ಹೆಜಮಾಡಿ, ಡಿ.26 : ಮಹಿಳೆಯೋರ್ವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಮೂವರು ಮಹಿಳೆಯರು ಸೇರಿ ಎಗರಿಸಿದ ಘಟನೆ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ನಡೆದಿದೆ. ಕಮಲ ಎಂಬವರು ಚಿನ್ನ ಕಳೆದುಕೊಂಡ ಮಹಿಳೆಯಾಗಿದ್ದಾರೆಂದು ತಿಳಿದು ಬಂದಿದೆ. ಕೃತ್ಯ ಎಸಗಿದ ಮೂವರು ಮಹಿಳೆಯರ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.
ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಡಿ. 24ರಂದು ನಡೆಯುತ್ತಿದ್ದ ನೇಮೋತ್ಸವದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು ಎಂಬ ಒಕ್ಕಣೆಯಲ್ಲಿ ಸಿಸಿ ಕ್ಯಾಮರಾ ವೀಡಿಯೋವೊಂದು ವೈರಲ್ ಆಗುತ್ತಿದೆ. ಎಲ್ಲರೂ ಗರಡಿಯಲ್ಲಿ ಭಕ್ತಿಯಿಂದ ದೇವರ ಪ್ರಾರ್ಥನೆಯಲ್ಲಿ ತಲ್ಲೀನರಾಗಿದ್ದರೆ, ಅದೇ ಸಮಯವನ್ನು ದುರ್ಬಳಕೆ ಮಾಡಿಕೊಂಡ ಕಳ್ಳಿಯರು ತಮ್ಮ ಕೈ ಚಳಕ ಮೆರೆದಿದ್ದಾರೆ. ಮಹಿಳೆಯೋರ್ವರನ್ನು ಗೋಡೆಯ ಸಮೀಪಕ್ಕೆ ಕರೆದೊಯ್ದು, ಪ್ರಾರ್ಥನೆ ಮಾಡುವ ನೆಪದಲ್ಲಿ ಅಡ್ಡ ನಿಂತು ಬಹಳ ಆರಾಮವಾಗಿ ಚಿನ್ನದ ಸರವನ್ನು ಎಗರಿಸಿದ್ದಾರೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಆದರೆ, ಕಳ್ಳಿಯರ ಆದಷ್ಟು ಬೇಗ ಬಂಧನವಾಗಲಿ ಎಂಬ ಬರಹದಲ್ಲಿ ವೀಡಿಯೋ ವೈರಲ್ ಆಗುತ್ತಿದೆ.


