ರಾಯಪುರ : ಶಹೀದ್ ವೀರ್ ನಾರಾಯಣ್ ಸಿಂಗ್ ಕ್ರೀಡಾಂಗಣದಲ್ಲಿ ಬುಧವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ ಮತ್ತು ಕೆಕೆಆರ್ ಮುಖಾಮುಖಿಯಾಗಲಿವೆ. 14 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿರುವ ಆರ್‌ಸಿಬಿಗೆ ಪ್ಲೇಆಫ್ ಅಧಿಕೃತಗೊಳಿಸಲು ಒಂದು ಗೆಲುವಿನ ಅಗತ್ಯವಿದ್ದರೆ, ಕೆಕೆಆರ್‌ಗೆ ಇದು ‘ಮಾಡು ಇಲ್ಲವೇ ಮಡಿ’ ಪಂದ್ಯವಾಗಿದೆ. ಸತತ ಎರಡು ಡಕೌಟ್ ಬಳಿಕ ವಿರಾಟ್ ಕೊಹ್ಲಿ ಲಯಕ್ಕೆ ಮರಳುವರೇ ಎಂಬುದು ಕುತೂಹಲ ಮೂಡಿಸಿದೆ. ಸಮತೋಲಿತ ಪಿಚ್ ಹೊಂದಿರುವ ರಾಯಪುರದಲ್ಲಿ ಟಾಸ್ ಗೆದ್ದವರು ಬ್ಯಾಟಿಂಗ್ ಆಯ್ದುಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಐಪಿಎಲ್ 2026ರ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬುಧವಾರ ತನ್ನ 12ನೇ ಲೀಗ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವನ್ನು ಎದುರಿಸಲಿದೆ. ರಾಯಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯವು ಪ್ಲೇಆಫ್ ದೃಷ್ಟಿಯಿಂದ ಎರಡೂ ತಂಡಗಳಿಗೆ ಅತ್ಯಂತ ನಿರ್ಣಾಯಕವಾಗಿದೆ. ಆದರೆ ಎರಡೂ ತಂಡಗಳಲ್ಲಿ ಹೆಚ್ಚು ಒತ್ತಡದಲ್ಲಿ ಇರುವುದು ಕೋಲ್ಕತಾ. ಯಾಕೆಂದರೆ ಕೋಲ್ಕತಾ ಇನ್ನುಳಿದ ನಾಲ್ಕು ಪಂದ್ಯಗಳನ್ನು ಗೆದ್ದರೆ ಮಾತ್ರ ಪ್ಲೇ ಆಫ್ ಗೆ ಏರಲು ಸಾಧ್ಯ. ಅದೇ ಆರ್ ಸಿಬಿ ಇನ್ನುಳಿದ 3 ಪಂದ್ಯಗಳಿಂದ 1 ಪಂದ್ಯ ಗೆದ್ದರೂ ಸಾಕು.
ಆರ್‌ಸಿಬಿಗೆ ಒಂದು ಗೆಲುವಿನ ಅಗತ್ಯ
ತನ್ನ ಎರಡನೇ ತವರು ಮೈದಾನದಲ್ಲಿ ನಡೆದ ಹಿಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರೋಚಕ ಜಯ ದಾಖಲಿಸಿರುವ ಆರ್‌ಸಿಬಿ, ಇದೀಗ ಸತತ ಎರಡನೇ ಗೆಲುವಿನ ನಿರೀಕ್ಷೆಯಲ್ಲಿದೆ. ರಜತ್ ಪಾಟೀದಾರ್ ನೇತೃತ್ವದ ಬೆಂಗಳೂರು ತಂಡವು ಪ್ರಸ್ತುತ 11 ಪಂದ್ಯಗಳಲ್ಲಿ 7 ಗೆಲುವಿನೊಂದಿಗೆ 14 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಪ್ಲೇಆಫ್ ಪ್ರವೇಶವನ್ನು ಅಧಿಕೃತವಾಗಿ ಖಚಿತಪಡಿಸಿಕೊಳ್ಳಲು ತಂಡಕ್ಕೆ ಕನಿಷ್ಠ 16 ಅಂಕಗಳ ಅಗತ್ಯವಿದ್ದು, ಇಂದಿನ ಪಂದ್ಯ ಗೆದ್ದರೆ ಆ ಗುರಿ ತಲುಪಲಿದೆ.
ಕೆಕೆಆರ್‌ಗೆ ಮಾಡು- ಮಡಿ ಪಂದ್ಯ
ಮತ್ತೊಂದೆಡೆ, ಸತತ ಐದು ಸೋಲುಗಳ ನಂತರ ಸತತ ನಾಲ್ಕು ಗೆಲುವು ಸಾಧಿಸಿ ಲಯಕ್ಕೆ ಮರಳಿರುವ ಕೆಕೆಆರ್ ತಂಡಕ್ಕೆ ಈ ಪಂದ್ಯ ‘ಜೀವನ್ಮರಣ’ದ ಹೋರಾಟವಾಗಿದೆ. 10 ಪಂದ್ಯಗಳಿಂದ 9 ಅಂಕ ಹೊಂದಿರುವ ಅಜಿಂಕ್ಯ ರಹಾನೆ ಪಡೆ, ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲು ಉಳಿದಿರುವ ಎಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಸುನಿಲ್ ನರೇನ್ ಮತ್ತು ವರುಣ್ ಚಕ್ರವರ್ತಿ ಅವರ ಸ್ಪಿನ್ ಜೋಡಿ ಫಾರ್ಮ್‌ನಲ್ಲಿರುವುದು ತಂಡದ ಪ್ಲಸ್ ಪಾಯಿಂಟ್ ಆಗಿದೆ.
