ಲಕ್ನೋ, ಜೂ. 22 : ಅಲಿಗಂಜ್ ಪ್ರದೇಶದ ಕಟ್ಟಡವೊಂದರಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಬೆಂಕಿ ದುರಂತದಲ್ಲಿ ಕೋಚಿಂಗ್ ಸೆಂಟರ್‌ವೊಂದು ಧಗಧಗನೆ ಹೊತ್ತಿ ಉರಿದಿದೆ. ಅವಘಡದಿಂದ ಪಾರಾಗಲು ವಿದ್ಯಾರ್ಥಿಗಳು ಕಟ್ಟಡದ ಮೇಲಿಂದ ಜಿಗಿದು ಕೆಳಗೆ ಬಿದ್ದಿರುವ ದೃಶ್ಯದ ವಿಡಿಯೋ ವೈರಲ್ ಆಗಿದ್ದು, ಮೈನಡುಗಿಸುವಂತಿದೆ.
ಅಲಿಗಂಜ್‌ನ ಪೂರ್ಣಿಯಾ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡು ಸುತ್ತಮುತ್ತ ದಟ್ಟವಾದ ಹೊಗೆ ಆವರಿಸಿತು. ಬೆಂಕಿಯ ಕೆನ್ನಾಲಿಗೆ ಕಟ್ಟಡವನ್ನು ಪೂರ್ತಿ ಆವರಿಸಿತ್ತು. ಬೆಂಕಿಯಿಂದ ಹೊಮ್ಮಿದ ಹೊಗೆ ಆಕಾಶದಲ್ಲಿ ಕಾರ್ಮೋಡ ಸೃಷ್ಟಿಸಿತು. ಹಲವಾರು ಜನರು ಕಟ್ಟಡದೊಳಗೆ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.
ಬೆಂಕಿ ಅವಘಡಕ್ಕೆ ತುತ್ತಾದ ಕಟ್ಟಡದ ನೆಲ ಮಹಡಿಯಲ್ಲಿ ಸಾಕುಪ್ರಾಣಿ ಅಂಗಡಿ ಇತ್ತು. ಮೇಲಿನ ಮಹಡಿಯಲ್ಲಿ ಗೇಮಿಂಗ್ ವಲಯವಿತ್ತು. ಅಲ್ಲಿ ಉದ್ಯೋಗಿಗಳು ಆಟಗಳಿಗೆ ಸಂಬಂಧಿಸಿದ ಸಾಫ್ಟ್‌ವೇರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅದೇ ಕಟ್ಟಡದ ಪೂರ್ಣಿಯಾದ ತರಬೇತಿ ಕೇಂದ್ರವಿದೆ ಎನ್ನಲಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಎಲ್ಲಾ ಮಕ್ಕಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ. ತುರ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿವೆ. ಬೆಂಕಿ ಅಕ್ಕಪಕ್ಕದ ಕಟ್ಟಡಗಳಿಗೆ ಆವರಿಸದಂತೆ ನಿಯಂತ್ರಿಸಲು ಅಗ್ನಿಶಾಮಕದಳದ ಸಿಬ್ಬಂದಿ ಕಾರ್ಯಾಚರಣೆ ತೀವ್ರಗೊಳಿಸಿದರು.
ಘಟನೆಯ ಬಗ್ಗೆ ಮಾಹಿತಿ ಪಡೆದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಧಿಕಾರಿಗಳಿಗೆ ತಕ್ಷಣ ಸ್ಥಳಕ್ಕೆ ತಲುಪಿ ಅಗತ್ಯ ನೆರವು ಕಲ್ಪಿಸುವಂತೆ ಸೂಚಿಸಿದರು. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ತ್ವರಿತಗೊಳಿಸುವಂತೆ ಮುಖ್ಯಮಂತ್ರಿ ಆದೇಶಿಸಿದ್ದಾರೆ. ಗಾಯಗೊಂಡವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬೆಂಕಿ ಅವಘಡಕ್ಕೆ ಕಾರಣವೇನೆಂದು ಇದುವರೆಗೆ ತಿಳಿದುಬಂದಿಲ್ಲ. ಹಿರಿಯ ಆಡಳಿತ ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿಯೇ ಇದ್ದು, ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.


