ಕೊಲ್ಲಿ, ಜೂ. 02 : ಕೊಲ್ಲಿ ದೇವಸ್ಥಾನದ ಬಳಿ ಇರುವ ಜಮೀನು ವಿವಾದ ಇದೀಗ ಹೊಸ ರೂಪ ಪಡೆದುಕೊಂಡಿದ್ದು, ಅನಾದಿ ಕಾಲದಿಂದ ದೇವಸ್ಥಾನದ ಬಾವಲಿ ಬನವು ಈಗ ಇರುವ ಜಾಗದಲ್ಲೇ ಇರಲಿಲ್ಲ, ಮೂಲದಲ್ಲಿದ್ದ ಬಾವಲಿ ಬನ ಈಗ ರಬ್ಬರ್ ತೋಟವಾಗಿ ಪರಿವರ್ತನೆಗೊಂಡಿದೆ ಎಂದು ಗ್ರಾಮಸ್ಥರು ಧ್ವನಿ ನ್ಯೂಸ್ ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಧ್ವನಿ ನ್ಯೂಸ್ ಜೊತೆ ಮಾತನಾಡಿದ ಜಾಗದ ಮಾಲಕರಾದ ಶ್ರೀ ಲೋಕೇಶ್ ರಾವ್ ಅವರು, ಗ್ರಾಮಸ್ಥರ ಮನವಿಯ ಮೇರೆಗೆ ನಾನು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷನಾಗಿದ್ದೆ, ಊರ-ಪರವೂರ ಸಹಕಾರದಿಂದಾಗಿ ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ, ದುರ್ಗಾ ದೇವಿ ದೇವಸ್ಥಾನವು ಸುಂದರವಾಗಿ ನಿರ್ಮಾಣಗೊಂಡು, ವೈಭವದಿಂದ ಬ್ರಹ್ಮಕಲಶೋತ್ಸವ ನಡೆಯಿತು. ದೇವಸ್ಥಾನದ ಪಕ್ಕದಲ್ಲೇ ಇರುವ 66/1 ಖಾತಾ ಸಂಖ್ಯೆಯ ಶ್ರೀ ರಾಮರಾವ್ ಶ್ರೀಕಾಂತ್ ರಾವ್ ಕುಟುಂಬಕ್ಕೆ ಸೇರಿದ ಪಾಳುಬಿದ್ದಿದ್ದ ಜಮೀನನ್ನು ನಾನು ಖರೀದಿ ಮಾಡಿದ್ದೇನೆ. ಅಲ್ಲದೆ, ದೇವಸ್ಥಾನದ ಒಂದು ಭಾಗದ 89 ಸೆಂಟ್ಸ್ ಜಾಗವನ್ನು 04 ಲಕ್ಷ ರೂಪಾಯಿಗೆ ದೇವಸ್ಥಾನಕ್ಕೆಂದು ನೀಡುತ್ತಾರೆ. ಆ 04 ಲಕ್ಷವನ್ನು ಮತ್ತೆ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ನೀಡಲಾಗಿದೆ.
ಅಲ್ಲೇ ಪಕ್ಕದ ನಾನು ಖರೀದಿಸಿರುವ 66/1 ಖಾತಾ ಸಂಖ್ಯೆಯ ಈಗ 66/25 ಎಂದು ಬದಲಾಗಿದೆ. ಅದನ್ನು ನಾನು ಖರೀದಿಸಿದ್ದೇನೆ, ಸದ್ಯ ಅದು ನನ್ನ ಪಟ್ಟಾ ಜಮೀನು ಆಗಿರುತ್ತದೆ. ನಾನು ಯಾವಾಗ ಜಮೀನನ್ನು ಖರೀದಿಸುತ್ತೇನೆಯೋ ಆಗ ಕೆಲವರ ಆಕ್ಷೇಪ ಆರಂಭವಾಯಿತು. ತಹಶಿಲ್ದಾರ್ ಹಾಗೂ ಅರಣ್ಯ ಇಲಾಖೆಗೂ ದೂರು ನೀಡಿದ್ದರು. ಅಲ್ಲಿ ಕೂಲಂಕುಷ ತನಿಖೆ ನಡೆದಾಗ, ಆ ಜಮೀನು ದೇವಸ್ಥಾನದ್ದು ಅಥವಾ ಬಾವಲಿ ಬನ ಎಂಬುದಕ್ಕೆ ಯಾವುದೇ ಸಾಕ್ಷಿ ಆಧಾರ ಇರಲಿಲ್ಲ. ಹೀಗಾಗಿ ತಹಶಿಲ್ದಾರ್ ಅವರೇ ಆ ಭೂಮಿಯನ್ನು ನನ್ನ ಹೆಸರಿಗೆ ಬರೆದುಕೊಟ್ಟಿದ್ದಾರೆ. ಸದ್ಯ ನಾನು ಕೆಲವೊಂದು ಮರಗಳನ್ನು ತೆರವುಗೊಳಿಸಿದ್ದೇನೆ, ಬೋರ್ ವೆಲ್ ತೆಗೆಯುವುದಕ್ಕೂ ಪರ್ಮಿಷನ್ ಪಡೆದಿದ್ದೇನೆ. ನಾವು ಜಮೀನಿನಲ್ಲಿ ಕೆಲಸಕ್ಕೆ ಕೈ ಹಾಕಿದಾಗ ಕೆಲವರು ಕೆಲಸದವರ ಮೇಲೆಯೇ ಕಲ್ಲು ತೂರಾಟ ನಡೆಸಿದ್ದರು ಎಂದು ಬೇಸರ ವ್ಯಕ್ತಪಡಿಸಿದ್ದರು.
