ಚಂಡೀಗಢ : ತನಗಿಂತ ಯಾರು ಕೂಡಾ ಸುಂದರವಾಗಿ ಕಾಣಬಾರದೆಂಬ ಅಸೂಯೆಯಿಂದ 6 ವರ್ಷದ ಪುಟ್ಟ ಬಾಲಕಿಯನ್ನು ರಾಕ್ಷಸಿ ಮನೋಪ್ರವೃತ್ತಿಯ ಮಹಿಳೆಯೋರ್ವಳು ಹತ್ಯೆ ಮಾಡಿರುವ ಘಟನೆ ಹರಿಯಾಣದ ಪಾಣಿಪತ್‌ನಲ್ಲಿ ನಡೆದಿದೆ. ವಿಧಿ (6) ಕೊಲೆಯಾದ ಮಗು ಎಂದು ಗುರುತಿಸಲಾಗಿದೆ.
ಆರೋಪಿ ಮಹಿಳೆ ತನ್ನ 6 ವರ್ಷದ ಸೊಸೆಯನ್ನೇ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿ ಪೂನಂ ತನ್ನ ಸೊಸೆಯನ್ನು ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾಳೆ. 2023 ರಲ್ಲಿ ತನ್ನ ಮಗು ಸೇರಿ ಮೂವರು ಮಕ್ಕಳನ್ನು ಈಕೆ ಕೊಲೆ ಮಾಡಿದ್ದಳು. ಅವರನ್ನು ಕೂಡಾ ಇದೇ ರೀತಿಯಲ್ಲಿ ನೀರಿನಲ್ಲಿ ಮುಳುಗಿಸಿ ಹತ್ಯೆಗೈದಿದ್ದಳು. ಪಾಣಿಪತ್‌ನ ಇಸ್ರಾನಾ ಪ್ರದೇಶದ ನೌಲ್ತಾ ಗ್ರಾಮಕ್ಕೆ ತಮ್ಮ ಕುಟುಂಬದ ಜೊತೆ ಸಂಬಂಧಿಕರ ಮದುವೆಗೆ ಆಗಮಿಸಿದ್ದಳು ಆರೋಪಿ ಮಹಿಳೆ.
ಮದುವೆ ಮನೆಯಲ್ಲಿ ಬಾಲಕಿ ವಿಧಿ ಕಾಣೆಯಾಗಿದ್ದಳು. ಕುಟುಂಬಸ್ಥರು ಆತಂಕದಿಂದ ಎಲ್ಲಾ ಕಡೆ ಹುಡುಕಾಡಿದ್ದಾರೆ. ಅಜ್ಜಿ ತನ್ನ ಸಂಬಂಧಿಕರ ಮನೆಯ ಮೊದಲ ಮಹಡಿಯಲ್ಲಿರುವ ಸ್ಟೋರ್ ರೂಂ ಗೆ ಹೋಗಿ ನೋಡಿದಾಗ ಬಾಲಕಿ ಶವ ಪತ್ತೆಯಾಗಿದೆ. ಆರೋಪಿ ಮಹಿಳೆ ಪೂನಂ ತನಗಿಂತ ಯಾರು ಕೂಡಾ ಚೆನ್ನಾಗಿ ಕಾಣಬಾರದು ಎಂದು ಬಯಸಿದ್ದಳು. ಚಿಕ್ಕ ಮಕ್ಕಳು ಮತ್ತು ಸುಂದರ ಹುಡುಗಿಯರನ್ನೇ ಟಾರ್ಗೆಟ್ ಮಾಡಿ ಕೊಲ್ಲುತ್ತಿದ್ದಳು ಎನ್ನಲಾಗಿದೆ. ಈಕೆ ತಾನು ಹೆತ್ತ ಮಗನನ್ನು ಈ ರೀತಿಯೇ ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಕೊಂದಿದ್ದಳು ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.
ಪೂನಂ 2023 ರಲ್ಲಿ ತನ್ನ ಅತ್ತಿಗೆಯ ಮಗಳನ್ನೇ ಕೊಂದಿದ್ದಳು. ಅದೇ ವರ್ಷ ತನ್ನ ಮಗನನ್ನು ನೀರಿನಲ್ಲಿ ಮುಳುಗಿಸಿ ಕೊಂದಿದ್ದಳು. ಈ ವರ್ಷದ ಆಗಸ್ಟ್‌ನಲ್ಲಿ ಪೂನಂ ಸಿವಾ ಗ್ರಾಮದಲ್ಲಿ ಇನ್ನೋರ್ವ ಹುಡುಗಿಯನ್ನು ಕೊಲೆ ಮಾಡಿದ್ದಳು. ಈ ಎಲ್ಲಾ ಪ್ರಕರಣಗಳಲ್ಲಿ ಇದೊಂದು ಆಕಸ್ಮಿಕ ಸಾವು ಎನ್ನುವ ರೀತಿಯಲ್ಲಿ ಬಿಂಬಿಸಲಾಗಿತ್ತು.

