ಮಂಗಳೂರು, ಆ. 6 : ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮತ್ತೊಬ್ಬ ಆರೋಪಿಯನ್ನು ಎನ್‌ಐಎ ಅಧಿಕಾರಿಗಳು ಕೇರಳದ ಕೊಚ್ಚಿಯಲ್ಲಿ ಬಲೆಗೆ ಕೆಡವಿದ್ದಾರೆ.
ತಲೆಮರೆಸಿಕೊಂಡ ಆರೋಪಿಗಳೆಂದು ಘೋಷಿಸಲ್ಪಟ್ಟಿದ್ದ ಸುಳ್ಯ ತಾಲೂಕಿನ ಕಲ್ಲುಮುಟ್ಟು ನಿವಾಸಿ ಉಮರ್ ಫಾರೂಕ್ ನನ್ನು ಕೊಚ್ಚಿಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ. 2022ರ ಜುಲೈ 26ರಂದು ರಾತ್ರಿ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆಯಾಗಿತ್ತು. ಪಿಎಫ್‌ಐ ಸಂಘಟನೆ ಕಾರ್ಯಕರ್ತರು ಹಿಂದು ನಾಯಕರ ಹತ್ಯೆ ಸಂಚಿನ ಭಾಗವಾಗಿ ಪ್ರವೀಣ್ ಕೊಲೆ ಮಾಡಿದ್ದರು ಎಂದು ಎನ್‌ಐಎ ತನಿಖೆಯಲ್ಲಿ ತಿಳಿಸಿತ್ತು. ಪ್ರಕರಣದಲ್ಲಿ 20ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದು ಆರು ಮಂದಿ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದರು. ಅವರ ಪತ್ತೆಗಾಗಿ ಮಾಹಿತಿ ಕೊಟ್ಟವರಿಗೆ ತಲಾ ಎರಡು ಲಕ್ಷದ ಬಹುಮಾನ ಘೋಷಿಸಲಾಗಿತ್ತು.
ಒಬ್ಬೊಬ್ಬರನ್ನೇ ಎನ್‌ಐಎ ಬಲೆಗೆ ಕೆಡವಿದ್ದು ಇತ್ತೀಚೆಗೆ ಜುಲೈ 11ರಂದು ಇಬ್ಬರು ಆರೋಪಿಗಳಾದ ನೌಷದ್ ಹಾಗು ನಾಸೀರ್ ನನ್ನು ಎನ್‌ಐಎ ಬಂಧಿಸಿತ್ತು. ವಿಚಾರಣೆ ಸಂದರ್ಭದಲ್ಲಿ ಉಮ್ಮರ್ ಫಾರೂಕ್ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳ ತಂಡ ಕೇರಳದ ಕೊಚ್ಚಿಯಲ್ಲಿ ಅಡಗಿ ಕುಳಿತಿದ್ದ ಉಮ್ಮರ್ ಫಾರೂಕ್ ನನ್ನು ಸೆರೆಹಿಡಿದಿದೆ. ಕೃತ್ಯ ಎಸಗಿದ ಪ್ರಮುಖ ಆರೋಪಿಗಳಿಗೆ ತಲೆಮರೆಸಿಕೊಳ್ಳಲು ಉಮ್ಮರ್ ಫಾರೂಕ್ ಸಹಕರಿಸಿದ್ದ ಎನ್ನಲಾಗಿದ್ದು ಈ ಹಿನ್ನೆಲೆಯಲ್ಲಿ ಪ್ರಕರಣದ 13ನೇ ಆರೋಪಿಯೆಂದು ಗುರುತಿಸಲಾಗಿತ್ತು. ಎರಡು ವರ್ಷ ತಲೆಮರೆಸಿಕೊಂಡ ಬಳಿಕ ಕೊಚ್ಚಿಯಲ್ಲಿ ವಾಸ್ತವ್ಯ ಹೂಡಿ ಅಲ್ಲಿಯೇ ಕೆಲಸಕ್ಕೂ ಸೇರಿಕೊಂಡಿದ್ದ ಎನ್ನುವ ಮಾಹಿತಿ ಲಭಿಸಿದೆ.


