ಬೆಂಗಳೂರು, ಅ. 19 : ಕಳೆದ ಆರು ತಿಂಗಳಿನಿಂದ ವಿಧವಾ ವೇತನ ಮತ್ತು ವೃದ್ಧಾಪ್ಯ ಹಣ ಫಲಾನುಭವಿಗಳ ಕೈಸೇರಿಲ್ಲ. ಪೆನ್ಷನ್ ಹಣವನ್ನೇ ನಂಬಿಕೊಂಡಿದ್ದ ಎಷ್ಟೋ ವಯೋವೃದ್ದರು ಸರ್ಕಾರ ಬಾಕಿ ಹಣವನ್ನು ಯಾವಾಗ ಕೊಡುತ್ತದೋ ಎಂದು ಕಾಯುತ್ತಾ ಕೂರುವ ಪರಿಸ್ಥಿತಿ ಎದುರಾಗಿದೆ.
ಇಳಿ ವಯಸ್ಸಿನಲ್ಲಿ ನೆಮ್ಮದಿಯಿಂದ ಬದುಕಬೇಕಾದ ಹಿರಿಯ ಜೀವಗಳಿಗೆ ಈಗ ಜೀವನ ನಡೆಸುವುದೇ ಸವಾಲಾಗಿದೆ. ತಿಂಗಳಿಗೆ ಬರುತ್ತಿದ್ದ ಅಲ್ಪ ಮೊತ್ತದ ವೃದ್ಧಾಪ್ಯ ವೇತನ ಮತ್ತು ವಿಧವಾ ವೇತನವೇ ಇವರಿಗೆ ಜೀವನಾಧಾರವಾಗಿತ್ತು. ಔಷಧಿ ಖರ್ಚಿಗೆ ಅದೇ ಆಸರೆಯಾಗಿತ್ತು. ಆದರೆ, ಕಳೆದ ಆರು ತಿಂಗಳಿಂದ ಆ ಹಣವೂ ಕೈ ಸೇರಿಲ್ಲ ಎಂದು ಹಿರಿಯ ನಾಗರಿಕರು ಆತಂಕಗೊಂಡಿದ್ದಾರೆ.
ಇನ್ನು ಈ ಪೆನ್ಷನ್‌ಗಾಗಿ ಬ್ಯಾಂಕ್‌ಗೆ ಹೋಗಿ ಕೇಳಿದರೂ ಉತ್ತರ ಇಲ್ಲ. ಅಂಚೆ ಕಚೇರಿಗೆ ಅಲೆದರೂ ಹಣವಿಲ್ಲ. ಅಧಿಕಾರಿಗಳ ಬಳಿ ವಿಚಾರಿಸಿದರೂ ಸ್ಪಷ್ಟನೆ ಸಿಗುತ್ತಿಲ್ಲ ಎಂದು ವೃದ್ಧರು ಅಸಮಾಧಾನ ಹೊರಹಾಕಿದ್ದಾರೆ.
ಇನ್ನು ಕೆಲ ಹಿರಿಯ ನಾಗರಿಕರು ಹಿಂದಿನ ದಿನಗಳನ್ನು ನೆನಪಿಸಿಕೊಂಡು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಪ್ರತಿ ತಿಂಗಳು ವೃದ್ಧಾಪ್ಯ ವೇತನ ಮತ್ತು ವಿಧವಾ ವೇತನ ಬರುತ್ತಿತ್ತು. ಆದರೆ, ಈಗ ಪಿಂಚಣಿ ಸರಿಯಾಗಿ ಬರುತ್ತಿಲ್ಲ ಅನ್ನೋದು ಇವರ ಆರೋಪ.
ಇನ್ನೊಂದೆಡೆ, ರಾಜ್ಯದ ಆರ್ಥಿಕ ಪರಿಸ್ಥಿತಿ ಮತ್ತು ಖಜಾನೆಯಲ್ಲಿ ಹಣದ ಕೊರತೆಯೇ ಪಿಂಚಣಿ ವಿಳಂಬಕ್ಕೆ ಕಾರಣವೇ ಎಂಬ ಪ್ರಶ್ನೆಯೂ ಎದುರಾಗಿದೆ. ಆದರೆ, ಈ ಬಗ್ಗೆ ಸರ್ಕಾರದ ಅಧಿಕೃತ ಸ್ಪಷ್ಟನೆ ಅಗತ್ಯವಿದೆ. ಜೀವನದ ಸಂಧ್ಯಾಕಾಲದಲ್ಲಿ ನೆಮ್ಮದಿಯಿಂದ ಬದುಕಬೇಕಾದ ಹಿರಿಯ ಜೀವಗಳು ಇಂದು ಹಣಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆಯುವಂತಾಗಿದೆ.

