ಬೆಂಗಳೂರು : ಮಹಿಳಾ ನೌಕರರಿಗೆ ಋತುಚಕ್ರದ ರಜೆ – ಮಧ್ಯಂತರ ತಡೆಯಾಜ್ಞೆ ನೀಡಿದ ಹೈ ಕೋರ್ಟ್

ಬೆಂಗಳೂರು, ಡಿ. 09 : ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನ ಸಹಿತ ರಜೆ ಸೌಲಭ್ಯ ಒದಗಿಸುವ ಸಂಬಂಧ ರಾಜ್ಯ ಸರಕಾರದ ಹೊರಡಿಸಿದ್ದ ಅಧಿಸೂಚನೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಹಿಂದೆ ರಾಜ್ಯದಲ್ಲಿ ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಣಿಯಾಗಿರುವ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನ ಸಹಿತ ರಜೆ ಸೌಲಭ್ಯ ಒದಗಿಸುವ ಸಂಬಂಧ ರಾಜ್ಯ ಸರಕಾರದ ಆದೇಶವನ್ನು ಹೊರಡಿಸಿತ್ತು.

Advertisement

ರಾಜ್ಯ ಕಾರ್ಮಿಕ ಇಲಾಖೆ 2025ರ ನವೆಂಬರ್ 20ರಂದು ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಬೆಂಗಳೂರು ಹೋಟೆಲ್ ಗಳ ಸಂಘ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರ ಕೋರಿಕೆಯಂತೆ ಕಾರ್ಮಿಕ ಇಲಾಖೆಯ ಅಧಿಸೂಚನೆಗೆ ತಡೆ ನೀಡಲಾಗಿದೆ. ರಾಜ್ಯ ಸರಕಾರವು ತಡೆಯಾಜ್ಞೆ ತೆರವಿಗೆ ಅರ್ಜಿ ಸಲ್ಲಿಸುವ ಸ್ವಾತಂತ್ರ್ಯ ಹೊಂದಿದೆ ಎಂದು ಆದೇಶ ನೀಡಿತು. ಜೊತೆಗೆ, ಅರ್ಜಿ ಸಂಬಂಧ ರಾಜ್ಯ ಕಾರ್ಮಿಕ ಇಲಾಖೆಗೆ ನೋಟಿಸ್ ಜಾರಿಗೊಳಿಸಿದ್ದು, ಆಕ್ಷೇಪ ಸಲ್ಲಿಸಲು ಸೂಚಿಸಿದ ನ್ಯಾಯಪೀಠ, ಚಳಿಗಾಲದ ರಜೆಯ ಬಳಿಕ ಅರ್ಜಿ ವಿಚಾರಣೆ ಮುಂದೂಡಿತು.

ಅರ್ಜಿದಾರರ ವಾದವೇನು?

ಇದಕ್ಕೂ ಮುನ್ನ ಬೆಂಗಳೂರು ಹೋಟೆಲುಗಳ ಸಂಘ ಪರ ವಕೀಲ ಬಿ.ಕೆ.ಪ್ರಶಾಂತ್ ವಾದ ಮಂಡಿಸಿ, ಕಾರ್ಮಿಕ ಇಲಾಖೆಯು 18ರಿಂದ 52 ವಯೋಮಾನದ ಮಹಿಳಾ ಉದ್ಯೋಗಿಗಳಿಗೆ ಮಾಸಿಕ ಒಂದು ದಿನದ ಋತುಚಕ್ರದ ರಜೆ ನೀಡುವುದನ್ನು ಕಡ್ಡಾಯಗೊಳಿಸಿದೆ. ಫ್ಯಾಕ್ಟರಿ ಕಾಯ್ದೆ ಬೀಡಿ ಮತ್ತು ಸಿಗರೇಟು, ಪ್ಲಾಂಟೇಷನ್ ಕಾರ್ಮಿಕರು, ಅಂಗಡಿ ಮತ್ತು ವಾಣಿಜ್ಯ ಮೋಟ‌ರ್ ಟ್ರಾಸ್ಪೋರ್ಟ್ ಸ್ಥಾಪನಾ ಕಾಯ್ದೆ ಅಡಿ ಬರುವ ಸಂಸ್ಥೆಗಳಿಗೆ ಅನ್ವಯಿಸುವಂತೆ ರಾಜ್ಯ ಸರಕಾರ ಕಾರ್ಯಕಾರಿ ಆದೇಶ ಮಾಡಿದೆ. ಮೇಲಿನ ಎಲ್ಲ ಕಾಯ್ದೆಗಳೂ ಸಮಗ್ರ ರಜೆ ನೀತಿಯನ್ನು ಹೊಂದಿವೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಇದನ್ನೂ ಓದಿ :

ಮುಂದುವರಿದು, ಫ್ಯಾಕ್ಟರಿ ಕಾಯ್ದೆ ಪ್ರಕಾರ 20 ದಿನಗಳ ದುಡಿಮೆಗೆ ಒಂದು ಗಳಿಕೆ ರಜೆ (Earned Leave) ನೀಡಲು ಅವಕಾಶ ಕಲ್ಪಿಸಲಾಗಿದೆ. ಇದರ ಪ್ರಕಾರ ವರ್ಷಕ್ಕೆ 18 ರಜೆ ನೀಡಲಾಗುತ್ತಿದೆ. ಅಂಗಡಿ ಮತ್ತು ಕಮರ್ಷಿಯಲ್ ಸಂಸ್ಥೆಗಳು 18 ದಿನಗಳ ಗಳಿಕೆ ರಜೆಯ ಜೊತೆಗೆ 12 ದಿನ ಅನಾರೋಗ್ಯ ರಜೆ (Sick Leave) ನೀಡುತ್ತಿವೆ, 12 ಸಾಂದರ್ಭಿಕ ರಜೆಗಳೂ (Casual Leave) ಇವೆ. ಆದರೆ, ಯಾವುದೇ ರಾಜ್ಯ ಅಥವಾ ಕೇಂದ್ರ ಸರಕಾರದ ಕಾಯ್ದೆಯಲ್ಲಿ ಋತುಚಕ್ರದ ರಜೆ ಕಡ್ಡಾಯಗೊಳಿಸಿಲ್ಲ. ಋತುಚಕ್ರದ ರಜೆ ನೀಡಲು ಕಾಯ್ದೆಯ ಯಾವುದೇ ನಿಬಂಧನೆಯಲ್ಲೂ ಅವಕಾಶವಿಲ್ಲ. ಯಾವ ಅಧಿಕಾರದ ಅಡಿ ಸರಕಾರ ಅಧಿಸೂಚನೆ ಹೊರಡಿಸಿದೆ ಎಂಬುದನ್ನೂ ಅಧಿಸೂಚನೆಯಲ್ಲಿ ಉಲ್ಲೇಖವಾಗಿಲ್ಲ ಎಂದು ಆಕ್ಷೇಪಿಸಿದರು.

ಈ ವೇಳೆ ನ್ಯಾಯಪೀಠ, ಅಧಿಸೂಚನೆ ಹೊರಡಿಸುವಾಗ ರಾಜ್ಯ ಸರಕಾರ ಸಂಬಂಧಿತ ಸಂಸ್ಥೆಗಳ ಜತೆ ಸಭೆ ನಡೆಸಿದೆಯೇ? ಅವುಗಳಿಂದ ಆಕ್ಷೇಪ ಸ್ವೀಕರಿಸಲಾಗಿದೆಯೇ ಎಂದು ಪ್ರಶ್ನಿಸಿತು. ಅದಕ್ಕೆ ವಕೀಲ ಪ್ರಶಾಂತ್ ‘ಇಲ್ಲ’ ಎಂದರು.
ಈ ನಡುವೆ, ಬೇರೆ ಯಾವುದೇ ವಕೀಲರಿಗೆ ವಾದ ಮಂಡಿಸಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಪೀಠ, ಸರಕಾರದ ಅಧಿಸೂಚನೆಗೆ ತಡೆ ನೀಡಿ, ಅರ್ಜಿ ವಿಚಾರಣೆ ಮುಂದೂಡಿತು.

ಅರ್ಜಿದಾರರ ಮನವಿ:

ಕಾರ್ಮಿಕರು ಅಥವಾ ನೌಕರರ ಆರೋಗ್ಯ ಯೋಗಕ್ಷೇಮ, ಸುರಕ್ಷತೆ ಕೆಲಸದ ಅವಧಿ, ವಾರದ ರಜೆ, ಒಟ್ಟು ರಜೆ ದಿನಗಳು, ವೇತನ ಸಹಿತ ರಜೆ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಈಗಾಗಲೇ ಅನೇಕ ಕಾಯ್ದೆ-ಕಾನೂನುಗಳಿದ್ದು ಅದರಂತೆ ಉದ್ದಿಮೆ, ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿವೆ. ಈಗ ಏಕಾಏಕಿ ಮಹಿಳಾ ನೌಕರರಿಗೆ ತಿಂಗಳಿಗೆ ಒಂದು ದಿನ ವೇತನಸಹಿತ ಋತುಚಕ್ರ ರಜೆ ಸೌಲಭ್ಯ ಒದಗಿಸಲು ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದರಿಂದ, ಉದ್ದಿಮೆಗಳ ಕಾರ್ಯನಿರ್ವಹಣೆಯಲ್ಲಿ ಅಡಚಣೆ ಆಗಲಿದ್ದು, ಆರ್ಥಿಕ ಹೊರೆ ಸಹ ಬೀಳಲಿದೆ. ಕಾಯ್ದೆಗೆ ತಿದ್ದುಪಡಿ ಇಲ್ಲದೆ, ಕಾರ್ಯಕಾರಿ ಆದೇಶದ ಮೂಲಕ ಇಂತಹ ಸೌಲಭ್ಯ ಜಾರಿಗೊಳಿಸಲು ಅವಕಾಶವಿಲ್ಲ. ಇದೊಂದು ಕಾನೂನುಬಾಹಿರ ಮತ್ತು ಏಕಪಕ್ಷೀಯ ಕ್ರಮವಾಗಿದ್ದು, ಸರಕಾರದ ಅಧಿಸೂಚನೆ ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಕೇರಳ ಇನ್ನು ಮುಂದೆ “ಕೇರಳಂ” – ಮರುನಾಮಕರಣಕ್ಕೆ ಕೇಂದ್ರ ಸಚಿವ ಸಂಪುಟ ಸಜ್ಜು !?

ತಾಲೂಕು, ಬೆಳ್ತಂಗಡಿ

ಉರುವಾಲು : ಶಿವಾಜಿನಗರ ಶ್ರೀ ಮಹಮ್ಮಾಯಿ ದೇವಸ್ಥಾನದ ಪ್ರತಿಷ್ಠಾ ಮಹೋತ್ಸವಕ್ಕೆ ಚಪ್ಪರ ಮುಹೂರ್ತ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕುಂದುಕೊರತೆ ಸಭೆ – ಕಾರ್ಮಿಕ ಸಂಕಷ್ಟಕ್ಕೆ ಪರಿಹಾರಕ್ಕೆ ಅಧಿಕಾರಿಗೆ ಸೂಚಿಸಿದ ಶಾಸಕ ಹರೀಶ್ ಪೂಂಜ

⚠️ Contents are protected on this website.