮಾತ್ರವಲ್ಲ, ವಿದ್ಯೆ ಬದುಕು ಕಟ್ಟಿಕೊಳ್ಳುವುದಕ್ಕಾಗಿ, ಯಾವುದು ಬಂಧನದಿಂದ ಮುಕ್ತಿ ನೀಡುವುದೋ ಆ ವಿದ್ಯೆಯ ಅಗತ್ಯತೆ ಇದೆ ಎಂದರು. ಇನ್ನು, ಎಕ್ಸೆಲ್ ಸಂಸ್ಥೆಆಯೋಜಿಸಿರುವ ಈ ಕಾರ್ಯಕ್ರಮವು ಭವ್ಯ ಭಾರತದ ಭವಿಷ್ಯಕ್ಕಾಗಿ ಮುನ್ನುಡಿ ಬರೆದಂತಾಯಿತು ಎಂದು ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಎಕ್ಸೆಲ್ ಅಕ್ಷರ ಗೌರವ – 2025 ಅಂಗವಾಗಿ ಸಾಹಿತ್ಯ ಪ್ರೀತಿ ಪ್ರಶಸ್ತಿಯನ್ನು ಹಿರಿಯ ಕವಿಗಳು, ಸಾಹಿತಿಗಳೂ ಆಗಿರುವ ಶ್ರೀ. ಪ. ರಾಮಕೃಷ್ಣ ಶಾಸ್ತ್ರಿಯವರಿಗೆ, ಯಕ್ಷಗಾನ ದಿಗ್ಗಜ ಪ್ರಶಸ್ತಿಯನ್ನು ಖ್ಯಾತ ಭಾಗವತರಾದ ಶ್ರೀ ಪಟ್ಲ ಸತೀಶ್ ಶೆಟ್ಟಿಯವರಿಗೆ, ಅನ್ನದಾತ ಕೃಷಿಕ ಪ್ರಶಸ್ತಿಯನ್ನು ಬಹು ಬೆಳೆಗಳ ಮಾದರಿ ಕೃಷಿಕ ಶ್ರೀ ಅನಿಲ್ ಭಟ್ ಬಳಂಜ ಅವರಿಗೆ, ದೈವಾರಾದನೆಯ ಹಿರಿಮೆ ಪ್ರಶಸ್ತಿಯನ್ನು ಪೆರ್ಮಾಣ್ ಗುತ್ತು ಮಾಗಣಿ ದೈವದ ಭಂಡಾರ ಮನೆಯವರಾದ ಶ್ರೀ ಸುರೇಶ್ ಕುಮಾರ್ ಆರಿಗ ಹಾಗೂ ಪಾರಂಪರಿಕ ವೈದ್ಯರು ಪ್ರಶಸ್ತಿಯನ್ನು ನಾಟಿ ವೈದ್ಯರು, ಗಿಡಮೂಲಿಕೆ ಚಿಕಿತ್ಸೆ ಕೃತಿಯ ಲೇಖಕರು ಆಗಿರುವ ಶ್ರೀ ಕುಶಾಲಪ್ಪ ಗೌಡ ಇಜಿಮಾನ್ ಇವರಿಗೆ ಎಕ್ಸೆಲ್ ಸಂಸ್ಥೆಯ ವತಿಯಿಂದ ದ.ಕ.ಜಿ.ಕ.ಸಾ.ಪ ಅಧ್ಯಕ್ಷರಾದ ಡಾ. ಶ್ರೀನಾಥ್ ಎಮ್.ಪಿ ಅವರು ಪ್ರಶಸ್ತಿ ಫ್ರಧಾನ ಮಾಡಿ ಗೌರವಿಸಿದರು..
ಎಕ್ಸೆಲ್ ಅಕ್ಷರೋತ್ಸವದ ಹಿನ್ನಲೆಯಲ್ಲಿ ಬಂದಂತಹ ಸಾವಿರಾರು ಕವಿತೆಗಳಲ್ಲಿ ಆಯ್ದ ಕಾವ್ಯಗಳ ಗ್ರಂಥ “ಅಕ್ಕರೆಯ ಕವಿತೆಗಳು” ಹಾಗೂ ನವ್ಯ ನಗರಿ ಎಂಬ ಕವನ ಸಂಕಲನಗಳನ್ನು ವಿಜಯವಾಣಿ ದೈನಿಕ ಮಂಗಳೂರು ಇದರ ಸ್ಥಾನೀಯ ಸಂಪಾದಕರಾದ ಶ್ರೀ ಸುರೇಂದ್ರ ಎಸ್ ವಾಗ್ಲೆ ಅವರು ಲೋಕಾರ್ಪಣೆಗೊಳಿಸಿದರು. ಇನ್ನು, ಕಾರ್ಯಕ್ರಮದ ವೇದಿಕೆಯಲ್ಲಿ ದ.ಕ.ಜಿ.ಕ.ಸಾ.ಪ ಅಧ್ಯಕ್ಷರಾದ ಯದುಪತಿ ಗೌಡ, ಶ್ರೀ ಕ್ಷೇತ್ರ ಧರ್ಮಸ್ಥಳದ ಹಿರಿಯ ಮುತ್ಸದ್ಧಿ ಭುಜಬಲಿ ಧರ್ಮಸ್ಥಳ, ಆಮಂತ್ರಣ ಪರಿವಾರದ ಸಂಸ್ಥಾಪಕರಾದ ವಿಜಯ್ ಕುಮಾರ್ ಜೈನ್, ಅಳದಂಗಡಿ ಹಾಗೂ ಎಕ್ಸೆಲ್ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಹಾಗೂ ಕಾಲೇಜು ಪ್ರಾಂಶುಪಾಲರು ಉಪಸ್ಥಿತರಿದ್ದರು.