ಕೊಹ್ಲಿ ಲಯಕ್ಕೆ ಮರಳುವರೇ?
ಬೆಂಗಳೂರು ತಂಡವು ಬ್ಯಾಟಿಂಗ್‌ನಲ್ಲಿ ಸುಧಾರಣೆ ಕಾಣಬೇಕಿದೆ. ಕಳೆದ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟ್ ಆಗಿರುವ ವಿರಾಟ್ ಕೊಹ್ಲಿ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಅವರು ಟಿ20 ಮಾದರಿಯಲ್ಲಿ 14,000 ರನ್ ಪೂರೈಸಲು ಇನ್ನು ಕೇವಲ 78 ರನ್‌ಗಳ ಬಾಕಿ ಇದ್ದು, ಇಂದಿನ ಪಂದ್ಯದಲ್ಲಿ ಈ ಮೈಲಿಗಲ್ಲು ತಲುಪುವರೇ ಎಂಬ ಕುತೂಹಲ ಮೂಡಿದೆ. ಇದರೊಂದಿಗೆ ದೇವದತ್ ಪಡಿಕ್ಕಲ್ ಕೂಡ ಜವಾಬ್ದಾರಿಯುತ ಆಟವಾಡಬೇಕಿದೆ. ಬೌಲಿಂಗ್‌ನಲ್ಲಿ ಭುವನೇಶ್ವರ್ ಕುಮಾರ್ ಮತ್ತು ಆಲ್‌ರೌಂಡರ್ ಕೃಣಾಲ್ ಪಾಂಡ್ಯ ಆರ್‌ಸಿಬಿ ಪಾಲಿಗೆ ಪ್ರಮುಖ ಅಸ್ತ್ರಗಳಾಗಿದ್ದಾರೆ. ಕಳೆದ ಪಂದ್ಯದಲ್ಲಿ ಸ್ನಾಯು ಸೆಳೆತದ ನಡುವೆಯೂ ಅದ್ಭುತವಾಗಿ ಆಡಿದ್ದ ಕೃಣಾಲ್ ಅವರ ಫಿಟ್ನೆಸ್ ಮತ್ತು ಪ್ರದರ್ಶನ ತಂಡಕ್ಕೆ ಮುಖ್ಯವಾಗಿದೆ. ಒಟ್ಟಾರೆಯಾಗಿ, ರಾಯಪುರದ ಪ್ರೇಕ್ಷಕರಿಗೆ ಇಂದು ಮತ್ತೊಂದು ಹೈ-ವೋಲ್ಟೇಜ್ ಪಂದ್ಯದ ರಸದೌತಣ ಸಿಗುವುದು ಖಚಿತ.
ಹೇಗಿದೆ ರಾಯ್ಪುರ ಪಿಚ್?
ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣವು ಅತ್ಯಂತ ಸಮತೋಲಿತ ಪಿಚ್ ಅನ್ನು ಹೊಂದಿದೆ. ಬೌನ್ಸ್ ಗೆ ಸಹಾಯ ಮಾಡುವ ಟ್ರ್ಯಾಕ್ ಪ್ರಾರಂಭದ ಕೆಲ ಓವರ್ ಗಳಲ್ಲಿ ವೇಗದ ಬೌಲರ್‌ಗಳಿಗೆ ಅನುಕೂಲಕರವಾಗಿ ಪರಿಣಮಿಸಬಹುದು. ನಂತರ ಸ್ಪಿ, ಆದರೆ ನಂತರ ಸ್ಪಿನ್ನರ್‌ಗಳಿಗೆ ಸಹಾಯ ಮಾಡಬಹುದು. ಪಂದ್ಯ ಸಾಗಿದಂತೆ ಬ್ಯಾಟರ್ ಗಳಿಗೆ ರನ್ ಗಳಿಸಲು ಸಹಾಯಕವಾಗಬಹುದು. ಆದಾಗ್ಯೂ ಸೀಮಾರೇಖೆಯು ದೂರ ಇರುವುದರಿಂದ ಬೌಂಡರಿ, ಸಿಕ್ಸರ್ ಗಳ ಸುರಿಮಳೆ ಕಷ್ಟಸಾಧ್ಯ. ಐಪಿಎಲ್‌ನಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ ಇಲ್ಲಿ ಸುಮಾರು 172 ಆಗಿದೆ. ಇಲ್ಲಿ ಟಾಸ್ ಗೆದ್ದವರು ಮೊದಲು ಬ್ಯಾಟಿಂಗ್ ಆಯ್ದುಕೊಳ್ಳುವ ಸಾಧ್ಯತೆ ಹೆಚ್ಚು.

