ಹೊಸದಲ್ಲಿ, ಜ. 26 : 77ನೇ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿರುವ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್, ಭಾರತದ ಸೇನಾ ಸಾಮರ್ಥ್ಯ ಕಂಡು ಬೆರಗಾಗಿದ್ದಾರೆ. ಕರ್ತವ್ಯ ಪಥದಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಸಶಸ್ತ್ರ ಪಡೆಗಳ ಕವಾಯತು ವೀಕ್ಷಿಸಿದ ಇಯು ಮುಖ್ಯಸ್ಥೆ, ಭಾರತದ ಅಗಾಧ ಮಿಲಿಟರಿ ಸಾಮರ್ಥ್ಯವನ್ನು ಕೊಂಡಾಡಿದ್ದಾರೆ.
ಈ ಕುರಿತು ತಮ್ಮ ಅಧಿಕೃತ ಎಕ್ಸ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿರುವ ಉರ್ಸುಲಾ ವಾನ್ ಡೆರ್ ಲೇಯೆನ್, “ಗಣರಾಜ್ಯೋತ್ಸವದ ಮುಖ್ಯ ಅತಿಥಿಗಳಾಗಿ ಭಾಗವಹಿಸುವುದು ಜೀವಮಾನದ ಗೌರವ. ಯಶಸ್ವಿ ಭಾರತವು ಜಗತ್ತನ್ನು ಹೆಚ್ಚು ಸ್ಥಿರ, ಸಮೃದ್ಧ ಮತ್ತು ಸುರಕ್ಷಿತಗೊಳಿಸುತ್ತದೆ. ಇದರಿಂದ ನಾವೆಲ್ಲರೂ ಪ್ರಯೋಜನ ಪಡೆಯುತ್ತೇವೆ” ಎಂದು ಹೇಳಿದ್ದಾರೆ.
ಭಾರತಕ್ಕೆ ಮೂರು ದಿನಗಳ ಭೇಟಿಯಲ್ಲಿರುವ ವಾನ್ ಡೆರ್ ಲೇಯೆನ್, ಭಾರತದ ಗಣರಾಜ್ಯೋತ್ಸವದ ಆಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿರವುದನ್ನು “ಜೀವನದ ಗೌರವ” ಎಂದು ಹೇಳಿದ್ದಾರೆ. ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಕೂಡ ಭಾರತದ 77ನೇ ಗಣರಾಜ್ಯೋತ್ಸವದ ಮುಖ್ಯ ಅತಿಥಿಗಳಾಗಿದ್ದರು. ಇತ್ತೀಚಿಗೆ ಇಯು ಮುಖ್ಯಸ್ಥೆ, ದಾವೋಸ್‌ನಲ್ಲಿ ಮಾತನಾಡುತ್ತಾ, “ಭಾರತ-ಇಯು ವ್ಯಾಪಾರ ಒಪ್ಪಂದ ಎಲ್ಲಾ ಒಪ್ಪಂದಗಳ ಮಹಾತಾಯಿ” ಎಂದು ಕರೆದಿದ್ದರು. ಈ ಹೇಳಿಕೆ ಭಾರತಕ್ಕೆ ಯುರೋಪಿಯನ್ ಒಕ್ಕೂಟ ನೀಡುವ ಮಹತ್ವಕ್ಕೆ ಸಾಕ್ಷಿ ಒದಗಿಸಿತ್ತು. ಉರ್ಸುಲಾ ವಾನ್ ಡೆರ್ ಲೇಯೆನ್ ಅವರು, ನಿರಂತರವಾಗಿ ಭಾರತವನ್ನು ಹೊಗಳುತ್ತಿದ್ದಾರೆ.
ಯುರೋಪಿಯನ್ ಒಕ್ಕೂಟವು ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರರಾಗಿದ್ದು, ದ್ವಿಪಕ್ಷೀಯ ವ್ಯಾಪಾರವು 2023-24ರ ಹಣಕಾಸು ವರ್ಷದಲ್ಲಿ 135 ಶತಕೋಟಿ ಅಮೆರಿಕನ್ ಡಾಲರ್ ಮೌಲ್ಯವನ್ನು ಹೊಂದಿದೆ. ಇಯು ಮತ್ತು ಭಾರತದ ನಡುವೆ 2007ರಲ್ಲಿ ಮುಕ್ತ ವ್ಯಾಪಾರ ಒಪ್ಪಂದ ಮಾತುಕತೆಗಳು ಆರಂಭವಾಗಿದ್ದು, 2013ರಲ್ಲಿ ಮಾತುಕತೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ 2022ರಲ್ಲಿ ಮಾತುಕತೆಗಳು ಮತ್ತೆ ನಡೆಯತೊಡಗಿವೆ. ಇಯುದಿಂದ ಆಮದು ಮಾಡಿಕೊಳ್ಳುವ ಕಾರುಗಳ ಮೇಲಿನ ಸುಂಕ ಇಳಿಸಲು ಭಾರತ ನಿರ್ಧಾರ ಮಾಡಿದ್ದು, ಬಹುಶಃ ಸುಂಕಗಳು ಶೇ. 110ರಿಂದ ಶೇ.40ಕ್ಕೆ ಇಳಿಕೆ ಕಾಣುವ ಸಾಧ್ಯತೆ ಇದೆ. “27 ರಾಷ್ಟ್ರಗಳ ಒಕ್ಕೂಟದಿಂದ 15,000 ಯುರೋಗಳಿಗಿಂತ ಹೆಚ್ಚು (17,739 ಅಮೆರಿಕನ್ ಡಾಲರ್) ಆಮದು ಬೆಲೆಯನ್ನು ಹೊಂದಿರುವ ಸೀಮಿತ ಸಂಖ್ಯೆಯ ಕಾರುಗಳ ಮೇಲಿನ ತೆರಿಗೆಯನ್ನು, ತಕ್ಷಣವೇ ಕಡಿಮೆ ಮಾಡಲು ಭಾರತ ಸರ್ಕಾರ ಒಪ್ಪಿಕೊಂಡಿದೆ” ಎಂದು ರಾಯಿಟರ್ಸ್ ವರದಿ ಮಾಡಿದೆ.
ನಾಳೆ (ಜ.27-ಮಂಗಳವಾರ) ಪ್ರಧಾನಿ ಮೋದಿ ಮತ್ತು ಇಯು ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಅವರ ನೇತೃತ್ವದಲ್ಲಿ ನವದೆಹಲಿಯಲ್ಲಿ ಭಾರತ-ಇಯು ವ್ಯಾಪಾರ ಒಪ್ಪಂದ ಮಾತುಕತೆಗಳು ನಡೆಯಲಿವೆ.

