IPL 2026 : ಇಂದು ರಾಜಸ್ಥಾನಕ್ಕೆ ಆರ್ ಸಿಬಿ ಎದುರಾಳಿ – ಸೂರ್ಯವಂಶಿ ಹಾಗೂ ಸ್ವಿಂಗ್ ಮಾಂತ್ರಿಕ ಭುವನೇಶ್ವರ್ ಕುಮಾರ್ ಮುಖಾಮುಖಿ !

Advertisement

IPL 2026 : ಇಂಡಿಯನ್ ಪ್ರೀಮಿಯರ್ ಲೀಗ್​ನ 16ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಅವರಂತಹ ದಿಗ್ಗಜ ಬೌಲರ್‌ಗೆ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿ ಅಬ್ಬರಿಸಿದ್ದ ವೈಭವ್ ಸೂರ್ಯವಂಶಿ ಹಾಗೂ ಸ್ವಿಂಗ್ ಮಾಂತ್ರಿಕ ಭುವನೇಶ್ವರ್ ಕುಮಾರ್ ಮುಖಾಮುಖಿಯಾಗಲಿದ್ದಾರೆ.

Advertisement

ಈ ಸೀಸನ್‌ನಲ್ಲಿ ವೈಭವ್ ಇದುವರೆಗೆ ಆಡಿರುವ 3 ಪಂದ್ಯಗಳಲ್ಲಿ 248.97 ರ ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ 122 ರನ್ ಗಳಿಸಿದ್ದಾರೆ. ಇತ್ತೀಚೆಗಷ್ಟೇ ಮುಂಬೈ ಇಂಡಿಯನ್ಸ್‌ನ ಬುಮ್ರಾ ಎಸೆದ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಅಟ್ಟಿದ ಇವರ ಧೈರ್ಯಕ್ಕೆ ಕ್ರಿಕೆಟ್ ಲೋಕವೇ ಬೆರಗಾಗಿದೆ. ಕೇವಲ 15 ವರ್ಷ ವಯಸ್ಸಿನ ಇವರು ಈ ಬಾರಿಯ ಐಪಿಎಲ್‌ನ ಅತ್ಯಂತ ಕಿರಿಯ ಆಟಗಾರ ಆಗಿದ್ದಾರೆ.

Advertisement

ಇದೇ ಸೀಸನ್‌ನಲ್ಲಿ ಭುವನೇಶ್ವರ್ ಕುಮಾರ್ ಐಪಿಎಲ್ ಇತಿಹಾಸದಲ್ಲಿ 200 ವಿಕೆಟ್ ಪಡೆದ ಮೊದಲ ವೇಗಿ ಎಂಬ ದಾಖಲೆ ಬರೆದಿದ್ದಾರೆ. ಪವರ್‌ಪ್ಲೇನಲ್ಲಿ ಚೆಂಡನ್ನು ಸ್ವಿಂಗ್ ಮಾಡುವ ಇವರ ಕಲೆ ಇಂದಿಗೂ ಬ್ಯಾಟರ್‌ಗಳಿಗೆ ಕಬ್ಬಿಣದ ಕಡಲೆಯಾಗಿದೆ. ಇನ್ನೂ ರಾಜಸ್ಥಾನ್ ರಾಯಲ್ಸ್ ಮತ್ತು ಆರ್‌ಸಿಬಿ ಎರಡೂ ತಂಡಗಳು ಈವರೆಗೆ ಅಜೇಯವಾಗಿದ್ದು, ಇಂದು ನಡೆಯುವ ಪಂದ್ಯದಲ್ಲಿ ಯಾವ ತಂಡ ತನ್ನ ಗೆಲುವಿನ ಓಟವನ್ನು ಮುಂದುವರಿಸುತ್ತದೆ ಎಂಬುದು ಕುತೂಹಲ ಮೂಡಿಸಿದೆ.

ವೈಭವ್ ಸೂರ್ಯವಂಶಿ Vs ಭುವನೇಶ್ವರ್ ಕುಮಾರ್

ವೈಭವ್ ಸೂರ್ಯವಂಶಿ ಕಳೆದ ಪಂದ್ಯದಲ್ಲಿ ತೋರಿದ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನ ಇಡೀ ಕ್ರಿಕೆಟ್ ಲೋಕವನ್ನೇ ಬೆರಗಾಗುವಂತೆ ಮಾಡಿದೆ. ವೈಭವ್ ಕೇವಲ ಮೂರು ಪಂದ್ಯಗಳಲ್ಲಿ 11 ಸಿಕ್ಸರ್ ಸಿಡಿಸುವ ಮೂಲಕ ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನವನ್ನು ಜಗತ್ತಿಗೆ ತೋರಿಸಿದ್ದಾರೆ. ಪ್ರತಿ ಪಂದ್ಯದಲ್ಲೂ ಅವರ ಸ್ಟ್ರೈಕ್ ರೇಟ್ 240ರ ಆಸುಪಾಸಿನಲ್ಲಿರುವುದು ಬೌಲರ್‌ಗಳಲ್ಲಿ ನಡುಕ ಹುಟ್ಟಿಸಿದೆ. ಇಂದು ನಡೆಯಲಿರುವ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಅವರ ಸ್ವಿಂಗ್ ದಾಳಿಯ ಎದುರು ವೈಭವ್ ಇದೇ ಫಾರ್ಮ್ ಮುಂದುವರಿಸುತ್ತಾರಾ ಎಂಬುದು ಕುತೂಹಲ ಮೂಡಿಸಿದೆ. ಜಸ್ಪ್ರೀತ್ ಬುಮ್ರಾ ಅವರ ವೇಗಕ್ಕೆ ವೈಭವ್ ತಮ್ಮ ಬ್ಯಾಟಿಂಗ್ ತಾಕತ್ತು ತೋರಿಸಿದ್ದರು. ಆದರೆ, ಭುವನೇಶ್ವರ್ ಕುಮಾರ್ ಅವರ ವೇಗಕ್ಕಿಂತ ಅವರ ಚಾಣಾಕ್ಷತನ ಅಪಾಯಕಾರಿ. ಆರಂಭಿಕ ಓವರ್‌ಗಳಲ್ಲಿ ವೈಭವ್ ಆತುರಪಡದೆ ಸಂಯಮದಿಂದ ಆಡುವುದು ಅನಿವಾರ್ಯ ಎನ್ನುತ್ತಿದ್ದಾರೆ ಹಲವು ಕ್ರಿಕೆಟ್‌ ದಿಗ್ಗಜರು.

ಆರ್ ಆರ್ ವಿರುದ್ಧ ಕೊಹ್ಲಿ ದಾಖಲೆ

ಕೊಹ್ಲಿ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ರಾಜಸ್ಥಾನ ವಿರುದ್ಧ ಕೊಹ್ಲಿ 800 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.

ಸೂರ್ಯವಂಶಿಯ ‘ಪಂಚ’ ಟಾರ್ಗೆಟ್!

ಮುಂದಿನ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು ಎದುರಿಸಲಿರುವ ವೈಭವ್ ಸೂರ್ಯವಂಶಿ, ಐವರು ಪ್ರಮುಖ ಬೌಲರ್‌ಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ವಿಶೇಷವಾಗಿ ಕಳೆದ ಸೀಸನ್‌ನಲ್ಲಿ ತಮಗೆ ಕಾಡಿದ್ದ ಭುವನೇಶ್ವರ್ ಕುಮಾರ್ ವಿರುದ್ಧ ಸೇಡು ತೀರಿಸಿಕೊಳ್ಳಲು ಸಜ್ಜಾಗಿದ್ದಾರೆ.

ಭುವನೇಶ್ವರ್ ಕುಮಾರ್ : ಕಳೆದ ಬಾರಿಯ ಐಪಿಎಲ್​ನಲ್ಲಿ ವೈಭವ್ ಸೂರ್ಯವಂಶಿ ಅವರನ್ನು 16 ರನ್‌ಗಳಿಗೆ ಔಟ್ ಮಾಡಿದ್ದ ಭುವನೇಶ್ವರ್ ಕುಮಾರ್ ವಿರುದ್ಧ ಈ ಬಾರಿ ಗುವಾಹಟಿಯ ತವರು ನೆಲದಲ್ಲಿ ಅಬ್ಬರಿಸುವ ಗುರಿ ಹೊಂದಿದ್ದಾರೆ.
ಕೃನಾಲ್ ಪಾಂಡ್ಯ : ಸ್ಪಿನ್ ಬಲೆ ಹೆಣೆಯುವ ಕೃನಾಲ್ ವಿರುದ್ಧ ದೊಡ್ಡ ಹೊಡೆತಗಳಿಗೆ ವೈಭವ್ ತಯಾರಿ ನಡೆಸಿದ್ದಾರೆ ಎಂಬುದನ್ನು ಕೋಚ್ ಬಹಿರಂಗಪಡಿಸಿದ್ದಾರೆ.
ಜೇಕಬ್ ಡಫಿ : ಆರ್‌ಸಿಬಿಯ ವಿದೇಶಿ ವೇಗಿಯ ವೇಗವನ್ನು ಎದುರಿಸಲು ವೈಭವ್ ಸಿದ್ಧರಾಗಿದ್ದಾರೆ.
ಅಭಿನಂದನ್ ಸಿಂಗ್ : ಉದಯೋನ್ಮುಖ ವೇಗಿಯ ಬೌಲಿಂಗ್‌ನಲ್ಲಿ ರನ್ ಕದಿಯುವ ತಂತ್ರ ರೂಪಿಸಿದ್ದಾರೆ.
ಸುಯಶ್ ಶರ್ಮಾ : ಗೂಗ್ಲಿ ಸ್ಪಿನ್ನರ್ ಸುಯಶ್ ಶರ್ಮಾ ಅವರ ಸ್ಪಿನ್ ದಾಳಿ ಎದುರಿಸಲು ನೆಟ್ಸ್‌ನಲ್ಲಿ ಯುವ ದಾಂಡಿಗ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ.

ಟಾಸ್ ಗೆದ್ದವರಿಗೆ ಹೆಚ್ಚಿನ ಲಾಭ

ಗುವಾಹಟಿಯ ಈ ಮೈದಾನದಲ್ಲಿ ರಾತ್ರಿಯ ಪಂದ್ಯವಾದ್ದರಿಂದ ಮೈದಾನದಲ್ಲಿ ಇಬ್ಬನಿ ಬೀಳುವ ಸಾಧ್ಯತೆ ಹೆಚ್ಚಿದೆ. ಇದರಿಂದಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲರ್‌ಗಳಿಗೆ ಚೆಂಡಿನ ಮೇಲೆ ಹಿಡಿತ ಸಾಧಿಸುವುದು ಕಷ್ಟವಾಗುತ್ತದೆ. ಹೀಗಾಗಿ, ಟಾಸ್ ಗೆಲ್ಲುವ ತಂಡ ಮೊದಲು ಬೌಲಿಂಗ್ ಆಯ್ದುಕೊಳ್ಳುವುದು ಬಹುತೇಕ ಖಚಿತ. ನಂತರ ಬ್ಯಾಟಿಂಗ್ ಮಾಡುವ ತಂಡಕ್ಕೆ ಇಬ್ಬನಿಯ ಲಾಭ ಸಿಗಲಿದ್ದು, ರನ್ ಬೆನ್ನಟ್ಟುವುದು ಸುಲಭ ಆಗಲಿದೆ.

ಮುಖಾಮುಖಿ ದಾಖಲೆ

ಐಪಿಎಲ್‌ನಲ್ಲಿ ಇದುವರೆಗೆ ರಾಜಸ್ಥಾನ ರಾಯಲ್ಸ್ ಮತ್ತು ಆರ್‌ಸಿಬಿ ನಡುವೆ 34 ಪಂದ್ಯಗಳು ನಡೆದಿವೆ. ಆರ್‌ಸಿಬಿ ಆಡಿರುವ 34 ಪಂದ್ಯಗಳಲ್ಲಿ 17 ರಲ್ಲಿ ಗೆದ್ದಿದ್ದರೆ, ರಾಜಸ್ಥಾನ ರಾಯಲ್ಸ್ 14 ಪಂದ್ಯಗಳನ್ನು ಗೆದ್ದಿದೆ. ಮೂರು ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿವೆ. ಕಳೆದ ಸೀಸನ್​ನಲ್ಲಿ ಈ ಎರಡೂ ತಂಡಗಳು ಎರಡು ಪಂದ್ಯಗಳನ್ನು ಆಡಿದ್ದವು. ಈ ಎರಡೂ ಪಂದ್ಯಗಳನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆದ್ದಿದೆ.

ಇಂದು ನಡೆಯುವ ಪಂದ್ಯಾಟವು ಎರಡು ಪ್ರಚಂಡ ತಂಡಗಳ ನಡುವಿನ ಹೋರಾಟವಾಗಿದ್ದು, ಯಾರು ಗೆಲುವಿನ ಓಟ ಮುಂದುವರಿಸುತ್ತಾರೆಂಬುದನ್ನು ಕಾದುನೋಡಬೇಕಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