ಒಳ್ಳೆ ಉದ್ಧೇಶದಿಂದ ಜಾಗ ಖರೀದಿಸಿದ್ದೇನೆ :
ಜಮೀನು ನನ್ನ ಪಟ್ಟಾ ಲ್ಯಾಂಡ್ ಆಗಿರುತ್ತದೆ. ನಾನು ಖರೀದಿಸಿರುವ ದೇವಸ್ಥಾನ ಬಳಿಯ ಜಮೀನಿನಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವಂತಹ ಉದ್ದೇಶವನ್ನು ಹೊಂದಿದ್ದೆ ಅದು ವೃದ್ಧಾಶ್ರಮ ಅಥವಾ ಕ್ಲೀನಿಕ್ ಅಥವಾ ಹಣ್ಣಿನ ಗಿಡಗಳ ತೋಟವನ್ನು ನಿರ್ಮಾಣ ಮಾಡಬೇಕೆಂದುಕೊಂಡಿದ್ದೆ. ಆದರೆ, ಈಗ ಅಂತಹ ಉದ್ಧೇಶವನ್ನೇ ಕೆಲವರು ಹಾಳು ಮಾಡಿದ್ದಾರೆ. ನಾನು ವೃತ್ತಿಯಲ್ಲಿ ವೈದ್ಯನಾದರೂ 40 ವರ್ಷದಿಂದ ಕೃಷಿ ಚಟುವಟಿಕೆಯಲ್ಲೇ ತೊಡಗಿಸಿಕೊಂಡಿದ್ದೇನೆ. ನಮ್ಮ ಮನೆ ಸಮೀಪದ ತೋಟದಲ್ಲಿ ಹಲವು ಬಗೆಯ ಹಕ್ಕಿಗಳು, ಪ್ರಾಣಿಗಳು ಬರುತ್ತವೆ. ಬೆಳೆದಂತಹ ಸೀಯಾಳ ಅಥವಾ ಇನ್ಯಾವುದೇ ಹಣ್ಣು ಹಂಪಲುಗಳನ್ನು ಕೊಯ್ದು ತಿಂದರೆ ನಾವು ಯಾವತ್ತೂ ಅವುಗಳನ್ನು ಓಡಿಸಿಲ್ಲ. ನಾವು ಯಾರಿಗೂ ಅನ್ಯಾಯ ಮಾಡಿ ಬದುಕಿದವರು ಅಲ್ಲ ಎಂದರು.
ನನ್ನ ಜಾಗ ಬಾವಲಿ ಬನವೇ ಇಲ್ಲ, ಬಾವಲಿ ಬನ ಬೇರೆಯೇ ಇದೆ :
ನಾನು ಖರೀದಿಸಿರುವ ದೇವಸ್ಥಾನ ಸಮೀಪದ ಜಾಗವೇನಿದೆ, ಅದು ಬಾವಲಿ ಬನವೇ ಅಲ್ಲ. ಬಾವಲಿ ಬನ ಬೇರೆಯೇ ಇದೆ. ದೇವಸ್ಥಾನದಿಂದ ಅನತಿ ದೂರದಲ್ಲಿರುವ ಸರ್ವೆ ನಂಬರ್ 75ರ ಜಾಗವೇನಿದೆ ಅದು ಬಾವಲಿ ಬನವಾಗಿದೆ. ಅದು ಇಂದಿಗೂ ಸರ್ಕಾರ ಜಾಗವಾಗಿರುತ್ತದೆ. ಆದರೆ, ಈಗ ಅಲ್ಲಿ ಬೃಹತ್ ಮರಗಳನ್ನೆಲ್ಲಾ ಕಡಿದು ರಬ್ಬರ್ ತೋಟ ನಿರ್ಮಿಸಿದ್ದಾರೆ. ಸರ್ವೆ ನಂಬರ್ 75ರಲ್ಲಿ ಸುಮಾರು 93 ಸೆಂಟ್ಸ್ ಜಮೀನು ಬಾವಲಿ ಬನವಾಗಿತ್ತು. ಅಲ್ಲಿ ಬಾವಲಿಗಳು ಆಶ್ರಯ ಪಡೆದಿದ್ದ, ಬೃಹತ್ ಮರಗಳನ್ನೆಲ್ಲಾ ಕಡಿದು ಹಾಕಿದರು. ಆಗ ಬಾವಲಿಗಳು ಸಹಜವಾಗಿಯೇ ಆಶ್ರಯ ಹರಸಿ ನನ್ನ ಜಾಗದಲ್ಲಿದ್ದ ಬೃಹತ್ ಮರಗಳನ್ನು ಆಯ್ಕೆ ಮಾಡಿಕೊಂಡವು. ಆದರೆ, ಅನಾದಿ ಕಾಲದಿಂದಲೂ ಇದ್ದಂತಹ ಬಾವಲಿ ಬನವನ್ನು ಉಳಿಸಿಕೊಳ್ಳುವ, ಅಲ್ಲಿ ಮರಗಳನ್ನು ಬೆಳೆಸುವ ಎಂದರು. ಇನ್ನು, ನನ್ನ ಪಟ್ಟಾ ಜಾಗದಲ್ಲಿ ಕೆಲವೊಂದಿಷ್ಟು ಮರದಲ್ಲಿ ಮಾತ್ರ ಬಾವಲಿಗಳು ವಾಸ ಮಾಡುತ್ತಿವೆ. ಆ ಬಾವಲಿಗಳಿರುವ ಮರಗಳನ್ನು ನಾನು ತೆರವು ಮಾಡಿಲ್ಲ, ಅವುಗಳು ಇರುವವರೆಗೆ ಆ ಮರಗಳನ್ನು ತೆಗೆಯುವುದೂ ಇಲ್ಲ, ಅವುಗಳನ್ನು ಓಡಿಸುವುದೂ ಇಲ್ಲ. ಆದರೆ, ಅವುಗಳೇ ಬೇರೆ ಆಶ್ರಯ ಹರಸಿ ಹೋದಾಗ, ಅವುಗಳನ್ನು ಹಿಡಿದುಕೊಂಡು ಬಂದು ಕೂರಿಸಲು ನನ್ನಿಂದ ಸಾದ್ಯವಿಲ್ಲ ಎಂದರು.
ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಯದಲ್ಲಿ ಅದೇ ಕಾಡಿನಲ್ಲಿ ಜಾತ್ರೆಯ ಸಂತೆಯನ್ನು ನಿರ್ಮಾಣ ಮಾಡಿದ್ದೇವೆ, ದನಗಳ ಜಾತ್ರೆ ಮಾಡಿದ್ದೇವೆ ಆಗ ಈ ಬಾವಲಿಗಳು ಇರಲಿಲ್ಲವೇ ? ನಾನು ಯಾವಾಗ ಜಾಗ ತೆಗೆದುಕೊಂಡೆವೋ ಅಂದಿನಿಂದ ಈ ಬಾವಲಿಗಳ ಕಾರಣ ಹೊರಗೆ ಬಂತು. ಸುಮ್ಮನೆ ನಮ್ಮ ಮೇಲೆ ಅಪವಾದಗಳನ್ನು ಮಾಡುತ್ತಿದ್ದಾರೆ, ನಾವು ಯಾವ ತಪ್ಪನ್ನೂ ಮಾಡಿಲ್ಲ. ಖರೀದಿಸಿರುವ ಜಾಗದಲ್ಲಿ ಒಂದಷ್ಟು ಹಣ್ಣಿನ ಗಿಡಗಳನ್ನು ಬೆಳೆಸುತ್ತೇನೆ, ಕೃಷಿ ಮಾಡುವುದಕ್ಕಾಗಿ ಉಪಯೋಗಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ಆ ಜಾಗ ಡಾಕ್ಟರ್ ಲೋಕೇಶ್ ರವರಿಗೆ ಸೇರಿದ್ದು – ಗ್ರಾಮಸ್ಥರು
ದೇವಸ್ಥಾನದ ಸಮೀಪದಲ್ಲಿರುವ ಜಮೀನು ಡಾಕ್ಟರ್ ಲೋಕೇಶ್ ರವರಿಗೆ ಸೇರಿದ್ದಾಗಿದೆ. ಬಾವಲಿ ಬನ ನಿಜವಾಗಿಯೂ ಅಲ್ಲಿ ಇರಲೇ ಇಲ್ಲ, ಅದು ಬೇರೆಯೇ ಜಾಗವಿತ್ತು. ಆದರೆ ಅಲ್ಲಿ ಮರಗಳನ್ನು ಕಡಿದು ಹಾಕಿದ್ದರಿಂದ ಸಹಜವಾಗಿಯೇ ಇಲ್ಲಿ ಬಂದು ನೆಲೆಸಿದೆ. ಲೋಕೇಶ್ ರವರು, ಯಾರಿಗೂ ಅನ್ಯಾಯ ಮಾಡಿಲ್ಲ. ದೇವಸ್ಥಾನವನ್ನೂ ಅಭಿವೃದ್ಧಿಗೊಳಿಸಿದ್ದು ಅವರೇ ಎಂದು ಗ್ರಾಮಸ್ಥರಾದ ಶ್ರೀ ತಿಮ್ಮಪ್ಪ ಪೂಜಾರಿ ಮತ್ತು ಶ್ರೀ ಉಮರ್ ಅವರು ತಿಳಿಸಿದ್ದಾರೆ.


