ಬೆಂಗಳೂರು, ಆ. 22 : ಪನ್ನೀರ್ ಪ್ರಿಯರಿಗೆ ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅತ್ಯಂತ ಮಹತ್ವದ ಹೆಜ್ಜೆ ಇಟ್ಟಿದೆ. ಕೃತಕ ‘ಅನಲಾಗ್ ಪನ್ನೀರ್’ ಬಳಕೆಯನ್ನು ಒಂದು ವರ್ಷದ ಅವಧಿಗೆ ಸಂಪೂರ್ಣವಾಗಿ ನಿಷೇಧಿಸಿ ಅಧಿಕೃತ ಆದೇಶ ಹೊರಡಿಸಿದೆ.
ಸಾಮಾನ್ಯವಾಗಿ ಅಸಲಿ ಪನ್ನೀರ್ ಅನ್ನು ಸಂಪೂರ್ಣವಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳಿಂದ ತಯಾರಿಸಲಾಗುತ್ತದೆ. ಆದರೆ, ವೆಚ್ಚ ಕಡಿಮೆ ಮಾಡಲು ಮತ್ತು ಹೆಚ್ಚಿನ ಲಾಭ ಗಳಿಸಲು ಹಲವು ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳು ಹಾಲಿನ ಬದಲು ಸಸ್ಯಜನ್ಯ ಎಣ್ಣೆ, ಪಿಷ್ಟ ಹಾಗೂ ಕೆಮಿಕಲ್‌ಗಳನ್ನು ಬಳಸಿ ತಯಾರಿಸಿದ ‘ಅನಲಾಗ್ ಪನ್ನೀರ್’ ಅನ್ನು ತಯಾರಿಸುತ್ತಿದ್ದವು. ಈ ರೀತಿ ಕೃತಕವಾಗಿ ತಯಾರಿಸುವ ಪನ್ನೀರ್ ಅನ್ನು ಗ್ರಾಹಕರಿಗೆ ನೀಡುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಕೃತಕ ಪನ್ನೀರ್‌ನಲ್ಲಿ ಬಳಸುವ ರಾಸಾಯನಿಕಗಳು ಮತ್ತು ಗುಣಮಟ್ಟವಿಲ್ಲದ ಕೊಬ್ಬಿನಾಂಶ ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತಿವೆ. ಆಹಾರ ಸುರಕ್ಷತಾ ಕಾಯ್ದೆಯಡಿ ಹಾಲಿನ ಉತ್ಪನ್ನವಲ್ಲದ ಕೃತಕ ವಸ್ತುವನ್ನು ‘ಪನ್ನೀರ್’ ಹೆಸರಿನಲ್ಲಿ ಗ್ರಾಹಕರಿಗೆ ನೀಡುವುದು ಕಾನೂನುಬಾಹಿರ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ರಾಜ್ಯಾದ್ಯಂತ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದೆ. ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಇನ್ನು ಮುಂದೆ ಪನ್ನೀರ್ ತಯಾರಿಕೆಗೆ ಕಡ್ಡಾಯವಾಗಿ ಶುದ್ಧ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನಷ್ಟೇ ಬಳಸಬೇಕು. ಯಾವುದೇ ಕಾರಣಕ್ಕೂ ಕೃತಕ ಅನಲಾಗ್ ಪನ್ನೀರ್ ಬಳಸಬಾರದು.
ಇಲಾಖೆಯ ಅಧಿಕಾರಿಗಳು ರಾಜ್ಯದ ವಿವಿಧ ಹೋಟೆಲ್, ರೆಸ್ಟೋರೆಂಟ್ ಹಾಗೂ ಡೈರಿಗಳ ಮೇಲೆ ವಿಶೇಷ ದಾಳಿ ನಡೆಸಲಿದ್ದಾರೆ. ನಿಯಮ ಉಲ್ಲಂಘಿಸುವವರ ವಿರುದ್ಧ ಆಹಾರ ಸುರಕ್ಷತಾ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.




