ಹಾವೇರಿ, ಡಿ. 05 : ಇಡೀ ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದ ಹಿಜಾಬ್, ಕೇಸರಿ ಶಾಲು ಗೊಂದಲ ಆ ಬಳಿಕ ಸಮವಸ್ತ್ರ ಸಂಹಿತೆಯ ಕಾರಣದಿಂದ ತಣ್ಣಗಾಗಿತ್ತು. ಆದರೀಗ ಮತ್ತೆ ಹಿಜಾಬ್, ಕೇಸರಿ ಶಾಲು ಕದನ ಮುನ್ನಲೆಗೆ ಬಂದಿದ್ದು, ಅದನ್ನು ಕಾಲೇಜು ಆಡಳಿತ ಮಂಡಳಿ ತಣ್ಣಗಾಗಿಸಿದ ಘಟನೆ ವರದಿಯಾಗಿದೆ. ಕಾಲೇಜಿಗೆ ಹಿಜಾಬ್ ಧರಿಸಿ ಬರುತ್ತಿರುವುದನ್ನು ಖಂಡಿಸಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸುವ ಮೂಲಕ ಕಡ್ಡಾಯವಾಗಿ ಸಮವಸ್ತ್ರ ಸಂಹಿತೆ ಪಾಲಿಸುವಂತೆ ಕಾಲೇಜು ಆಡಳಿತ ಮಂಡಳಿ ಹಾಗೂ ಪ್ರಾಚಾರ್ಯರಿಗೆ ಒತ್ತಾಯಿಸಿದ ಘಟನೆ ಜಿಲ್ಲೆಯ ಹಾನಗಲ್ಲ ತಾಲೂಕಿನ ಅಕ್ಕಿಆಲೂರಿನ ಸಿ.ಜಿ.ಬೆಲ್ಲದ ಕಾಲೇಜಿನಲ್ಲಿ ನಡೆದಿದೆ. ಈಗಾಗಲೇ, ಹಿಜಾಬ್ ಧರಿಸಿ ಕಾಲೇಜಿಗೆ ಬರುವುದನ್ನು ನಿಷೇಧಿಸಲಾಗಿತ್ತು. ಆದರೂ ಹಿಜಾಬ್ ಧರಿಸಿ ಬರುವುದನ್ನು ಉಳಿದಂತಹ ವಿದ್ಯಾರ್ಥಿಗಳು ವಿರೋಧಿಸಿದ್ದಾರೆನ್ನಲಾಗಿದೆ.
ಅಲ್ಲದೇ ಹಿಜಾಬ್ ಧರಿಸಿ ಬಂದವರಿಗೆ ಬಟ್ಟೆ ಬದಲಿಸಲು ಒಂದು ಕೊಠಡಿ ಮೀಸಲಿಡಲಾಗಿತ್ತು. ಆದರೂ ಕೆಲ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿನಲ್ಲಿ ತರಗತಿ ಹಾಜರಾಗುತ್ತಿದ್ದರು. ಇದನ್ನು ಖಂಡಿಸಿ ಎರಡೂವರೆ ತಿಂಗಳ ಹಿಂದೆಯೇ ವಿದ್ಯಾರ್ಥಿಗಳು ಮನವಿ ಸಲ್ಲಿಸಿದ್ದರು. ಅದಕ್ಕೆ ಕಾಲೇಜಿನ ಆಡಳಿತ ಮಂಡಳಿ ಸ್ಪಂದಿಸದ ಹಿನ್ನೆಲೆಯಲ್ಲಿ ಗುರುವಾರ ಕಾಲೇಜಿನ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ತರಗತಿಗಳಿಗೆ ಹಾಜರಾಗಿದ್ದರು. ಇದು ಕೆಲಕಾಲ ಗೊಂದಲಕ್ಕೆ ಕಾರಣವಾಗಿತ್ತು. ನಂತರ ವಿದ್ಯಾರ್ಥಿಗಳ ಜತೆ ಪ್ರಾಂಶುಪಾಲರು ಮಾತುಕತೆ ನಡೆಸಿ ಗೊಂದಲಕ್ಕೆ ತೆರೆ ಎಳೆದರು.

